SUDDIKSHANA KANNADA NEWS/ DAVANAGERE/ DATE:05-12-2024
ದಾವಣಗೆರೆ : ಪ್ರಸ್ತುತ ತಾಂತ್ರಿಕತೆಯಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಮತ್ತು ನಾವಿನ್ಯ ಚಿಂತನೆಯ ಪ್ರತಿಭಾ ಪ್ರದರ್ಶಿಸಲು ಮುಕ್ತ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜಿಎಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶನಾಲಯ ಮತ್ತು ತಾಂತ್ರಿಕ ಸಮುದಾಯ ವಿಭಾಗದ ವತಿಯಿಂದ ಇದೇ ಡಿಸೇಂಬರ್ 6 ಮತ್ತು 7 ರಂದು ತಾಂತ್ರಿಕತೆಯ ಕಲಿಕಾ, ಪ್ರತಿಭಾ ಕೌಶಲ್ಯದ ಹಬ್ಬವಾಗಿರುವ ಇಗ್ನಿಟ್ರಾನ್ 2k24 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ನಗರದ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಲ್ಲಿ ಜಿಎಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶನಾಲಯದ ಉಪ ನಿರ್ದೇಶಕರಾದ ಎಸ್.ಟಿ. ಮಾರುತಿ ಮಾಹಿತಿ ನೀಡುತ್ತಾ, ಡಿಸೆಂಬರ್ 6ರ ಬೆಳಗ್ಗೆ 11 ಗಂಟೆಗೆ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿನ ಜಿಎಂ ಹಾಲಮ್ಮ ಸಭಾಂಗಣದಲ್ಲಿ ಇಗ್ನಿಟ್ರಾನ್ 2k24 ನ ಕಾರ್ಯಕ್ರಮವನ್ನು ಡಿಎಕ್ಸ್ ಸಿ ಲಕ್ಸ್ಫ್ಟ್ ಇಂಜಿನಿಯರಿಂಗ್ ನಿರ್ದೇಶಕರಾದ ಬ್ರಹ್ಮಚೈತನ್ಯ ಚಿನ್ನಿವರ್ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಜಿಎಂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಜಿ.ಎಂ. ಲಿಂಗರಾಜು, ಜಿಎಂ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್.ಆರ್. ಶಂಕಪಾಲ್, ಸಹ ಕುಲಪತಿ ಡಾ. ಹೆಚ್.ಡಿ. ಮಹೇಶಪ್ಪ, ಕುಲಸಚಿವರಾದ ಡಾ. ಬಿ.ಎಸ್. ಸುನಿಲ್ ಕುಮಾರ್ ಭಾಗವಹಿಸುವರು ಎಂದು ತಿಳಿಸಿದರು.
ಪ್ರಸ್ತುತ ತಂತ್ರಜ್ಞಾನ ಯುಗವಾಗಿದ್ದು, ಈ ತಂತ್ರಜ್ಞಾನ ಮುಖೇನ ಪ್ರಸ್ತುತತೆಯ ಶಿಕ್ಷಣದಲ್ಲಿನ ಸಮಸ್ಯೆಗಳ ಪರಿಹಾರ ಸೇರಿದಂತೆ ಕೆಲ ಸಾಮಾಜಿಕ ತಾಂತ್ರಿಕತೆಯ ಅಗತ್ಯತೆಗೆ ಪೂರಕವಾದ ವಿಷಯಗಳಲ್ಲಿ ತಾಂತ್ರಿಕತೆಯ ಬೆಳಕು ಚೆಲ್ಲಲು ನಾವಿನ್ಯತೆಯ ಪ್ರತಿಭೆ ಪ್ರದರ್ಶಿಸಲು ಯುವ ಸಮೂಹಕ್ಕೆ ಇಗ್ನಿಟ್ರಾನ್ 2k24 ಉತ್ತಮ ವೇದಿಕೆಯಾಗಿದೆ. ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಬೆಂಗಳೂರು, ತುಮಕೂರು, ಹಾಸನ, ಮಂಗಳೂರು, ಧಾರವಾಡ, ಶಿವಮೊಗ್ಗ, ಹಾವೇರಿ, ಹೊಸಪೇಟೆ, ಬೆಳಗಾವಿ, ಮೈಸೂರು ಜಿಲ್ಲೆಗಳ ಸುಮಾರು 22 ಕಾಲೇಜುಗಳಿಂದ 800ಕ್ಕೂ ಅಧಿಕ ಇಂಜಿನಿಯರಿಂಗ್ ಸೇರಿದಂತೆ ಪದವಿ ವಿದ್ಯಾರ್ಥಿಗಳು ಭಾಗವಹಿಸುವರು ಎಂದರು.
ಇಗ್ನಿಟ್ರಾನ್ 2k24 ಪ್ರಯುಕ್ತ 9 ವಿವಿಧ ಸ್ಪರ್ಧೆಗಳು ನಡೆಯಲಿದ್ದು, ಡಿಸೇಂಬರ್ 6 ರ ಬೆಳಿಗ್ಗೆ 9ರಿಂದ ಡಿ. 7ರ ಬೆಳಿಗ್ಗೆ 9ರವರೆಗೂ ಅಂದರೆ ಸತತವಾಗಿ 24 ಗಂಟೆಗಳ ಕಾಲ “ಹ್ಯಾಕಥಾನ್” ನಡೆಯಲಿದ್ದು, 42 ತಂಡಗಳು, 168 ಸ್ಪರ್ಧಿಗಳು ಭಾಗವಹಿಸಲಿದ್ದು, ಶಿಕ್ಷಣದಲ್ಲಿನ ಸಮಸ್ಯೆಗಳ ಪರಿಹಾರ ಸೇರಿದಂತೆ ಸಾಮಾಜಿಕ ಉಪಯುಕ್ತತತೆಯ ವಿಷಯಗಳ ಕುರಿತು ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಾಂತ್ರಿಕ ನಾವಿನ್ಯತೆಯ ಯೋಜನೆಗಳ ಸಿದ್ಧಪಡಿಸುವ ಸ್ಪರ್ಧೆ ಇದಾಗಿದೆ. ಇದರಲ್ಲಿ ವಿಜೇತ ತಂಡಕ್ಕೆ ಪ್ರಥಮ ಬಹುಮಾನವಾಗಿ 25 ಸಾವಿರ ನಗದು ಮತ್ತು ರನ್ನರ್ ಅಪ್ ತಂಡಕ್ಕೆ 15,000 ನಗದು ಬಹುಮಾನ ನೀಡಲಾಗುವುದು ಎಂದರು.
ತಾಂತ್ರಿಕತೆಯ ಬಳಕೆ ಮತ್ತು ಅಭಿವೃದ್ಧಿಗೆ ಪೂರಕವಾಗುವಂತೆ ಸ್ವಂತಿಕೆಯ ನಾವಿನ್ಯ ಕಲ್ಪನೆಯನ್ನು ಪ್ರದರ್ಶಿಸುವ ಸ್ಪರ್ಧೆಯಾಗಿರುವ “ಐಡಿಯಾಥಾನ್” ನಲ್ಲಿ 43 ತಂಡಗಳಿಂದ 172 ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭಾಗವಹಿಸುವರು. ಕ್ರಿಯಾಶೀಲತೆ ಮತ್ತು ಸಮಸ್ಯೆಗಳ ಪರಿಹಾರದ ಕೌಶಲ್ಯ ಅಭಿವೃದ್ಧಿ ಹೆಚ್ಚಿಸಲು “ಡಾಟಾ ಹಂಟ್” ಎಂಬ ಮೋಜಿನ ಸ್ಪರ್ಧೆಗೆ 27 ತಂಡಗಳಿಂದ 108 ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭಾಗವಹಿಸುವರು. ತಂತ್ರಜ್ಞಾನ ಆಧಾರಿತವಾಗಿ ಪೋಸ್ಟರ್ ವಿನ್ಯಾಸಗಳ ತಯಾರಿಸುವ ಸ್ಪರ್ಧೆಯಾಗಿರುವ “ಪೋಸ್ಟರ್ ಪ್ರಸಂಟೇಷನ್” ನಲ್ಲಿ 29 ತಂಡಗಳಿಂದ 58 ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭಾಗವಹಿಸುವರು. ಬಿಸಿಎ ವಿದ್ಯಾರ್ಥಿಗಳಿಗಾಗಿ “psycury” ಎಂಬ ಮೋಜಿನ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, 7 ತಂಡಗಳಿಂದ 14 ಸ್ಪರ್ಧಿಗಳು ಭಾಗವಹಿಸುವರು. ಆನ್ಲೈನ್ ಕ್ರೀಡೆ ಆಗಿರುವ “ಇ-ಸ್ಪೋರ್ಟ್ಸ್” ಸ್ಪರ್ಧೆಯಲ್ಲಿ 57 ತಂಡಗಳಿಂದ 180 ಸ್ಪರ್ಧಿಗಳು ಭಾಗವಹಿಸುವರು ಎಂದರು.
ಡಿಸೇಂಬರ್ 7ರಂದು ರೋಬೋಟಿಕ್ ವಿದ್ಯಾರ್ಥಿಗಳಿಗಾಗಿ “ರೋಬೊ ಕ್ವೆಸ್ಟ್” ಇದ್ದು, ರೋಬೋಟ್‌ಗಳು ಅಭಿವೃದ್ಧಿ, ಸರಿಯಾದ ಚಲನೆಯ ಸ್ಪರ್ಧೆಯಾಗಿದೆ. ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಿಗಾಗಿ ಕಣ್ಣು ಮುಚ್ಚಿಕೊಂಡು ಕೋಡಿಂಗ್ ಮಾಡುವ “ಬ್ಲೈಂಡ್ ಕೋಡ್” ಸ್ಪರ್ಧೆ ಇದೆ. ತಾಂತ್ರಿಕ ಸಮಸ್ಯೆ ಮತ್ತು ಪರಿಹಾರ ಕುರಿತು ಚರ್ಚೆ ನಡೆಸಲು “ಟೆಕ್ ಡಿಬೇಟ್” ಹಮ್ಮಿಕೊಳ್ಳಲಾಗಿದೆ. ಕೊನೆಯ ದಿನವಾದ ಡಿಸೇಂಬರ್ 7ರ ಮಧ್ಯಾಹ್ನ 3 ಗಂಟೆಗೆ ಇಗ್ನಿಟ್ರಾನ್ (IGNITRON) 2k24 ಕಾರ್ಯಕ್ರಮದ ಸಮಾರೋಪವಿದ್ದು, ಈ ಎಲ್ಲ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಜಿಎಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶನಾಲಯದ ನಿರ್ದೇಶಕರಾದ ಡಾ. ಹೆಚ್.ಎಸ್. ಕಿರಣ್ ಕುಮಾರ್, ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕರಾದ ಪ್ರೊ. ಟಿ.ಆರ್. ತೇಜಸ್ವಿ ಕಟ್ಟಿಮನಿ ಇದ್ದರು.