SUDDIKSHANA KANNADA NEWS/ DAVANAGERE/ DATE:10-08-2024
ದಾವಣಗೆರೆ: ಸಿಎಂ ಸಿದ್ದರಾಮಯ್ಯರ ನಾಲ್ಕು ದಶಕಗಳ ರಾಜಕಾರಣ ಪಾರದರ್ಶಕ, ಘನತೆಯಿಂದ ಕೂಡಿದೆ. ಎರಡು ಬಾರಿ ಮುಖ್ಯಮಂತ್ರಿಯಾಗಿ, ಎರಡು ಬಾರಿ ಡಿಸಿಎಂ ಆಗಿ, ಹದಿನೈದು ಬಾರಿ ಬಜೆಟ್ ಮಂಡನೆ ಮಾಡಿರುವ ಸಿದ್ದರಾಮಯ್ಯರು ಭ್ರಷ್ಟಾಚಾರ ರಹಿತದಿಂದಲೇ ಹೆಸರು ಮಾಡಿದವರು. ಅಹಿಂದ ವರ್ಗದ ನಾಯಕನ ವಿರುದ್ಧ ಪಿತೂರಿ ನಡೆಸುತ್ತಿದ್ದು, ಎಲ್ಲರೂ ಒಟ್ಟಾಗಿ ಎದುರಿಸಬೇಕಾದ ಪರಿಸ್ಥಿತಿ ಬಂದಿರುವುದು ಆತಂಕಕಾರಿ ವಿಚಾರ ಎಂದು ಸ್ವಾಭಿಮಾನಿ ಬಳಗದ ಪ್ರಮುಖರೂ ಆದ ಇನ್ಸೈಟ್ಸ್ ಸಂಸ್ಥೆ ಸಂಸ್ಥಾಪಕ ಜಿ. ಬಿ. ವಿನಯ್ ಕುಮಾರ್ ಬೇಸರ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಲ್ವತ್ತು ವರ್ಷಗಳ ಸಿದ್ದರಾಮಯ್ಯರ ರಾಜಕೀಯ ಪಯಣ ಭ್ರಷ್ಟಾಚಾರ ಮುಕ್ತವಾಗಿದೆ. ಸಿದ್ದರಾಮಯ್ಯರ ಜನಪ್ರಿಯತೆ, ಉತ್ತಮ ಆಡಳಿತ ಸಹಿಸದೇ ಬಿಜೆಪಿ – ಜೆಡಿಎಸ್ ಪಾದಯಾತ್ರೆ ನಡೆಸುತ್ತಿದೆ.
ಅಹಿಂದ ವರ್ಗದವರನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ಅಡಗಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯರಂಥ ಮಹಾನ್ ನಾಯಕರನ್ನು ರಾಜಕಾರಣದಿಂದ ಹತ್ತಿಕ್ಕಲು ಹಲವು ಕಾರಣಗಳಿವೆ. ಸಿದ್ಧರಾಮಯ್ಯರಂತಹ ಮೌಲ್ಯಧಾರಿತ ಜನಪರ ಕಾಳಜಿ, ಸಿದ್ದಾಂತ ಆಧಾರಿತ, ಪ್ರಾಮಾಣಿಕರು ಪ್ರಸ್ತುತ ರಾಜಕಾರಣದಲ್ಲಿ ಮುಂದುವರಿದರೆ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ. ಭ್ರಷ್ಟಾಚಾರಿಗಳು, ಬಂಡವಾಳಶಾಹಿಗಳು, ಹಣ, ಅಧಿಕಾರ ದಾಹ ಹಾಗೂ ರಾಜಕೀಯವನ್ನು ಉದ್ದಿಮೆ ಮಾಡಿಕೊಂಡ ಪಾಳೇಗಾರಿಕೆ ಮನಸ್ಥಿತಿಯವರ ಇಷ್ಟಾರ್ಥಗಳು ಈಡೇರಲು ಸಾಧ್ಯವಾಗುವುದಿಲ್ಲ. ಹಾಗಾಗಿ ಇವರನ್ನು ಅಧಿಕಾರದಿಂದ ಕೆಳಗಿಳಿಸಿದರೆ ಎಲ್ಲವೂ ಸಲೀಸಾಗುತ್ತದೆ ಎಂಬ ಭಾವನೆ ಅವರಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯನವರು ತಮ್ಮ ಕಳೆದ ನಾಲ್ಕು ದಶಕಗಳ ರಾಜಕೀಯದಲ್ಲಿ 2 ಬಾರಿ ವಿರೋಧ ಪಕ್ಷದ ನಾಯಕರಾಗಿ, 2 ಬಾರಿ ಉಪಮುಖ್ಯಮಂತ್ರಿಯಾಗಿ, ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಗಳಾಗಿ, 15 ಬಾರಿ ರಾಜ್ಯ ಬಜೆಟ್ ಮಂಡಿಸಿ , ಹಣಕಾಸಿನಂತಹ ಸುಮಾರು 9 ಪ್ರಮುಖ ಖಾತೆಗಳನ್ನು ನಿಭಾಯಿಸಿದರೂ ಕೂಡ, ದೊಡ್ಡ ದೊಡ್ಡ ಟೆಕ್ ಪಾರ್ಕ್ ಗಳಾಗಲಿ , ಮೆಡಿಕಲ್ ಇಂಜಿನಿಯರಿಂಗ್ ಕಾಲೇಜಿನಂತಹ ಸಂಸ್ಥೆಗಳನ್ನಾಗಲಿ ಸ್ವಂತಕೋಸ್ಕರ ಏನನ್ನು ಮಾಡಿಕೊಳ್ಳದೇ ತಮ್ಮದೇ ಆದ ಪರಂಪರೆಯನ್ನು ಹುಟ್ಟು ಹಾಕಿದ್ದಾರೆ . ಈ ಪರಂಪರೆಯನ್ನು ಕೊನೆಗಾಣಿಸುವುದೇ ಪಟ್ಟಭದ್ರ ಶಕ್ತಿಗಳು ಅಜೆಂಡಾ ಎಂದು ದೂರಿದರು.
ಸಿದ್ಧರಾಮಯ್ಯ ನಂತಹ ಒಬ್ಬ ಹಿಂದುಳಿದ ನಾಯಕನನ್ನು ರಾಜಕೀಯದಿಂದ ತೆಗೆದುಹಾಕಿದರೆ ಇತರೆ ಹಿಂದುಳಿದ ರಾಜಕಾರಣಿಗಳು ಹಾಗೂ ಅಧಿಕಾರಿ ವರ್ಗವು ದಲಿತ , ಅಲ್ಪಸಂಖ್ಯಾತ ಹಾಗೂ ಹಿಂದುಳಿದವರ ಧ್ವನಿಯನ್ನು ಕರ್ನಾಟಕದಲ್ಲಿ ಕೊನೆಗೊಳಿಸಿದರೆ, ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಶಾಶ್ವತವಾಗಿ ತಡೆಯಬಹುದೆಂಬುದು ಈಗ ಹೋರಾಟ ಮಾಡುತ್ತಿರುವವರ ಪಿತೂರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಸ್ವಾಭಿಮಾನಿ ಬಳಗದ ಯುವ ಮುಖಂಡ ಶರತ್ ಕುಮಾರ್, ಪುರಂದರ ಲೋಕಿಕೆರೆ, ಅಯ್ಯಣ್ಣ, ಸಾದಿಕ್ ಹಾಜರಿದ್ದರು.