SUDDIKSHANA KANNADA NEWS/ DAVANAGERE/ DATE:05-11-2023
ದಾವಣಗೆರೆ: ಹಣದ ಆಸೆಗೆ ಬಿದ್ದರೆ ಮುಗಿದೇ ಹೋಯ್ತು. ಆನ್ ಲೈನ್ ನಲ್ಲಿಯೇ ಮರಳು ಮಾಡಿ ವಂಚನೆ ಮಾಡುವ ದುಷ್ಕರ್ಮಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ತಿಂಗಳಿಗೆ 1 ಲಕ್ಷ ರೂಪಾಯಿ ಸಂಪಾದನೆ ಮಾಡಬಹುದು ಎಂಬ ಆಸೆ ಹುಟ್ಟಿಸಿ ವಂಚನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.
ಇಂಥದ್ದೇ ಪ್ರಕರಣ ನಗರದಲ್ಲಿಯೂ ನಡೆದಿದೆ. ಮಾಜಿ ಯೋಧ ಹಾಗೂ ಸರಸ್ವತಿ ಬಡಾವಣೆ ನಿವಾಸಿ ಎಂ. ದಾಸಪ್ಪರ ಸೊಸೆ ನಿಸರ್ಗ ಎಂಬುವವರೇ ಮೋಸ ಹೋದವರು. ಅಂದ ಹಾಗೆ 17.58 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಘಟನೆ ಹಿನ್ನೆಲೆ ಏನು…?
ಮನೆಯಲ್ಲಿದ್ದುಕೊಂಡೇ ಹಣ ಹೂಡಿಕೆ ಮಾಡಿ ಕಮೀಷನ್ ಲೆಕ್ಕದಲ್ಲಿ ಲಾಭ ಪಡೆಯುವ ಆಮೀಷವೊಡ್ಡಲಾಯಿತು. ಮಹಿಳೆಯು ಸಹ ಹಣ ಸಂಪಾದನೆ ಮಾಡುವ ಆಸೆಯಿಂದ ಇದಕ್ಕೆ ಸಮ್ಮತಿ ಸೂಚಿಸಿದರು. ಪತಿಯೊಂದಿಗೆ ಇಂಗ್ಲೆಂಡ್ ನಲ್ಲಿ
ನಿಸರ್ಗ ನೆಲೆಸಿದ್ದು, ಖಾಸಗಿ ಕಂಪೆನಿ ಉದ್ಯೋಗಿಯಾಗಿದ್ದಾರೆ. ಟ್ರೇಡ್ ಎಕ್ಸ್ ಸಂಸ್ಥೆಯ ಹೆಸರಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸಪ್ ಸಂದೇಶ ಕಳುಹಿಸಿದ್ದಾನೆ. ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿದರೆ ತಿಂಗಳಿಗೆ 1 ಲಕ್ಷ ರೂಪಾಯಿ ಸಂಪಾದನೆ
ಮಾಡಬಹುದು ಎಂದು ನಂಬಿಸಿದ್ದಾನೆ.
ಇದನ್ನು ನಂಬಿ ಹಂತ ಹಂತವಾಗಿ ಆನ್ ಲೈನ್ ನಲ್ಲಿ 17.51 ಲಕ್ಷ ರೂಪಾಯಿಯನ್ನು ಅಪರಿಚಿತ ವ್ಯಕ್ತಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ. ಹಣ ವರ್ಗಾವಣೆ ಬಳಿಕ ಅಪರಿಚಿತ ವ್ಯಕ್ತಿಗೆ ಕರೆ ಮಾಡಿದರೆ ಸಂಪರ್ಕ ಸಾಧ್ಯವಾಗುತ್ತಿಲ್ಲ. ಮೋಸ ಮಾಡಿದ್ದು, ಹಣ ವಾಪಸ್ ಕೊಡಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ನಿಸರ್ಗ ಅವರ ಮಾವ ಎಂ. ದಾಸಪ್ಪ ಅವರು ನೀಡಿದ ದೂರಿನ ಅನ್ವಯ ದಾವಣಗೆರೆ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.