Home ‘4 ದಿನ ಮನೆಯಿಂದ ಹೊರ ಬರಲಾಗದೆ ಭಯದಿಂದ ನಡುಗಿದ್ದೆ’: ಖಾಸಗಿ ವಿಡಿಯೋ ಲೀಕ್ ಕಹಿ ಘಟನೆ ನೆನೆದ ನಟಿ ರಾಧಿಕಾ ಆಪ್ಟೆ!
Homeದಾವಣಗೆರೆಬೆಂಗಳೂರುಸಿನಿಮಾ

‘4 ದಿನ ಮನೆಯಿಂದ ಹೊರ ಬರಲಾಗದೆ ಭಯದಿಂದ ನಡುಗಿದ್ದೆ’: ಖಾಸಗಿ ವಿಡಿಯೋ ಲೀಕ್ ಕಹಿ ಘಟನೆ ನೆನೆದ ನಟಿ ರಾಧಿಕಾ ಆಪ್ಟೆ!

Share
ರಾಧಿಕಾ ಆಪ್ಟೆ
Share

ನವದೆಹಲಿ: ಚಿತ್ರರಂಗದಲ್ಲಿ ನಟಿಯರ ಖಾಸಗಿ ದೃಶ್ಯಗಳು ಅಥವಾ ನಗ್ನ ವಿಡಿಯೋಗಳು ಅನಧಿಕೃತವಾಗಿ ಸೋರಿಕೆಯಾದಾಗ ಅವರು ಎದುರಿಸುವ ಮಾನಸಿಕ ತುಮುಲ ಹಾಗೂ ವ್ಯಕ್ತಿಗತ ಸುರಕ್ಷತೆಯ ಆತಂಕದ ಕುರಿತು ಬಾಲಿವುಡ್‌ನ ಖ್ಯಾತ ನಟಿ ರಾಧಿಕಾ ಆಪ್ಟೆ ಮನಬಿಚ್ಚಿ ಮಾತನಾಡಿದ್ದಾರೆ. ತಮ್ಮ ಸಿನಿಮಾವೊಂದರ ಖಾಸಗಿ ದೃಶ್ಯ ಆನ್‌ಲೈನ್‌ನಲ್ಲಿ ಸೋರಿಕೆಯಾದಾಗ ತಮಗೆ ಎದುರಾದ ಕಹಿ ಅನುಭವ ಹಾಗೂ ಆ ಬಳಿಕ ಅನುಭವಿಸಿದ ಭಯವನ್ನು ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

ನಾಲ್ಕು ದಿನ ಮನೆಯಿಂದ ಹೊರಬರಲಿಲ್ಲ:

ಸಂದರ್ಶನದಲ್ಲಿ ಮಾತನಾಡಿದ ರಾಧಿಕಾ ಆಪ್ಟೆ, “ಆನ್‌ಲೈನ್‌ನಲ್ಲಿ ನಿಕಟ ದೃಶ್ಯವೊಂದು ಲೀಕ್ ಆದಾಗ, ನಾನು ಸತತ ನಾಲ್ಕು ದಿನಗಳ ಕಾಲ ಮನೆಯಿಂದ ಹೊರಗೆ ಬರಲು ಸಾಧ್ಯವಾಗಲಿಲ್ಲ. ಪರದೆಯ ಮೇಲಿನ ದೃಶ್ಯಗಳ ಟೀಕೆ ಕೇವಲ ಸಿನಿಮಾಗೆ ಸೀಮಿತವಾಗದೆ, ನಮ್ಮ ವೈಯಕ್ತಿಕ ಜೀವನ ಹಾಗೂ ಮನೆಗೂ ತಲುಪುತ್ತದೆ. ನಿಮ್ಮ ಮನೆಯ ಬೆಲ್ ಬಾರಿಸಿ ಯಾರೋ ಒಬ್ಬರು ಬಂದು ನಿಲ್ಲಬಹುದು. ಏಕೆಂದರೆ ಅವರಿಗೆ ನಿಮ್ಮ ದೃಶ್ಯ ಆಕ್ಷೇಪಾರ್ಹ ಎನಿಸಿರುತ್ತದೆ. ಆದ್ದರಿಂದ ಇದು ಸುಲಭದ ವಿಷಯವಲ್ಲ, ಅತ್ಯಂತ ಸಂಕೀರ್ಣವಾದದ್ದು” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಸುರಕ್ಷತೆಯ ಆತಂಕ ಮತ್ತು ಸಹಾಯಕರ ಬೆಂಬಲ:

ಈ ಘಟನೆ ತಮ್ಮ ನಿತ್ಯಜೀವನದ ಮೇಲೂ ಪ್ರಭಾವ ಬೀರಿತು ಎಂದಿರುವ ಅವರು, “ನನ್ನ ವಾಚ್‌ಮ್ಯಾನ್ ಮತ್ತು ಸ್ಟೈಲಿಸ್ಟ್ ಚಾಲಕ ಕೂಡ ಆ ವಿಡಿಯೋ ನೋಡಿದ್ದರು. ನಾನು ಆಗ ಒಬ್ಬಂಟಿಯಾಗಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರಿಂದ ನನ್ನ ಸುರಕ್ಷತೆಯ ಬಗ್ಗೆ ತೀವ್ರ ಭಯವಾಯಿತು. ತಕ್ಷಣವೇ ನನ್ನ ಚಾಲಕ ಹಾಗೂ ಸ್ಪಾಟ್ ದಾದಾರನ್ನು ಕರೆದು, ‘ಒಂದು ವಿಡಿಯೋ ಲೀಕ್ ಆಗಿದೆ. ಅದನ್ನು ನೋಡಿ, ನಿಮಗೆ ನನ್ನ ಜೊತೆ ಕೆಲಸ ಮಾಡಲು ಮುಜುಗರವಿಲ್ಲದಿದ್ದರೆ ಮತ್ತು ನನ್ನನ್ನು ರಕ್ಷಿಸಬಲ್ಲಿರಿ ಎಂದರೆ ಮಾತ್ರ ಕೆಲಸದಲ್ಲಿ ಮುಂದುವರಿಯಿರಿ. ಇಲ್ಲವಾದರೆ ಈಗಲೇ ಸಂಬಳ ಪಡೆದು ಹೋಗಬಹುದು’ ಎಂದಿದ್ದೆ. ಆದರೆ ಅವರಿಬ್ಬರೂ ‘ನಾವು ನಿಮ್ಮನ್ನು ನೋಡಿಕೊಳ್ಳುತ್ತೇವೆ, ರಕ್ಷಿಸುತ್ತೇವೆ’ ಎಂದು ಧೈರ್ಯ ತುಂಬಿದರು” ಎಂದು ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಭಯದಿಂದ ಕನಸಿನ ಪ್ರಾಜೆಕ್ಟ್ ತೊರೆದಿದ್ದ ರಾಧಿಕಾ:

ಇದೇ ವೇಳೆ ತಮ್ಮ ವೃತ್ತಿಜೀವನದಲ್ಲಿ ಎಂದಿಗೂ ಭಯಕ್ಕೆ ಮಣಿಯದ ತಾವು, ಕುಟುಂಬದ ಸುರಕ್ಷತೆಯ ಕಾರಣಕ್ಕಾಗಿ ಒಮ್ಮೆ ಬಹುದೊಡ್ಡ ಸಿನಿಮಾವನ್ನು ಕೈಬಿಡಬೇಕಾಯಿತು ಎಂದೂ ತಿಳಿಸಿದ್ದಾರೆ. “ರಾಜಕೀಯ ಮತ್ತು ಸಾಮಾಜಿಕ ವಾತಾವರಣ ಸರಿಯಿರದ ಕಾರಣ ನನ್ನ ಕುಟುಂಬಕ್ಕೆ ಅಪಾಯವಾಗಬಹುದು ಎಂಬ ಭಯದಿಂದ ಒಂದು ಅತ್ಯುತ್ತಮ ಪ್ರಾಜೆಕ್ಟ್‌ನಿಂದ ಹಿಂದೆ ಸರಿದೆ. ನಿರ್ದೇಶಕ ಅನುರಾಗ್ ಕಶ್ಯಪ್ ಕೂಡ ಆ ಸಮಯದಲ್ಲಿ ಆ ಚಿತ್ರ ಮಾಡಬೇಡ ಎಂದು ಸಲಹೆ ನೀಡಿದ್ದರು. ಎಂದಿಗೂ ಭಯದಿಂದ ನಿರ್ಧಾರ ತೆಗೆದುಕೊಳ್ಳದ ನಾನು ಆ ದಿನ ನಿರ್ಧಾರ ಬದಲಿಸಿದ್ದಕ್ಕೆ ನಾಚಿಕೆಯಾಗಿತ್ತು” ಎಂದು ರಾಧಿಕಾ ಹೇಳಿದ್ದಾರೆ.

ರಾಧಿಕಾ ಆಪ್ಟೆ ಇತ್ತೀಚೆಗೆ ‘ಲಸ್ಟ್ ಸ್ಟೋರೀಸ್ 3’ (Lust Stories 3) ಸರಣಿಯ ವಿಕ್ರಮಾದಿತ್ಯ ಮೋಟ್ವಾನೆ ನಿರ್ದೇಶನದ ಸೆಗ್ಮೆಂಟ್‌ನಲ್ಲಿ ವಿಜಯ್ ವರ್ಮಾ ಹಾಗೂ ಕೊಂಕಣ ಸೇನ್ ಶರ್ಮಾ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *