SUDDIKSHANA KANNADA NEWS/ DAVANAGERE/ DATE:30-07-2024
ದಾವಣಗೆರೆ: ಲೋಕಸಭೆ ಚುನಾವಣೆಯಲ್ಲಿ ನನ್ನ ಪತ್ನಿ ಹಾಗೂ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಅವರ ಸೋಲಿನಿಂದ ನಾನು ಧೃತಿಗೆಟ್ಟಿಲ್ಲ. ನಾನು ಅಳುವವನಲ್ಲ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರು, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರು ಸೋತ ಬಳಿಕ ನಾನು ಕಣ್ಣೀರು ಹಾಕುತ್ತೇನೆ ಎಂದಿದ್ದಾರೆ. ಜಿಂಕೆ ಕೇಸ್ ಬಂದಾಗ ಯಾರ ಮುಂದೆ ಕಣ್ಣೀರು ಹಾಕಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು ಎಂದು ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರು ಟಾಂಗ್ ನೀಡಿದರು.
ಶಿವಮೊಗ್ಗ ಜಿಲ್ಲೆಯ ಲಕ್ಕವಳ್ಳಿಯ ಭದ್ರಾ ಡ್ಯಾಂಗೆ ಬಾಗೀನ ಸಮರ್ಪಿಸಿದ ಬಳಿಕ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಸೋತ ಬಳಿಕ ಅಳುತ್ತಿದ್ದೇನೆ, ದಿನಕ್ಕೊಂದು ಪ್ರಲಾಪ ಮಾಡುತ್ತಿದ್ದೇನೆ ಎಂಬ ಶಾಮನೂರು ಶಿವಶಂಕರಪ್ಪರ
ಹೇಳಿಕೆಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.
ನಾವು ಮೊದಲಿನಿಂದಲೂ ಜನಸೇವೆ ಮಾಡಿಕೊಂಡು ಬಂದಿದ್ದೇವೆ. ಇಂದೂ ಜನಸೇವೆ ಮಾಡುತ್ತೇವೆ, ಮುಂದೆಯೂ ಮುಂದುವರಿಸುತ್ತೇವೆ. ಜನರ ಕಷ್ಟ, ನೋವು, ನಲಿವಿನಲ್ಲಿ ಭಾಗಿಯಾಗುತ್ತೇವೆ. ನನ್ನ ತಂದೆ ನನಗೆ ಸಂಸ್ಕಾರ ಕಲಿಸಿದ್ದಾರೆ.
ನಾವೂ ಸಂಸ್ಕಾರ ಮುಂದುವರಿಸಿಕೊಂಡು ಬಂದಿದ್ದೇವೆ. ಮೊದಲು ನಿಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸಿ. ಬಿಜೆಪಿಯಲ್ಲಿ ಸಂಸ್ಕಾರವೇ ಮುಖ್ಯ ಎಂದು ಛೇಡಿಸಿದರು.
ವಾರದಲ್ಲಿ ಎರಡರಿಂದ ಮೂರು ದಿನ ದಾವಣಗೆರೆಯಲ್ಲಿ ಇರುತ್ತೇನೆ. ಯಾರಾದರೂ ನನ್ನ ಬಳಿ ಬಂದರೆ ಕೆಲಸ ಇದ್ದರೂ ಮಾಡಿಕೊಡುತ್ತೇನೆ. ನಾಳೆಯೂ ದಾವಣಗೆರೆಯಲ್ಲಿ ಇರುತ್ತೇನೆ. ದೆಹಲಿಯಲ್ಲಿಯೂ ಇದ್ದೆ. ನನ್ನ ಪ್ರಾಮಾಣಿಕ ಪ್ರಯತ್ನ
ಮಾಡುತ್ತೇನೆ. ನೀವೆಲ್ಲರೂ ನಾಲ್ಕು ಬಾರಿ ಚುನಾವಣೆಯಲ್ಲಿ ಗೆಲ್ಲಿಸಿದ್ದೀರಾ. ಲೋಕಸಭೆ ಚುನಾವಣೆಯಲ್ಲಿ ನನ್ನ ಪತ್ನಿಗೆ ಆರು ಲಕ್ಷದ ಹತ್ತು ಸಾವಿರ ಮತಗಳು ಬಂದಿವೆ. ಜಿಲ್ಲೆಯ ಜನರಿಗೆ ಎಂದೆಂದಿಗೂ ಚಿರಋಣಿಯಾಗಿರುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಯಾವ ರೀತಿ ಚುನಾವಣೆಯಲ್ಲಿ ಗೆದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಚುನಾವಣೆ ವೇಳೆ ಯಾರ್ಯಾರು ಯಾವ ರೀತಿ ಕೆಲಸ ಮಾಡಿದರು ಎಂಬುದು ರಾಷ್ಟ್ರ ನಾಯಕರಿಗೆ ಗೊತ್ತಿದೆ. ಅವರ ಮನಃಸಾಕ್ಷಿ ಕೇಳಿಕೊಳ್ಳಲಿ.
ಅಲ್ಲಿಯೇ ಉತ್ತರ ಸಿಗುತ್ತದೆ. ಶಿವಶಂಕರಪ್ಪನವರೇ ಹಗುರವಾಗಿ ಮಾತನಾಡಬೇಡಿ. ನನಗೆ 73 ವರ್ಷ. ನಿಮಗೆ 93 ವರ್ಷ. ನನಗಿಂತ 20 ವರ್ಷ ಹಿರಿಯರು ನೀವು. ನನಗೂ ಸಮಾಜದಲ್ಲಿ ಗೌರವವಿದೆ. ನಾನು ಗೌರವದಿಂದ ನಡೆದುಕೊಳ್ಳುವ ವ್ಯಕ್ತಿ. ಹುಡುಗಾಟಿಕೆ ಮಾತು ಯಾಕೆ? ಈ ರೀತಿ ಮಾತನಾಡುವುದು ಹಿರಿಯರಾದ ಶಾಮನೂರು ಶಿವಶಂಕರಪ್ಪರಿಗೆ ಶೋಭೆ ತರುವುದಲ್ಲ ಎಂದು ಸಿದ್ದೇಶ್ವರ ಕಿಡಿಕಾರಿದರು.