ಫರೀದಾಬಾದ್: ನಗರದಲ್ಲಿ ಅಳವಡಿಸಲಾಗಿರುವ ಸುಮಾರು 25 ಸಾವಿರ ಸ್ಮಾರ್ಟ್ ಸಿಸಿಟಿವಿ ಕ್ಯಾಮೆರಾಗಳು ಇದ್ದಾಗ್ಯೂ, ಹಿಟ್ ಅಂಡ್ ರನ್ ಪ್ರಕರಣದಲ್ಲಿ ಅಪಘಾತವೆಸಗಿದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಮೃತರ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಆಗಸ್ಟ್ 27ರ ರಾತ್ರಿ ಸುಮಾರು 8.35ರ ಸುಮಾರಿಗೆ ಫರೀದಾಬಾದ್‌ನ ದೇವಸ್ಥಾನವೊಂದರಿಂದ ಮನೆಗೆ ನಡೆದುಕೊಂಡು ಹಿಂತಿರುಗುತ್ತಿದ್ದ ಲಕ್ಷ್ಮಿ ನಾರಾಯಣ್ ಝನ್ವರ್ ಎಂಬುವರಿಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಲಕ್ಷ್ಮಿ ನಾರಾಯಣ್ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಸಂಬಂಧ ಮೃತರ ಮಗಳು ನೀಡಿದ ದೂರಿನ ಮೇರೆಗೆ ಸೂರಜ್‌ಕುಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ತನಿಖೆಯ ವಿರುದ್ಧ ಮಗನ ಆಕ್ರೋಶ:
ಫೇಸ್‌ಬುಕ್ (Meta) ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಮೃತರ ಮಗ ಅಮಿತ್, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಕಾರು ಅತ್ಯಂತ ವೇಗವಾಗಿ ಬಂದ ಕಾರಣ ತಂದೆಗೆ ತಪ್ಪಿಸಿಕೊಳ್ಳಲು ಯಾವುದೇ ಅವಕಾಶ ಸಿಗಲಿಲ್ಲ ಎಂದು ಹೇಳಿದ್ದಾರೆ. ನಗರದಲ್ಲಿ ಸಾವಿರಾರು ಸಿಸಿಟಿವಿಗಳಿದ್ದರೂ ಪೊಲೀಸರು ತನಿಖೆಯಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಕಾರಿನಲ್ಲಿದ್ದ ಪ್ರತಿಯೊಬ್ಬರನ್ನು ಪತ್ತೆಹಚ್ಚಬೇಕು, ಚಾಲಕ ಮದ್ಯಪಾನ ಮಾಡಿದ್ದನೇ ಅಥವಾ ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸುತ್ತಿದ್ದನೇ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕು ಹಾಗೂ ಎಫ್‌ಐಆರ್‌ನಲ್ಲಿ ಕಠಿಣ ಸೆಕ್ಷನ್‌ಗಳನ್ನು ಸೇರಿಸಬೇಕು ಎಂದು ಅಮಿತ್ ಆಗ್ರಹಿಸಿದ್ದಾರೆ.
ಪೊಲೀಸರ ಸ್ಪಷ್ಟನೆ:
ಘಟನೆಗೆ ಸಂಬಂಧಿಸಿದಂತೆ ಸೂರಜ್‌ಕುಂಡ್ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ ೧೦೬ ಮತ್ತು ೨೮೧ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೆಪ್ಟೆಂಬರ್ ೩ ರಂದು ಬ್ರಿಜೇಶ್ ಎಂಬ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಘಟನೆಗೆ ಬಳಸಲಾದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಸಿಸಿಟಿವಿ ದೃಶ್ಯಾವಳಿ ಹಾಗೂ ಲಭ್ಯವಿರುವ ಸಾಕ್ಷ್ಯಾಧಾರಗಳ ಆಧಾರದ ಮೇಲೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.





Leave a comment