ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಹಾಗೂ ತಮಿಳುನಾಡು ವೆಟ್ರಿ ಕಳಗಂ (ಟಿವಿಕೆ) ನಾಯಕ ಸಿ. ಜೋಸೆಫ್ ವಿಜಯ್ ಅವರನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸುತ್ತಿರುವ ಪಕ್ಷದ ನಾಯಕರ ಪ್ರಯತ್ನವನ್ನು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ (ಇಪಿಎಸ್) ತೀವ್ರವಾಗಿ ವ್ಯಂಗ್ಯವಾಡಿದ್ದಾರೆ. ವಿಜಯ್ ಅವರು ಮುಂದೊಂದು ದಿನ ಅಮೆರಿಕದ ಅಧ್ಯಕ್ಷರಾಗಿ ಟ್ರಂಪ್ ಅವರ ಸ್ಥಾನವನ್ನೇ ಬದಲಾಯಿಸಬಹುದು ಎಂದು ಲೇವಡಿ ಮಾಡಿದ್ದಾರೆ.
ಟಿವಿಕೆ ನಾಯಕರಾದ ಆದವ್ ಅರ್ಜುನ್ ಮತ್ತು ಶರತ್‌ಕುಮಾರ್ ಅವರು ವಿಜಯ್ ಅವರನ್ನು ದೇಶದ ಪ್ರಧಾನಿ ಹುದ್ದೆಗೆ ಪರಿಗಣಿಸಬೇಕು ಎಂದು ಬಹಿರಂಗವಾಗಿ ಹೇಳಿಕೆ ನೀಡಿರುವುದಲ್ಲದೆ, ತುಮಕೂರಿನಲ್ಲಿ “ವಿಜಯ್ for PM” ಎಂಬ ಪೋಸ್ಟರ್‌ಗಳನ್ನು ಹಂಚಿದ್ದಾರೆ. ಈ ಬೆಳವಣಿಗೆಯು ರಾಜ್ಯ ರಾಜಕಾರಣದಲ್ಲಿ ಹಾಗೂ ಮೈತ್ರಿಕೂಟಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇದಕ್ಕೆ ತಿರುಗೇಟು ನೀಡಿರುವ ಇಪಿಎಸ್, “ಅವರು ಬೇಕಾದರೆ ಅಮೆರಿಕದ ಅಧ್ಯಕ್ಷರಾಗಲಿ, ಟ್ರಂಪ್ ಬದಲಿಗೆ ಅಲ್ಲಿಗೆ ಹೋಗಲಿ, ತಪ್ಪೇನಿಲ್ಲ; ಅದು ಅವರ ಇಚ್ಛೆ. ಭಾರತದ ರಾಷ್ಟ್ರಪತಿ ಅಥವಾ ಪ್ರಧಾನಿಯೂ ಆಗಬಹುದು” ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣದ ರೀಲ್ಸ್‌ಗಳ ಮೂಲಕ ಸರ್ಕಾರ ನಡೆಸಲು ಸಾಧ್ಯವಿಲ್ಲ ಎಂದು ಟೀಕಿಸಿದ್ದು, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿದ್ದಾರೆ. ಮತ್ತೊಂದೆಡೆ, ಕಾಂಗ್ರೆಸ್ ನಾಯಕರು ಟಿವಿಕೆ ನಾಯಕರ ಈ ಪ್ರಚಾರವನ್ನು “ಅಭಿಮಾನಿ ಬಳಗದ ಮನಸ್ಥಿತಿ” ಎಂದು ಕರೆದಿದ್ದು, ಮೈತ್ರಿಕೂಟದಲ್ಲಿ ಬಿರುಕು ಮೂಡುವ ಸಾಧ್ಯತೆಗಳ ಬಗ್ಗೆಯೂ ಚರ್ಚೆಗಳು ಆರಂಭವಾಗಿವೆ.





Leave a comment