SUDDIKSHANA KANNADA NEWS/ DAVANAGERE/ DATE:11-06-2024
ದಾವಣಗೆರೆ: ಇನ್ ಸೈಟ್ಸ್ ಐಎಎಸ್ ಸಂಸ್ಥೆಯಿಂದ ಉಚಿತವಾಗಿ ಕೋಚಿಂಗ್ ನೀಡಲು ಸಿದ್ಧ. ಬಡವರು, ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ತರಬೇತಿ ನೀಡಲಾಗುವುದು. ಒಂದೂವರೆ ತಿಂಗಳೊಳಗೆ ದಾವಣಗೆರೆಯಲ್ಲಿ ಸಂಸ್ಥೆಯು ಕಾರ್ಯಾರಂಭ ಮಾಡಲಿದೆ ಎಂದು ಇನ್ ಸೈಟ್ಸ್ ಐಎಎಸ್ ಸಂಸ್ಥೆ ಸಂಸ್ಥಾಪಕ ಜಿ. ಬಿ. ವಿನಯ್ ಕುಮಾರ್ ಅವರು ಭರವಸೆ ನೀಡಿದರು.
ನಗರದ ಪಿಜೆ ಬಡಾವಣೆಯಲ್ಲಿರುವ ವನಿತಾ ಸಮಾಜದಲ್ಲಿ ಇನ್ ಸೈಟ್ಸ್ ಐಎಎಸ್ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿದ್ದ ವನಿತಾ ಡಿಜಿಟಲ್ ಲೈಬ್ರರಿಗೆ ಚಾಲನೆ ನೀಡಿ ಮಾತನಾಡಿದ ಅವರು, ವನಿತಾ ಸಮಾಜದ ಅಡಿ ನಡೆಯುತ್ತಿರುವ ವನಿತಾ ಡಿಜಿಟಲ್ ಲೈಬ್ರೆರಿಯಲ್ಲಿ ಐಎಎಸ್ ಮತ್ತು ಐಪಿಎಸ್ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ತಮ್ಮ ಇನ್ಸೈಟ್ ಐಎಎಸ್ ಸಂಸ್ಥೆ ವತಿಯಿಂದ ಉಚಿತವಾಗಿ ಕೋಚಿಂಗ್ ನೀಡಲು ಸಿದ್ದವಿರುವುದಾಗಿ ಹೇಳಿದರು.
ಜ್ಞಾನ ನಮಗೆ ಧೈರ್ಯ ಕೊಡುತ್ತದೆ ಹಾಗೂ ಜೀವನ ಅನುಭವಿಸುವ ಕ್ರಮ ತಿಳಿಸುತ್ತದೆ. ಮಕ್ಕಳ ಕನಸು ನನಸಾಗಬೇಕಾದರೆ ರಚನಾತ್ಮಕ ಹಾಗೂ ಸೃಜನಾತ್ಮಕ ಕೆಲಸಗಳು ನಡೆಯುತ್ತಿರಬೇಕು.ಇದು ವನಿತಾ ಸಮಾಜದ 53 ನೇ ಶಾಖೆಯಾಗಿದೆ. ಇದೊಂದು ಉತ್ತಮ ಬೆಳೆವಣಿಗೆ. ಈ ರೀತಿಯ ಕೆಲಸ ಹೆಚ್ಚಾಗಬೇಕು.. ನಗರ ಹಾಗೂ ಗ್ರಾಮೀಣಮಟ್ಟದಲ್ಲಿ ಸುಸಜ್ಜಿತ ಗ್ರಂಥಾಲಯ ಇರಬೇಕು. ಮೂಲಭೂತ ಸೌಕರ್ಯ ಎಂದರೆ ಕೇವಲ ರಸ್ತೆ ನೀರು ಒದಗಿಸುವುದಷ್ಟೇ ಅಲ್ಲ ಅದರ ಜೊತೆಗೆ ಗ್ರಂಥಾಲಯ ಕೂಡ ಇರಬೇಕು. ಜನರು ಸ್ವತಂತ್ರ ವಾಗಿ ಯೋಚಿಸಲು ಹಾಗೂ ಮಾತನಾಡಲು ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಲು ಸ್ಥಳದ ಅವಶ್ಯಕತೆ ಇರಬೇಕು ಆದರೆ ನಗರದಲ್ಲಿ ಈ ಮೂರನೇ ಆದ್ಯತೆಗೆ ಅವಕಾಶವೇ ಇಲ್ಲ ಎಂದು ತಿಳಿಸಿದರು.
ಶಾಲೆಯಲ್ಲಿ ಸಿಗುವುದಕ್ಕಿಂತ ಹೆಚ್ಚು ಜ್ಞಾನ ಪುಸ್ತಕಗಳು ನೀಡುತ್ತವೆ. ಮನೆಯಲ್ಲಿ ಪುಸ್ತಕ ಓದುವ ಹವ್ಯಾಸ ಮಕ್ಕಳಿಗೆ ಬೆಳೆಸಬೇಕು. ನನಗೂ ಸಹ ನನ್ನ ತಂದೆಯವರು ಈ ಹವ್ಯಾಸ ರೂಢಿಸಿದ್ದರು. ಆದ್ದರಿಂದ ಓದುತ್ತಾ ಹೆಚ್ಚಿನ ಪುಸ್ತಕದ ಗೀಳು ನನಗೆ ಬರುತ್ತಿತ್ತು. ಕನ್ನಡದಿಂದ ಇಂಗ್ಲಿಷ್ ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಂಡೆ. ವಿಚಾರ ತಿಳಿದು ಕೊಳ್ಳಬೇಕು ವಿಷಯ ಹಂಚಿಕೊಳ್ಳ ಬೇಕು ಎಂಬ ಭಾವನೆ ನನ್ನದು. ಇದರಿಂದಾಗಿ ಪುಸ್ತಕದ ಅಭಿರುಚಿ ಬೆಳೆಯಿತು. ಎಲ್ಲರೊಂದಿಗೆ ಮುಕ್ತವಾಗಿ ಚರ್ಚೆ ಪ್ರಾರಂಭ ಮಾಡಿದೆ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ನನ್ನ ವಿದ್ಯಾರ್ಥಿ ಜೀವನದಲ್ಲಿ ನೋಬೆಲ್ ಪ್ರಶಸ್ತಿ ಪಡೆದಿದ್ದ ಒಂದು ಇಂಗ್ಲೀಷ್ ಪುಸ್ತಕ ನನ್ನ ಗಮನ ಸೆಳೆದಿತ್ತು ಸುಮಾರು 45 ದಿನ ಆ ಒಂದು ಪುಸ್ತಕ ಓದಿದೆ..ಕಷ್ಟಪಟ್ಟು ಆ ಪುಸ್ತಕ ದ ಬಗ್ಗೆ ತಿಳಿದುಕೊಂಡೆ. ಅದರಿಂದ ನನ್ನಲ್ಲಿ ಜ್ಞಾನ ಹೆಚ್ಚಾಯಿತು. ಚಿಕ್ಕವಯಸ್ಸಿನಲ್ಲೇ ಪಠ್ಯ ಹೊರತು ಪಡಿಸಿ ಇತರೆ ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಇದು ನಮ್ಮ ಜ್ಞಾನ ಹೆಚ್ಚಿಸುವುದಲ್ಲದೇ ಜ್ಞಾನ ನಮಗೆ ಧೈರ್ಯ ಕೊಡುತ್ತದೆ. ಜೀವನ ಅನುಭವಿಸುವ ಕ್ರಮ ತಿಳಿಯುತ್ತದೆ. ನಮ್ಮ ಜೀವನ ಅತ್ಯಮೂಲ್ಯವಾದದ್ದು ಅದಕ್ಕಾಗಿ ಕೇವಲ ಒಂದೇ ವಿಚಾರಕ್ಕೆ ಮಹತ್ವ ನೀಡದೆ ಸಮಾಜಕ್ಕೆ ಮಹತ್ತರ ಜವಾಬ್ದಾರಿ ನೀಡುವ ಹುದ್ದೆ ಹುಡುಕಿಕೊಂಡು ಹೋಗಬೇಕು. ಸೀಮಿತ ಪರಿದಿಗೆ ಹೋಗದೆ ಧೈರ್ಯವಾಗಿ ಮುನ್ನುಗ್ಗಬೇಕು ಎಂದು ಕರೆ ನೀಡಿದರು.
ನಮ್ಮ ದೃಷ್ಟಿಕೋನದಲ್ಲಿ ವೈವಿಧ್ಯತೆ ಬರಬೇಕು. ನಮ್ಮಲ್ಲಿ ವಿಚಾರ ಶಕ್ತಿ ಬೆಳೆಯಬೇಕು. ಅದಕ್ಕಾಗಿ ನಿತ್ಯ ದಿನಪತ್ರಿಕೆ ಜೊತೆಗೆ ಪ್ರತಿನಿತ್ಯದ ವಿದ್ಯಮಾನಗಳ ಬಗ್ಗೆ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ನಮ್ಮದು ಒಂದು ರೀತಿ ಕುರಿಮಂದಿಯ ಸಂಸ್ಕೃತಿ. ಎಲ್ಲರೂ ಏನ್ನನ್ನು ಮಾಡುತ್ತಾರೋ ಅದನ್ನೇ ನಾನು ಮಾಡಬೇಕೆಂಬ ಮನೋಭಾವ ಸಲ್ಲದು. ಅದನ್ನು ಬಿಟ್ಟು ಹೊರಬಂದು ಸಾಧನೆ ಮಾಡಬೇಕು ಎಂದರು.ದಾವಣಗೆರೆಗೆ ಮುಂದಿನ ದಿನದಲ್ಲಿ ಎನ್ ಎಸ್ ಡಿ,ಸ್ಪೋರ್ಟ್ಸ್ ಅಕಾಡೆಮಿ ತರಬೇಕು ಎಂಬ ಆಸೆ ನನ್ನದು. ದೊಡ್ಡದಾದ ಆಲೋಚನೆ ನಮಗೆ ಇರಬೇಕು. ದೇಶ ಬಹಳ ಮುಂದುವರೆದಿದೆ ಎಂಬುದು ಇನ್ನೂ ಆಗಿಲ್ಲ.ಕಾರಣ ನಾವು ಹೊಸ ಅವಕಾಶಗಳನ್ನು ಸೃಷ್ಠಿಸುತ್ತಿಲ್ಲ.ಜೀವನದಲ್ಲಿ ಉನ್ನತ ಸ್ಥಾನಕ್ಕೇರಬೇಕು ಹಾಗೂ ದೊಡ್ಡದಾದ ಕನಸು ಕಾಣುವವರಿಗೆ ಅವಕಾಶ ನೀಡುವುದು ಮುಖ್ಯ.ದುರಂತವೆಂದರೆ ಇಂತಹ ಅವಕಾಶ ನಮ್ಮಲ್ಲಿ ಸಿಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಮಹಾನಗರ ಪಾಲಿಕೆ ಮಾಜಿ ಮೇಯರ್ ಎಸ್. ಟಿ. ವೀರೇಶ್, ಪಾಲಿಕೆ ವಿಪಕ್ಷ ನಾಯಕ ಪ್ರಸನ್ನ ಕುಮಾರ್ ಅತಿಥಿಗಳಾಗಿ ಉಪಸ್ಥಿತರಿದ್ದರು. ವನಿತಾ ಡಿಜಿಟಲ್ ಗ್ರಂಥಾಲಯದ ಅಧ್ಯಕ್ಷೆ ರೇಖಾ ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವಾಗ್ದೇವಿ ಆರ್., ವನಿತಾ ಸಮಾಜದ ಅಧ್ಯಕ್ಷೆ ಪದ್ಮಾಪ್ರಕಾಶ್ ಉಪಸ್ಥಿತರಿದ್ದರು. ಪ್ರಾರ್ಥನೆ ಡಿ.ಪಲ್ಲವಿ ನೆರವೇರಿಸಿದರು. ಎನ್ ಸುಮಾ ಸ್ವಾಗತಿಸಿದರು. ಶೀಲಾ ನಲ್ಲೂರು ವಂದಿಸಿದರು.