SUDDIKSHANA KANNADA NEWS/ DAVANAGERE/ DATE_05-07_2025
ದಾವಣಗೆರೆ: ರಾಜ್ಯ ಸರಕಾರವು ಆನ್ ಲೈನ್ ಗೇಮ್, ಆನ್ ಲೈನ್ ಲೋನ್ ಆಪ್, ಜೂಜು ನಿಷೇಧ ಮಾಡುವವರೆಗೆ ಹೋರಾಟ ನಡೆಸಲು ಸ್ವಾಭಿಮಾನಿ ಬಳಗ ನಿರ್ಧರಿಸಿದೆ.
ಸರ್ಕಾರದ ವೈಫಲ್ಯ, ಜನಪ್ರತಿನಿಧಿಗಳ ನಿರಾಸಕ್ತಿ, ಅಧಿಕಾರಿಗಳ ಬೇಜವಾಬ್ದಾರಿತನದಿಂದ ದಾವಣಗೆರೆಯ ಯುವಕ ಆನ್ ಲೈನ್ ಗೇಮ್ ಗೆ ಬಲಿಯಾಗಿದ್ದಾನೆ ಎಂದು ಸ್ವಾಭಿಮಾನಿ ಬಳಗದ ಪ್ರಮುಖರಾದ ರಾಜು ಮೌರ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಈ ಸುದ್ದಿಯನ್ನೂ ಓದಿ: ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಜಾತಿಗಣತಿ ವರದಿ ಕಸದ ಬುಟ್ಟಿಗೆ: ಜಿ. ಬಿ. ವಿನಯ್ ಕುಮಾರ್ ಆಕ್ರೋಶ
ಒಬ್ಬ ಯುವಕ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿ, ತನ್ನ ಜೀವವನ್ನು ಬಲಿಕೊಟ್ಟು ಇನ್ನು ಮುಂದಾದರೂ ತನ್ನಂತೆ ಮೋಸ ಹೋಗುತ್ತಿರುವವರಿಗೆ ಪಾಠವಾಗುವುದರ ಜೊತೆಗೆ ಬೇಜವಾಬ್ದಾರಿ ವರ್ತನೆಗಳನ್ನು ಮೈಗೂಡಿಸಿಕೊಂಡಿರುವ ಕಾರ್ಯಾಂಗದಲ್ಲಿನ ಅಧಿಕಾರಿಗಳು ಮತ್ತು ಚುನಾವಣಾ ಫಂಡುಗಳಿಗೆ ಫಂಡಿಂಗ್ ಮಾಡ್ತಾರೆ ಅನ್ನೋ ಕಾರಣಕ್ಕೆ ಲಾಟರಿ, ಆನ್‌ಲೈನ್ ಗೇಮ್‌ಗಳಿಗೆ ಅನುಮತಿ ನೀಡುತ್ತಿರುವ ಸರ್ಕಾರಗಳು ಇನ್ನಾದರೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಿ ಎಂಬ ಸಂದೇಶವನ್ನು ಸಾರಿ ದಾವಣಗೆರೆಯ ಶಶಿಕುಮಾರ್ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿಸಿದರು.
ಆನ್‌ಲೈನ್ ಗೇಮ್‌ನಲ್ಲಿ ಮೋಸ ಹೋಗಿ 18 ಲಕ್ಷ ರೂಪಾಯಿಗಳನ್ನು ಕಳೆದುಕೊಂಡು, ಅಪರಾಧಿಗಳ ಪತ್ತೆಗಾಗಿ ಸೈಬರ್ ಪೊಲೀಸ್ ಠಾಣೆಗೆ ದೂರನ್ನು ನೀಡಲು ಹೋದವರಿಗೆ ಎಫ್.ಐ.ಆರ್. ಮಾಡಿಸಲು 4 ತಿಂಗಳು ಅಲೆದಾಡಿಸಿದ್ದಾರೆ. ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ. ನಿರಂತರ ಫೋನ್ ಮಾಡಿದ್ದಾರೆ. ಸ್ಪಂದನೆ ಸಿಕ್ಕಿಲ್ಲ. ದಾವಣಗೆರೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಅಲ್ಲೂ ನ್ಯಾಯ ಸಿಕ್ಕಿಲ್ಲ, ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್‌ರವರಿಗೂ ದೂರು ನೀಡಿದ್ದಾರೆ. ಮುಂದುವರೆದು ಲೋಕಾಯುಕ್ತ, ಮಾನವ ಹಕ್ಕುಗಳ ಆಯೋಗ ಕೊನೆಗೆ ಹೈಕೋರ್ಟ್ ನ್ಯಾಯಾಧೀಶರಿಗೂ ಮನವಿ ಮಾಡಿಕೊಂಡಿದ್ದರೂ ಯಾರೊಬ್ಬರೂ ಸ್ಪಂದಿಸಿ, ಶಶಿಕುಮಾರನ ನೆರವಿಗೆ ಬರದೇ ಇದ್ದಾಗ ಬೇರೆ ದಾರಿ ಕಾಣದೇ ಸಾವಿಗೆ ಶರಣಾಗಿದ್ದಾನೆ ಎಂದು ಹೇಳಿದರು.
ಬದುಕಿ ಬಾಳ ಬೇಕಾಗಿದ್ದ ತನ್ನ 25 ವಯಸ್ಸಿನಲ್ಲಿ ನೇಣಿಗೆ ಶರಣಾಗಿದ್ದಾರೆ. ಶಶಿಕುಮಾರನದು ಆತ್ಮಹತ್ಯೆಯಲ್ಲ. ಸರ್ಕಾರಗಳ ಬೇಜವಾಬ್ದಾರಿಯಿಂದ, ನಿರ್ಲಕ್ಷ್ಯಗಳಿಂದ ಆಗಿರುವ ಕೊಲೆ, ನಿರುದ್ಯೋಗಿ ಗಳಿಗೆ ಉದ್ಯೋಗ ಸೃಷ್ಟಿ
ಮಾಡದ ಸರ್ಕಾರಗಳು, ಜೀವನೋಪಾಯಕ್ಕೆ ಹೇಗಾದ್ರೂ ಹಣ ಗಳಿಸುವ ಮಾರ್ಗಗಳನ್ನು ಹುಡುಕುವಾಗ ಲಾಟರಿ ಲಾಭದ ಆಸೆ ತೋರಿಸಿ, ಎರೆಹುಳಗಳ ರೀತಿ ಬಳಸಿಕೊಂಡು ಬಲೆಗೆ ಬೀಳಿಸಿಕೊಂಡು ಚಕ್ರವ್ಯೂಹದಲ್ಲಿ ಸಿಲುಕಿಸುತ್ತಿದ್ದಾರೆ. ಆ ಸುಳಿಯಲ್ಲಿ ಸಿಲುಕಿ ಮೋಸ ಹೋಗಿ ಪೋಲೀಸ್ ಠಾಣೆಗೆ ದೂರು ನೀಡಿದರೂ, ಎಫ್.ಐ.ಆರ್. ಮಾಡಲು ನಿರ್ಲಕ್ಷ್ಯ ವಹಿಸಲಾಗಿದೆ ಎಂದು ದೂರಿದರು.
ಸೈಬರ್ ಅಪರಾಧಗಳ ಬಗ್ಗೆ ರಿಂಗ್ ಟೋನ್ ಅಳವಡಿಸುವ ಪೊಲೀಸ್ ಇಲಾಖೆ “ಗೋಲ್ಡನ್ ಅವರ್”ಗಳ ಬಗ್ಗೆ ಭಾಷಣ ಮಾಡುವ ಪೊಲೀಸ್ ಇಲಾಖೆ, ಒಬ್ಬ ಯುವಕನಿಗೆ ಸ್ಪಂದಿಸಲಿಲ್ಲ. ಶಶಿಕುಮಾರ್ ಧೃತಿಗೆಟ್ಟಿಲ್ಲ, ಮೋಸಗಾರರನ್ನು ಪತ್ತೆ ಮಾಡಲು ಭಾರತ ದೇಶದ ಸಂವಿಧಾನದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮೂರು ಅಂಗಗಳಿಗೂ ಮನವಿ, ದೂರುಗಳನ್ನು ನೀಡಿದ್ದಾರೆ. ಪೊಲೀಸ್ ಇಲಾಖೆಯ ವೈಫಲ್ಯದ ವಿರುದ್ಧ ಲೋಕಾಯುಕ್ತರಿಗೂ, ಮಾನವ ಹಕ್ಕುಗಳ ಆಯೋಗಕ್ಕೂ ದೂರು ನೀಡಿದ್ದಾರೆ. ಆನ್‌ಲೈನ್ ಗೇಮ್‌ಗಳಾದ ಎ23 ರಮ್ಮಿ, ಡ್ರೀಮ್ 11 ನಂತಹ ಗೇಮ್‌ಗಳನ್ನು ನಿಷೇಧ ಮಾಡುವಂತೆ ಜೀವ ಹೋಗುವ ಮುನ್ನ ತನ್ನಂತೆ ಲಕ್ಷಾಂತರ ಜನ, ನಿರುದ್ಯೋಗಿಗಳ ಜೀವ ಮತ್ತು ಜೀವನಗಳ ರಕ್ಷಣೆಗಾಗಿ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ ಎಂದರು.
ಶಶಿಕುಮಾರನ ಸಾವು ಆನ್‌ಲೈನ್ / ಆಫ್‌ಲೈನ್ / ಮಟ್ಕಾ / ಓಸಿ ಮುಂತಾದುವುಗಳಲ್ಲಿ ತೊಡಗಿಸಿಕೊಂಡವರಿಗೆ ಎಚ್ಚರಿಕೆಯ ಘಂಟೆಯ ಪಾಠವಾಗಬೇಕು. ಜನರ ತೆರಿಗೆ ಹಣದಿಂದ ಕಾಲಕಾಲಕ್ಕೆ ಪೇ ಕಮೀಷನ್‌ಗಳ ಶಿಫಾರಸ್ಸುಗಳ ಮೂಲಕ ಸಂಬಳ ಮತ್ತು ಭತ್ಯೆ ಹೆಚ್ಚು ಮಾಡಿಕೊಂಡು ಕರ್ತವ್ಯವನ್ನು ಮರೆಯುತ್ತಿರುವ ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳುವಂತಾಗಬೇಕು. ದಾವಣಗೆರೆಯ ಸಂಸದರ ಮೇಲೆ ನಂಬಿಕೆಯಿಟ್ಟು ಆನ್‌ಲೈನ್ ಲಾಟರಿಗಳ ನಿಷೇಧದ ಬಗ್ಗೆ ಮನವಿ ಮಾಡಿರುವ ಶಶಿಕುಮಾರ್‌ರ ಪತ್ರವನ್ನು ಓದಿ, ಆ ಯುವಕನಿಗೆ ಧೈರ್ಯ ತುಂಬಿದ್ದರೆ ಯುವಕನ ಜೀವ ಉಳಿಯುತ್ತಿತ್ತು ಎಂದು ಅಭಿಪ್ರಾಯಪಟ್ಟರು.
ಆನ್‌ಲೈನ್ ಗೇಮಿಂಗ್‌ಗಳು, ಲೋನ್ ಆಪ್‌ಗಳನ್ನು ಸಂಪೂರ್ಣ ನಿಷೇಧದ ಬಗ್ಗೆ ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆಯಾಗಬೇಕು “ನಿರ್ಣಯ” ವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು, ಕೇಂದ್ರ ಸರ್ಕಾರ ಸಂಪೂರ್ಣವಾಗಿ ನಿಷೇಧ ಮಾಡುವವರೆವಿಗೂ ಜಿ. ಬಿ. ವಿನಯ್‌ಕುಮಾರ್‌ರವರ ನೇತೃತ್ವದಲ್ಲಿ “ಸ್ವಾಭಿಮಾನಿ ಬಳಗ” ದಿಂದ ನಿರಂತರ ಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಶಿವಕುಮಾರ್ ಡಿ. ಶಟ್ಟರ್, ವಿರುಪಾಕ್ಷಪ್ಪ ಪಂಡಿತ್, ವಕೀಲರಾದ ಬಿ. ಬಸವರಾಜ, ಪ್ರವೀಣ್ ಕುಮಾರ್, ಅಣ್ಣಪ್ಪ, ಮೊಹಮ್ಮದ್ ಸಾಧಿಕ್ ಮತ್ತಿತರರು ಹಾಜರಿದ್ದರು.