SUDDIKSHANA KANNADA NEWS/ DAVANAGERE/ DATE:29-10-2023
ವಿಜಯಪುರ: ರಾಜ್ಯದಲ್ಲಿ ಭೀಕರ ಬರಗಾಲ ತಲೆದೋರಿದ್ದು, ಅನ್ನದಾತರು ಸಂಕಷ್ಟಕ್ಕೊಳಗಾಗಿದ್ದಾರೆ. ಒಂದೆಡೆ ಮಳೆ ಇಲ್ಲ, ಮತ್ತೊಂದೆಡೆ ಬೆಳೆದ ಬೆಳೆ ಉಳಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ, ಮಾಡಿದ ಸಾಲ ತೀರಿಸುವುದು
ಹೇಗೆ ಎಂಬ ಚಿಂತೆಯಲ್ಲಿ ಅನ್ನದಾತ ಸಮೂಹ ಒಳಗಾಗಿದೆ.
ಸಾಲ ಮಾಡಿ ಸುಸ್ತಾಗಿರುವ ರೈತರು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಬರಗಾಲ ಹಾಗೂ ಸಾಲಬಾಧೆಗೆ ಬೇಸತ್ತು ರೈತ ಆತ್ಮಹತ್ಯೆಗೆ ಶರಣಾದ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ನಂದಗೇರಿ ಗ್ರಾಮದಲ್ಲಿ
ನಡೆದಿದೆ..

ಸಿದ್ದನಗೌಡ ಬಿರಾದಾರ (32) ಆತ್ಮಹತ್ಯಗೆ ಶರಣಾದ ರೈತ. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರೋ ಸಿದ್ದನಗೌಡ ಅವರು ಮಳೆಯಾಗದೇ ಬರದಿಂದ ಬೆಳೆ ಬಂದಿಲ್ಲವೆಂದು ನೊಂದಿದ್ದರು. ಫಸಲು ಬಾರದ ಕಾರಣ ಸಾಲ
ತೀರಿಸಲಾಗದೇ ಸಾವಿಗೆ ಶರಣಾಗಿದ್ದಾರೆ. ಖಾಸಗಿ ವ್ಯಕ್ತಿಗಳ ಬಳಿ 6 ಲಕ್ಷ ರೂಪಾಯಿ ಸಾಲ ಮಾಡಿದ್ದ ಸಿದ್ದನಗೌಡ ಅವರು ಸಾಲ ತೀರಿಸುವುದು ಹೇಗೆ ಎಂದು ಚಿಂತಾಕ್ರಾಂತರಾಗಿದ್ದರು. ಸಿಂದಗಿ ಪೊಲೀಸ್
ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಸಿದ್ದನಗೌಡ ಬಿರಾದಾರ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಸುಮಾರು 6 ಲಕ್ಷಕ್ಕೂ ಅಧಿಕ ಸಾಲದ ಬಾಧೆ ತಾಳಲಾರದೆ ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದ ಮೂಲಗಳಿಂದ ತಿಳಿದು
ಬಂದಿದೆ.
ಮೃತರ ಕುಟುಂಬಕ್ಕೆ ಭಗವಂತ ಶಕ್ತಿ ನೀಡಲಿ, ಮುಖ್ಯಮಂತ್ರಿಗಳೇ ನೋಡಿ ಬೇಗನೆ ಬರಗಾಲದ ಪರಿಹಾರ ಕೊಡಿ. ರೈತರ ಕಷ್ಟ ಹೇಳತೀರದು ಎಂಬ ಅಭಿಯಾನವೂ ಶುರುವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಾಕಿ
ಮನವಿ ಮಾಡುತ್ತಿದ್ದಾರೆ.