SUDDIKSHANA KANNADA NEWS/ DAVANAGERE/ DATE:25-10-2023
ಬೆಂಗಳೂರು: ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರಲ್ಲಿ ಜಾರಿಗೆ ಬಂದಿದೆ. ಅದಾದ ಮೇಲೆ 80ರ ದಶಕ, 2000 ಹಾಗೂ 2022ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ವನ್ಯಪ್ರಾಣಿಗಳ ಹುಲಿ ಚರ್ಮ, ಜಿಂಕೆ ಚರ್ಮ, ಕೊಂಬು, ಆನೆ ದಂತ ಸೇರಿದಂತೆ ಯಾವುದೇ ಪ್ರಾಣಿಗಳ ಭಾಗಗಳನ್ನು ಸಾಗಣೆ ಮಾಡಲು, ಸ್ವಂತ ಇಟ್ಟುಕೊಳ್ಳಲು ಯಾವುದೇ ಅವಕಾಶ ಇಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.
ಬೀದರ್ ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ವನ್ಯಜೀವಿಗಳ ದೇಹದ ಭಾಗಗಳನ್ನು ಬಳಕೆ ಮಾಡಿದ್ದರೆ ಯಾರಾದರೂ ಸರಿ ಅದು ಶಿಕ್ಷಾರ್ಹ ಅಪರಾಧ. ಹುಲಿಯ ಉಗುರು ಕೆಲವರು ತಮ್ಮ ಕೊರಳಲ್ಲಿ ಹಾಕಿಕೊಂಡಿದ್ದಾರೆ ಎಂಬ ದೂರು ಬರುತ್ತಿವೆ. ಕೆಲವರು ಇಂದು ಹುಲಿಯ ಚರ್ಮ, ಮನೆಯಲ್ಲಿ ಉಪಯೋಗ ಮಾಡುತ್ತಿದ್ದಾರೆ ಎಂಬ ದೂರು ಬಂದಿದೆ. ಇಲಾಖೆ ಯಾವುದೇ ದೂರು ಬಂದರೂ ತನಿಖೆ ಮಾಡುತ್ತದೆ. ಕಾನೂನು ರೀತಿಯಲ್ಲಿ ಕ್ರಮ ಜರುಗಿಸುತ್ತಾರೆ. ಈ ನೆಲದ ಕಾನೂನು ಎಲ್ಲರಿಗೂ ಒಂದೇ ಎಂದು ತಿಳಿಸಿದರು.
ಕೆಲ ದೂರುಗಳು ದಾಖಲಾಗಿರುವ ಕುರಿತಂತೆ ಸಂಪೂರ್ಣವಾದ ಮಾಹಿತಿ ಇಲ್ಲ. ಆಯಾ ಭಾಗದಲ್ಲಿ ಯಾರ್ಯಾರು ದೂರು ಕೊಟ್ಟಿದ್ದಾರೋ ಅವುಗಳನ್ನು ಪರಿಶೀಲನೆ ಮಾಡಲಾಗುವುದು. ಅರಣ್ಯ ಇಲಾಖೆ ಅಧಿಕಾರಿಗಳು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಮಾಹಿತಿ ನೀಡಿದರು.
ರಾಮನಗರ ಬೆಂಗಳೂರಿಗೆ ಸೇರ್ಪಡೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರ್ಕಾರ ಜನಪರ ಆಡಳಿತ ನೀಡುತ್ತಿದೆ. ಒಳ್ಳೆಯಾದಗಲಿ ಎಂದು ಕೆಲಸ ಮಾಡುತ್ತದೆ. ಜನರ ಬೇಡಿಕೆ ಆಧಾರದ ಮೇಲೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್ ತೀರ್ಮಾನ ತೆಗೆದುಕೊಳ್ಳುತ್ತಾರೆ. ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಆರೋಪದಲ್ಲಿ ಹುರುಳಿಲ್ಲ. ಕನಕಪುರ, ರಾಮನಗರ ಜನರ ಭಾಗದ ಒಳಿತಿಗಾಗಿ ಮಾಡುತ್ತಿದ್ದೇವೆಂದು ಡಿಸಿಎಂ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಈಶ್ವರ್ ಖಂಡ್ರೆ ಮಾಹಿತಿ ನೀಡಿದರು.