SUDDIKSHANA KANNADA NEWS/ DAVANAGERE/ DATE:15-01-2025
ದಾವಣಗೆರೆ: ಮಹಾನಗರ ಪಾಲಿಕೆ ವತಿಯಿಂದ ನಿರ್ಮಾಣ ಮಾಡಲಾದ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡು ಧಗ ಧಗ ಹೊತ್ತಿ ಉರಿದ ಘಟನೆ ದಾವಣಗೆರೆ ತಾಲೂಕಿನ ಆವರಗೊಳ್ಳ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತು. ನೋಡನೋಡತ್ತಿದ್ದಂತೆ ಬೆಂಕಿ ಕೆನ್ನಾಲಗಿ ವ್ಯಾಪಿಸಿತು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರು.
ತಡರಾತ್ರಿಯವರೆಗೊ ಬೆಂಕಿ ನಂದಿಸುವ ಕಾರ್ಯ ನಡೆಯಿತು. ಘನತ್ಯಾಜ್ಯ ಘಟಕದಲ್ಲಿ ಪದೇ ಪದೇ ಬೆಂಕಿ ಕಾಣಿಸಿಕೊಳ್ಳುತ್ತಿದ್ದು, ಪಾಲಿಕೆಯು ಮುನ್ನೆಚ್ಚರಿಕೆ ವಹಿಸದಿರುವುದೇ ಈ ಘಟನೆಗೆ ಕಾರಣ. ಆವರಗೊಳ್ಳದ ನಿವಾಸಿ ಷಣ್ಮುಖಯ್ಯ ಮಾತನಾಡಿ ಆಗಾಗ್ಗೆ ಬೆಂಕಿ ಕಾಣಿಸಿಕೊಳ್ಳುತ್ತಿರುವುದರಿಂದ ಅಡಿಕೆ ಬೆಳೆಗೆ ಹಾನಿಯಾಗುತ್ತಿದೆ. ಈ ಬಗ್ಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ. ಮಹಾನಗರ ಪಾಲಿಕೆಯು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.