SUDDIKSHANA KANNADA NEWS/ DAVANAGERE/ DATE:13-02-2024
ದಾವಣಗೆರೆ: ಬಗರ್ ಹುಕ್ಕುಂ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿ ಫೆ.15 ರಂದು ಬೆಳಗ್ಗೆ 11 ಕ್ಕೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಜನ ಜಾನುವಾರುಗಳೊಂದಿಗೆ ಅನಿರ್ದಿಷ್ಟ ಚಳುವಳಿ ಹಾಗೂ ಜೈಲ್ ಬರೋ ಚಳುವಳಿ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದಾವಣಗೆರೆ ತಾಲ್ಲೂಕಿನ ಹೆಬ್ಬಾಳು ಗ್ರಾಮದ ರೈತರು 30-40 ವರ್ಷಗಳಿಂದ ಬಗರ್ ಹುಕುಂ ಸಾಗುವಳಿ ಅರ್ಜಿ ಸಲ್ಲಿಸಿದ್ದಾರೆ ಆದರೆ ಇದುವರೆಗೂ ಹಕ್ಕು ಪತ್ರ ವಿತರಿಸಿಲ್ಲ. ಇದರೊಂದಿಗೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು, ಕೊಮಾರನಹಳ್ಳಿ, ಕೊಪ್ಪ, ಹಾಲಿವಾಣ, ಜಿ.ಟಿ.ಕಟ್ಟೆ ಹಾಗೂ ಇನ್ನಿತರೆ ಗ್ರಾಮದ ರೈತರು ಹಾಗೂ ಹರಿಹರ, ಹೊನ್ನಾಳಿ, ನ್ಯಾಮತಿ, ಚನ್ನಗಿರಿ ಮತ್ತು ಜಗಳೂರು ತಾಲ್ಲೂಕುಗಳ ರೈತರು ಸುಮಾರು 30- 40 ವರ್ಷಗಳಿಂದ ಫಾರಂ-50, 53 ಮತ್ತು 57 ಸರ್ಕಾರದ ಕಾನೂನಿನ ಅನ್ವಯ ಅರ್ಜಿ ಸಲ್ಲಿಸಿದ್ದಾರೆ, ಜಮೀನಿನಲ್ಲಿರುವ ಮುಳ್ಳು, ಕಲ್ಲು, ಗಿಡಗಂಟಿಗಳನ್ನು ಬಗೆದು ರೈತರು ಅರ್ಧ ಆಯುಷ್ಯವನ್ನು ಇದರಲ್ಲಿಯೇ ಕಳೆದಿದ್ದಾರೆ, ಅಂತವರಿಗೆ ಹಕ್ಕು ಪತ್ರ ನೀಡಿಲ್ಲ ಎಂದು ಆರೋಪಿಸಿದರು.
ರಾಜ್ಯ ಮಲೆನಾಡು ಭಾಗವಾದ ಕೊಡಗು, ಚಿಕ್ಕಮಗಳೂರು, ಹಾಸನದ ದೊಡ್ಡಶ್ರೀಮಂತರು 50 ರಿಂದ 100 ಎಕರೆವರೆಗೂ ಒತ್ತುವರಿ ಮಾಡಿಕೊಂಡಿದ್ದಾರೆ ಇವರನ್ನು ಯಾವುದೇ ಸರ್ಕಾರಗಳು ಒಕ್ಕಲೆಬ್ಬಿಸಲು ಪ್ರಯತ್ನಿಸುವುದಿಲ್ಲ. ಆದರೆ ಬಡ ರೈತರ ಮೇಲೆ ಸರ್ಕಾರ ದಬ್ಬಾಳಿಕೆ ನಡೆಸುವುದು ಸರಿಯಲ್ಲ ಎಂದರು.ಬಡ ರೈತರು 2 ಅಥವಾ 3 ಎಕರೆ ಸಾಗುವಳಿ ಮಾಡಿ, ದೇಶದ 140 ಕೋಟಿ ಜನರಿಗೆ ಅನ್ನ ಹಾಕುತ್ತಿದ್ದು, ಇಂತವರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಾರೆ. ಹಾಗೂ ಆ ಬಡ ರೈತರು ಬ್ಯಾಂಕಿಗೆ ಹೋದರೆ ಪಹಣಿ ತರಲು, ವಿದ್ಯುತ್ ಇಲಾಖೆಗೆ ಹೋದರೆ ದಾಖಲೆಗಳನ್ನು ತರಲು ಹೇಳುತ್ತಾರೆ. ಅತ್ತ ಬದುಕಲು ಸಾಧ್ಯವಾಗದೆ, ಸಾಯಲು ಸಾಧ್ಯವಾಗದೇ ಈ ಬರಗಾಲದಲ್ಲಿ ಜೀವನ ನಡೆಸುವುದು ದುಸ್ತರವಾಗಿರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರವು ಪ್ರತಿ ಗ್ರಾಮದಲ್ಲಿ 100 ದನಗಳಿದ್ದರೆ 30 ಎಕರೆ ಜಮೀನನ್ನು ಜಾನುವಾರುಗಳಿಗಾಗಿ ಮೇಯಲು ಬಿಡಬೇಕಾಗುತ್ತದೆ ಎಂದು ಕಾನೂನನ್ನು ರಚಿಸಿದೆ. ಆದರೆ ಆ ಕಾನೂನಿನ ವಿರುದ್ಧವಾಗಿ ಪ್ರಯತ್ನಿಸುವುದಿಲ್ಲ. ಆದ್ದರಿಂದ ಈಗಾಗಲೇ ಸುಮಾರು 10 ವರ್ಷಗಳಿಂದ ಪ್ರತಿ ತಿಂಗಳಿಗೊಮ್ಮೆ ಮುಖ್ಯಮಂತ್ರಿಗಳಿಗೆ, ಸಚಿವರುಗಳಿಗೆ, ಶಾಸಕರುಗಳಿಗೆ ಹಾಗೂ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರವರಿಗೆ ಅರ್ಜಿ ಸಲ್ಲಿಸಲಾಗಿದೆ. ಆದರೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು, ಕೊಮಾರನಹಳ್ಳಿ, ಕೊಪ್ಪ, ಹಾಲಿವಾಣ ಇನ್ನಿತರೆ ಗ್ರಾಮಗಳಲ್ಲಿ ಜಂಟಿ ಸಮೀಕ್ಷೆ ವರದಿಯಾಗಿದ್ದು, ಹಕ್ಕುಪತ್ರ ನೀಡಲು ವಿಳಂಬ ಮಾಡುತ್ತಿದ್ದಾರೆಂದರು.ಇದೆಲ್ಲವನ್ನೂ ಖಂಡಿಸಿ ಫೆ15 ರ ಬುಧವಾರ 11 ಗಂಟೆಗೆ “ಜನ ಜಾನುವಾರುಗಳೊಂದಿಗೆ ಅನಿರ್ದಿಷ್ಟ ಚಳುವಳಿ ಹಾಗೂ ಜೈಲ್ ಬರೋ” ಚಳುವಳಿ ನಡೆಸಲಾಗುವುದು ಎಂದರು.
ಗೋಷ್ಠಿಯಲ್ಲಿ ರಾಂಪುರ ಬಸವರಾಜ್,ಮಾಯಕೊಂಡದ ಅಶೋಕ, ಮಂಜುನಾಥ್ ವಕೀಲ,ಕೋಗಳಿ ಮಂಜುನಾಥ್, ಬಸಣ್ಣ,ಹನುಮಂತಪ್ಪ ಉಪಸ್ಥಿತರಿದ್ದರು