ಮುಂಬೈ: ಬಾಲಿವುಡ್‌ನ ಜನಪ್ರಿಯ ನಟಿ ಇವಾ ಗ್ರೋವರ್ (Eva Grover) ತಮ್ಮ ಹಳೆಯ ವೈವಾಹಿಕ ಜೀವನದ ಕಹಿ ದಿನಗಳನ್ನು ನೆನೆದು ಕಣ್ಣೀರು ಹಾಕಿದ್ದಾರೆ. ನಟ ಆಮಿರ್ ಖಾನ್ ಅವರ ಮಲ ಸಹೋದರ ಹೈದರ್ ಅಲಿ ಖಾನ್ ಜೊತೆಗಿನ ತಮ್ಮ ಮದುವೆ ಹಾಗೂ ಎದುರಿಸಿದ ದೈಹಿಕ ದೌರ್ಜನ್ಯದ ಬಗ್ಗೆ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗವಾಗಿ ಮಾತನಾಡಿದ್ದಾರೆ.
ವಿಕ್ಕಿ ಲಾಲ್ವಾನಿ ಅವರಿಗೆ ನೀಡಿದ ಸಂದರ್ಶನದಲ್ಲಿ ಇವಾ ಗ್ರೋವರ್, ತಾವಿಬ್ಬರೂ ಕೇವಲ 18 ದಿನಗಳ ಕಾಲ ಡೇಟಿಂಗ್ ನಡೆಸಿ, ತಾಯಿಯ ವಿರೋಧದ ನಡುವೆಯೂ ಓಡಿ ಹೋಗಿ ಅಂತರ್ ಧರ್ಮೀಯ ವಿವಾಹವಾಗಿದ್ದಾಗಿ ತಿಳಿಸಿದ್ದಾರೆ. “ಮದುವೆಯಾದ 19ನೇ ದಿನವೇ ನಾನು ಅವರೊಂದಿಗೆ ಮನೆ ಬಿಟ್ಟೆ. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ನಾನು ಅಂದುಕೊಂಡ ವ್ಯಕ್ತಿ ಇವರಲ್ಲ ಎಂಬುದು ನನಗೆ ಅರಿವಾಯಿತು. ಅವರಿಗೆ ವಿಪರೀತ ಕೋಪದ ಸಮಸ್ಯೆ ಇತ್ತು, ಅವರು ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದರು” ಎಂದು ಇವಾ ಆರೋಪಿಸಿದ್ದಾರೆ.
ಮಗಳ ಜನನದ ನಂತರ ಸಂಬಂಧಕ್ಕೆ ಪೂರ್ಣವಿರಾಮ:
ದಾಂಪತ್ಯ ಜೀವನವನ್ನು ಉಳಿಸಿಕೊಳ್ಳುವ ಹರಸಾಹಸ ಪಟ್ಟ ಇವಾ, ಮದುವೆಯಾದ ನಾಲ್ಕು ವರ್ಷಗಳ ನಂತರ ಮಗುವನ್ನು ಹೊಂದಲು ನಿರ್ಧರಿಸಿದ್ದರು. ಮಗು ಜನಿಸಿದರೆ ಗಂಡನ ಸ್ವಭಾವ ಬದಲಾಗಬಹುದು ಎಂದು ಅವರು ಭಾವಿಸಿದ್ದರು. ಆದರೆ ಪರಿಸ್ಥಿತಿ ಸುಧಾರಿಸಲಿಲ್ಲ. ಮಗಳು ಹುಟ್ಟಿದ ಕೇವಲ ಒಂದು ತಿಂಗಳಲ್ಲೇ ತಾವು ತಾಳ್ಮೆ ಕಳೆದುಕೊಂಡಿದ್ದಾಗಿ ಮತ್ತು ಆ ನರಕದಿಂದ ಹೊರಬರಲು ನಿರ್ಧರಿಸಿದ್ದಾಗಿ ಇವಾ ಹೇಳಿದ್ದಾರೆ.
ಆ ಸಮಯದಲ್ಲಿ ತಾವು ನಟಿಸುತ್ತಿದ್ದ ‘ವಕ್ತ್ ಬತಾಯೇಗಾ ಕೌನ್ ಅಪ್ನಾ ಕೌನ್ ಪರಾಯಾ’ ಧಾರಾವಾಹಿಯ ಇಡೀ ಚಿತ್ರತಂಡ ಮತ್ತು ಸಹೋದ್ಯೋಗಿಗಳು ತಮ್ಮ ಮನೆಗೆ ಬಂದು, ತಾಯಿಯೊಂದಿಗೆ ಮಾತನಾಡಿ ಅಲ್ಲಿಂದ ಹೊರಬರಲು ಧೈರ್ಯ ತುಂಬಿದರು ಎಂದು ಇವಾ ಸ್ಮರಿಸಿದ್ದಾರೆ. ತಾಯಿ ಕೂಡ ತಮಗೆ ಆಸರೆಯಾದರು ಎಂದು ತಿಳಿಸಿದ್ದಾರೆ.
ಆದಾಗ್ಯೂ, ಹೈದರ್ ಅಲಿ ಖಾನ್ ಅವರನ್ನು ಸಾಕಿ ಬೆಳೆಸಿದ ಆಮಿರ್ ಖಾನ್ ಅವರ ತಂದೆ, ದಿವಂಗತ ಚಲನಚಿತ್ರ ನಿರ್ಮಾಪಕ ತಾಹೀರ್ ಹುಸೇನ್ ಮತ್ತು ಮಾಜಿ ಅತ್ತೆ ಶಹನಾಜ್ ಅವರು ತಮ್ಮ ಪರಿಸ್ಥಿತಿಯನ್ನು ನೋಡಿ ಕಣ್ಣೀರು ಹಾಕುತ್ತಿದ್ದರು ಹಾಗೂ ತಮಗೆ ಮಾನಸಿಕವಾಗಿ ಬೆಂಬಲ ನೀಡುತ್ತಿದ್ದರು ಎಂದು ಇವಾ ಗ್ರೋವರ್ ಅವರ ಒಳ್ಳೆಯ ಗುಣಗಳನ್ನು ನೆನಪಿಸಿಕೊಂಡಿದ್ದಾರೆ.





Leave a comment