ದಾವಣಗೆರೆ: “ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಅಡಿಕೆ ನಿಷೇಧ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಅಡಿಕೆ ಬ್ಯಾನ್ ಮಾಡುವ ಸಾಹಸಕ್ಕೆ ಕೈಹಾಕಿದರೆ ರಾಜ್ಯ ಸರ್ಕಾರವೇ ಉಳಿಯುವುದಿಲ್ಲ” ಎಂದು ಮಾಜಿ ಸಂಸದ ಹಾಗೂ ಅಡಿಕೆ ವ್ಯಾಪಾರಿ ಡಾ. ಜಿ. ಎಂ. ಸಿದ್ದೇಶ್ವರ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಗುಟ್ಕಾ ನಿಷೇಧಿಸಿ ಹತ್ತು ವರ್ಷಗಳಾಗಿವೆ. ಆದರೆ ಅಡಿಕೆ ನಿಷೇಧ ಮಾಡಿಲ್ಲ. ಪಾನ್ ಮಸಾಲಾದಲ್ಲಿ ತಂಬಾಕು ಬೆರೆಸಲಾಗುತ್ತಿದೆಯೇ ಎಂಬುದರ ಪರೀಕ್ಷೆ ನಿಯಮಿತವಾಗಿ ನಡೆಯುತ್ತಿದ್ದು, ರೈತರು ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗುವ ಅಗತ್ಯವಿಲ್ಲ” ಎಂದರು.
ರಾಜಕೀಯ ಬಲ ಮತ್ತು ಹೋರಾಟದ ಎಚ್ಚರಿಕೆ:
ಅಡಿಕೆ ಬೆಳೆಯುವ ಜಿಲ್ಲೆಗಳಿಂದ ಒಟ್ಟು 130 ಶಾಸಕರು ಹಾಗೂ 7 ಸಂಸದರು ಜನಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದಾರೆ. ಹೀಗಿರುವಾಗ ಅಡಿಕೆ ಬೆಳೆಗಾರರ ಹಿತಕ್ಕೆ ಧಕ್ಕೆಯಾದರೆ ಇಡೀ ರಾಜ್ಯದಲ್ಲಿ ಬೃಹತ್ ಹೋರಾಟ ನಡೆದು ಅಲ್ಲೋಲ ಕಲ್ಲೋಲ ಸೃಷ್ಟಿಯಾಗಲಿದೆ ಎಂದರು.
ಮಾರುಕಟ್ಟೆ ಮತ್ತು ದರದ ಸ್ಥಿತಿಗತಿ:
ಅಡಿಕೆ ಧಾರಣೆ ಕ್ವಿಂಟಾಲ್‌ಗೆ ಸುಮಾರು 4,000 ರೂ. ನಷ್ಟು ಕಡಿಮೆಯಾಗಿದ್ದರೂ ಪ್ರಸ್ತುತ 48,000 ದಿಂದ 51,000 ರೂ. ನಷ್ಟಿದೆ. ಮಾರುಕಟ್ಟೆಯಲ್ಲಿ ಬೆಲೆ ಏರಿಳಿತ ಸಹಜವಾಗಿದ್ದು, ಗುಟ್ಕಾ ಬ್ಯಾನ್ ವದಂತಿಗಳಿಂದ ಬೆಲೆ ಕುಸಿದಿಲ್ಲ.
ಕೃತಕ ಅಡಿಕೆ ಮತ್ತು ವಿದೇಶಿ ಆಮದಿಗೆ ತಡೆ:
ಚೀನಾದಿಂದ ಬರುತ್ತಿರುವ ಸಿಂಥೆಟಿಕ್ (ಕೃತಕ) ಅಡಿಕೆ ಹಾಗೂ ವಿದೇಶಿ ಕಳಪೆ ಅಡಿಕೆ ಆಮದಿಗೆ ಕೇಂದ್ರ ಸರ್ಕಾರ ತಕ್ಷಣ ತಡೆ ನೀಡಬೇಕು. ಪ್ರತಿಯೊಂದು ಅಡಿಕೆ ವಹಿವಾಟು ಹಳ್ಳಿಗಳಲ್ಲಿ ನಡೆಯುವ ಬದಲು ಎಪಿಎಂಸಿ (APMC) ಮಾರುಕಟ್ಟೆಗಳ ಮೂಲಕವೇ ಅಧಿಕೃತವಾಗಿ ನಡೆಯಬೇಕು ಎಂದು ಅವರು ಆಗ್ರಹಿಸಿದರು.





Leave a comment