SUDDIKSHANA KANNADA NEWS/ DAVANAGERE/ DATE:24-12-2024
ದಾವಣಗೆರೆ: ಡಾ. ಬಾಬಾಸಾಹೇಬ್ ಅಂಬೇಡ್ಕರ್ ಕುರಿತ ಹೇಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜೀನಾಮೆ ನೀಡುವವರೆಗೆ ಹೋರಾಟ ನಡೆಸಲಾಗುವುದು. ಅಮಿತ್ ಶಾ ಅವರನ್ನು ಈ ಕೂಡಲೇ ಕೇಂದ್ರ ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಆಗ್ರಹಿಸಿದರು.
ನಗರದ ಗೃಹ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಂವಿಧಾನ ರಚನೆ ಮಾಡಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಕುರಿತು ಅವಹೇಳನ ಮಾಡಲಾಗಿದೆ. ಸಂವಿಧಾನ, ಅಂಬೇಡ್ಕರ್ ಅನುಯಾಯಿಗಳು ಸೇರಿದಂತೆ ಕೋಟ್ಯಂತರ ಜನರ ಮನಸ್ಸಿಗೆ ಘಾಸಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಮಿತ್ ಶಾ ಅವರಿಗೆ ಪೂಜ್ಯ ಡಾ.ಬಾಬಾಸಾಹೇಬರ ಮೇಲೆ ದ್ವೇಷ ಇದೆ. ಇದು ಸದನದಲ್ಲಿ ಅವರು ಮಾತನಾಡಿದ ಬಗೆಯಲ್ಲಿಯೇ ತಿಳಿದು ಬಂದಿದೆ. ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಶಾ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಇಲ್ಲವಾ ಅವರು ರಾಜೀನಾಮೆ ಪಡೆಯಬೇಕು. ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಅವರು ಕ್ರಮ ಕೈಗೊಳ್ಳಬೇಕು ಎಂಬುದು ವಿಪಕ್ಷಗಳ ಆಗ್ರಹ. ಆದಷ್ಟು ಬೇಗ ಸಚಿವ ಸ್ಥಾನದಿಂದ ಅಮಿತ್ ಶಾ ಕೆಳಗಿಳಿಸಬೇಕು ಎಂದು ಆಗ್ರಹಿಸಿದರು.
ಭಾರತದ ಸಂವಿಧಾನದ ಶಿಲ್ಪಿಯಾದ ಡಾ.ಬಿ.ಆರ್. ಅಂಬೇಡ್ಕರ್ ಬಗ್ಗೆ ನಿಜವಾದ ಗೌರವ ಇದ್ದರೆ ಅಮಿತ್ ಶಾ ಅವರನ್ನು ಪ್ರಧಾನಮಂತ್ರಿಗಳು ತಮ್ಮ ಸಚಿವ ಸಂಪುಟದಿಂದ ತಕ್ಷಣವೇ ವಜಾಗೊಳಿಸಲಿ ಎಂದು ಆಗ್ರಹಿಸಿದ ಸಂಸದರು, ಬಾಬಾ ಸಾಹೇಬ್ ಬಗ್ಗೆ ಅಮಿತ್ ಶಾ ಅವರ ಹೇಳಿಕೆಯು ಅಗೌರವ ಮಾತ್ರವಲ್ಲದೆ ಸಂವಿಧಾನದ ಬಗ್ಗೆ ಬಿಜೆಪಿಯ ದೃಷ್ಟಿಕೋನವನ್ನು ಬಹಿರಂಗಪಡಿಸಿದೆ “ಬಾಬಾಸಾಹೇಬ್ ಬಗ್ಗೆ ಸಂಸತ್ತಿನಲ್ಲಿ ಅಮಿತ್ ಶಾ ನೀಡಿದ ಹೇಳಿಕೆ ಇಡೀ ದೇಶವನ್ನು ದಂಗುಬಡಿಸುವಂತೆ ಮಾಡಿದೆ. “ಅಂಬೇಡ್ಕರ್-ಅಂಬೇಡ್ಕರ್ ಎಂದು ಜಪ ಮಾಡುವುದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಆಗಿದೆ’ ಎಂಬ ಅವರ ಹೇಳಿಕೆ ಅಗೌರವ ಮಾತ್ರವಲ್ಲ, ಬಾಬಾಸಾಹೇಬ್ ಮತ್ತು ನಮ್ಮ ಸಂವಿಧಾನದ ಬಗ್ಗೆ ಬಿಜೆಪಿಯ ದೃಷ್ಟಿಕೋನವನ್ನು ಬಹಿರಂಗಪಡಿಸುತ್ತದೆ ಎಂದು ಕಿಡಿಕಾರಿದರು.
“ಸಂವಿಧಾನದ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ವಿರುದ್ಧ ಇಂತಹ ಹೇಳಿಕೆ ನೀಡಲು ಬಿಜೆಪಿಗೆ ಹೇಗೆ ಧೈರ್ಯ ಬಂತು? ಇದು ದೇಶಾದ್ಯಂತ ಕೋಟ್ಯಾಂತರ ಜನರ ಭಾವನೆಗಳನ್ನು ಘಾಸಿಗೊಳಿಸಿದೆ” ಡಾ|| ಬಿ.ಆರ್ ಅಂಬೇಡ್ಕರ್ರವರನ್ನು ಹಾಗೂ ಸಂವಿಧಾನವನ್ನು ನಾವುಗಳು ಪ್ರತಿಪಾದನೆ ಮಾಡದೆ ಮತ್ತಿನ್ಯಾರು ಮಾಡಲು ಸಾಧ್ಯ. ಅಂಬೇಡ್ಕರ್ ಅವರು ನಮಗೆ ಸಂವಿಧಾನ ಕೊಟ್ಟವರು. ಅವರಿಗೆ ನಾವೆಲ್ಲ ಗೌರವ ಕೊಡುವುದು ನಮ್ಮ ಕರ್ತವ್ಯ ಎಂದು ಪ್ರತಿಪಾದಿಸುತ್ತೇವೆ. ಇದನ್ನು ಪ್ರಶ್ನಿಸುವವರು ಅಧಿಕಾರದಲ್ಲಿ ಇರಬಾರದು. ಅವರನ್ನು ಈ ಕೂಡಲೇ ಪದಚ್ಯುತಿಗೊಳಿಸಬೇಕು ಹಾಗೂ ಕೇಂದ್ರ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಸಂಸದರು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಶಾಸಕ ಕೆ. ಎಸ್. ಬಸವಂತಪ್ಪ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಬಿ ಮಂಜಪ್ಪ, ಎಸ್ಸಿ ಮೋರ್ಚಾದ ಅಧ್ಯಕ್ಷ ವೀರಭದ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಮೇಯರ್ ಚಮನ್ ಸಾಬ್, ಪಾಲಿಕೆ ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಹರಿಹರದ ನಂದಿಗಾವಿ ಶ್ರೀನಿವಾಸ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರುಗಳು, ಮಹಿಳಾ ಮುಖಂಡರು ಮತ್ತಿತರರು ಹಾಜರಿದ್ದರು.