SUDDIKSHANA KANNADA NEWS/ DAVANAGERE/ DATE:14-01-2024
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ತಪ್ಪಿಸಬೇಕು ಎಂದುಕೊಂಡಿದ್ದಾರೆ. ನನ್ನ ಕಾಲು ಕಡಿಯಬೇಕು ಅಂತಾರೆ. ಪಾಯಿಸನ್ ಹಾಕಬೇಕು ಅಂತಾರೆ. ಹಾಗಾಗಿ ಬಹಳ ಹುಷಾರಾಗಿದ್ದೇನೆ. ಯಾರಾದರೂ ಏನಾದರೂ ಕೊಟ್ಟರೆ ತಿನ್ನಲು ಹೋಗುವುದಿಲ್ಲ. ಏನಾದರೂ ಹಾಕಿ ಮುಗಿಸಬೇಕು ಎಂದುಕೊಂಡಿದ್ದಾರೆ. ಸಿದ್ದೇಶಪ್ಪನನ್ನು ತೆಗೆಯಬೇಕು, ದಾವಣಗೆರೆಯಿಂದ ಓಡಿಸಬೇಕು ಎಂದುಕೊಂಡಿದ್ದಾರೆ. ರಾಜಕೀಯ ದ್ವೇಷ ಬಿಟ್ಟರೆ ಬೇರೆ ಏನೂ ಇಲ್ಲ ಎಂದು ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನನಗೆ ಜೀವ ಬೆದರಿಕೆ ಇಲ್ಲ. ಜೀವ ಭಯದಲ್ಲಿದೆ ಅಷ್ಟೇ. ಇದು ರಾಜಕೀಯ ದ್ವೇಷ. ನಾನು ಯಾರಿಗೂ ಜಗ್ಗಲ್ಲ, ಬಗ್ಗಲ್ಲ. ಬಿಜೆಪಿ ಟಿಕೆಟ್ ಘೋಷಿಸುವವರೆಗೂ ನಾನೇ ಅಭ್ಯರ್ಥಿ ಎಂದುಕೊಂಡಿದ್ದೇನೆ. ಹೈಕಮಾಂಡ್ ಯಾರಿಗೆ ಟಿಕೆಟ್ ಕೊಡುತ್ತೆ ಎಂಬುದು ಚುನಾವಣಾ ಸಮಯದಲ್ಲಿ ಗೊತ್ತಾಗುತ್ತದೆ. ಅಲ್ಲಿಯವರೆಗೆ ನಾನೇ ಅಭ್ಯರ್ಥಿ ಎಂದುಕೊಂಡಿದ್ದೇನೆ. ನಮ್ಮ ಕುಟುಂಬಕ್ಕೆ ಏಳು ಬಾರಿ ಬಿಜೆಪಿ ಟಿಕೆಟ್ ನೀಡಿದೆ. ಹಾಗಾಗಿ, ಬೇರೆ ಪಕ್ಷಕ್ಕೆ ಹೋಗುವ ಆಲೋಚನೆ ಇಲ್ಲ. ನನ್ನ ಪುತ್ರನನ್ನು ಕಾಂಗ್ರೆಸ್ ಗೆ ಕರೆದರು. ಯಾಕೆ ಈ ವಯಸ್ಸಿನಲ್ಲಿ ಬೇರೆ ಪಕ್ಷಕ್ಕೆ ಹೋಗಬೇಕು. ಯಾವುದೇ ಕಾರಣಕ್ಕೂ ಹೋಗುವುದಿಲ್ಲ. ನನ್ನ ಉಸಿರು ಇರುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ ಎಂದು ತಿಳಿಸಿದರು.
ಒಂದು ವೇಳೆ ಬಿಜೆಪಿ ಬೇರೆಯವರೆಗೆ ದಾವಣಗೆರೆ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗಿ ಟಿಕೆಟ್ ನೀಡಿದರೆ ತನು, ಮನ, ಧನದೊಂದಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ರಾಜಕೀಯ ದ್ವೇಷದಿಂದ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಯಾರೂ ನಂಬಲು ಹೋಗಬೇಡಿ. ನಾನು ಸೇವೆ ಮಾಡಲು ಅಷ್ಟೇ ಬಂದಿರುವುದು. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆರೋಪ, ಆಪಾದನೆಗಳಿಗೆ ಕಿವಿಗೊಡಬೇಡಿ. ಸುಳ್ಳು ಸುದ್ದಿಗೆ ಬೆಲೆ ಕೊಡಬೇಡಿ. ಕಾಂಗ್ರೆಸ್ ನವರು ನನ್ನ ಮೇಲೆ ಐಟಿ ದಾಳಿ ಮಾಡಬೇಕೆಂಬ ಆಗ್ರಹ ಮಾಡುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ನಾನು ನಿರಪರಾಧಿ. ಈ ಹಿಂದೆಯೇ ದಾಳಿ ಆಗಿದೆ. ನನ್ನ ಬಳಿ ಏನೂ ಸಿಕ್ಕಿಲ್ಲ. ನಾನು ಪಾರದರ್ಶಕವಾಗಿದ್ದೇನೆ ಎಂದು ಹೇಳಿದರು.
ಶೇಕಡಾ 40 ರಷ್ಟು ಕಮೀಷನ್ ಪಡೆದಿದ್ದೇನೆ ಎಂಬ ಆರೋಪ ಮಾಡಿದರು. ಇದೆಲ್ಲಾ ಶುದ್ಧ ಸುಳ್ಳು. ಈಗ ಬೇರೆಯದ್ದೇ ಆಪಾದನೆ ಮಾಡುತ್ತಿದ್ದಾರೆ. ಇದೆಲ್ಲಾ ಸುಳ್ಳು. ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ನಾನು ತಪ್ಪು ಮಾಡಿದ್ದರೆ ಹೆದರಬೇಕು. ಇಲ್ಲದಿದ್ದರೆ ಭಯ ನನಗ್ಯಾಕೆ ಎಂದು ಹೇಳಿದರು.
ಅಡಿಕೆಗೆ ಸಂಬಂಧಿಸಿದಂತೆ ಒಂದೂವರೆ ಕೋಟಿ ರೂಪಾಯಿ ಕಳ್ಳತನ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಈಗ ಕೇಳಿ ಬರುತ್ತಿರುವ ಆಪಾದನೆ ಸುಳ್ಳು. ಲೋಕಸಭೆ ಚುನಾವಣೆ ಬರುತ್ತಿರುವುದರಿಂದ ನನ್ನ ಮೇಲೆ ಆರೋಪ ಮಾಡಲಾಗುತ್ತಿದೆ. ಇದೆಲ್ಲಾ ಎಲೆಕ್ಷನ್ ಸ್ಟಂಟ್. ಡ್ರೈವರ್ ಯಾರು ಎಂಬುದೇ ಗೊತ್ತಿಲ್ಲ, ಮುಖವನ್ನೂ ಸಹ ನೋಡಿಲ್ಲ. ಕಳ್ಳ ಗಂಡ ಹೆಂಡತಿ ಹಣ ಕದ್ದಿದ್ದಾರೆ. ಈಗ 95 ಲಕ್ಷ ರೂಪಾಯಿ ಹಣ ವಾಪಸ್ ನೀಡಿದ್ದಾರೆ. ಈ ಸಂಬಂಧ ದೂರು ದಾಖಲಾಗಿದೆ. ನನಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲವೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿ ಲೋಕಸಭೆ ಸದಸ್ಯನಾಗುತ್ತೇನೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬ ದೃಷ್ಟಿಯಿಂದ ನನ್ನನ್ನು ಸೋಲಿಸಲೇಬೇಕು ಎಂಬ ರಾಜಕೀಯ ದ್ವೇಷದಿಂದ ನನ್ನೊಬ್ಬನ ಮೇಲೆ ಆರೋಪ ಮಾಡಲಾಗುತ್ತಿದೆ ಅಷ್ಟೇ. ಯಾರೂ ನಂಬಬೇಡಿ. ಜನರು ಮತ್ತೆ ನನಗೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸ ಇದೆ ಎಂದು ಸಿದ್ದೇಶ್ವರ ತಿಳಿಸಿದರು.
ನಾನೇ ಸ್ಪರ್ಧೆ ಮಾಡುತ್ತೇನೆ. ಬೇರೆ ಯಾರಿಗೆ ಟಿಕೆಟ್ ಕೊಟ್ಟರೂ ಸಂತೋಷ. ಏಳು ಬಾರಿ ನಮ್ಮ ಮನೆತನಕ್ಕೆ ಟಿಕೆಟ್ ಕೊಟ್ಟಿದ್ದು, ಮಗನನ್ನೇ ಕಾಂಗ್ರೆಸ್ ಗೆ ಕರೆದಿದ್ದಾರೆ. ನನಗೂ ಟಿಕೆಟ್ ಕೊಡುತ್ತೇವೆ ಎಂದು ಕರೆದರು. ನಾನು ಇದ್ದರೂ ಬಿಜೆಪಿ, ಸತ್ತರೂ ಬಿಜೆಪಿಯೇ. ಏಳು ಬಾರಿ ಟಿಕೆಟ್ ಕೊಟ್ಟಿದ್ದಾರೆ. ಮತ್ತೆ ಬೇರೆ ಪಕ್ಷಕ್ಕೆ ಹೋಗಬೇಕಾ? ಎಂದು ಪ್ರಶ್ನಿಸಿದರು.
ನನ್ನ ಮೇಲೆ ಆರೋಪ ಮಾಡಿರುವವನು ಕಳ್ಳ. ಆತನ ಹೆಂಡತಿಯೂ ಕಳ್ಳಿ. ಉಮೇಶ್ ಮತ್ತು ಮಲ್ಲಿಕಾರ್ಜುನ್ ಅವರು ಅಡಿಕೆ ಕಾರ್ಖಾನೆ ಮಾಡಿದ್ದಾರೆ. ಮಕ್ಕಳು ಹಾಸ್ಟೆಲ್ ನಲ್ಲಿದ್ದು, ತಂಗಿಯ ಮನೆಗೆ ಹೋಗಿದ್ದಾರೆ ಎಂದು ಹೇಳಿದ್ದಾರೆ. ಆಗ ಕಾರು ತೆಗೆದುಕೊಂಡು ಹೋದಾಗ ಕಾರು ಯಾರೂ ಇಲ್ಲದಿರುವುದನ್ನು ನೋಡಿಕೊಂಡು ಕೋಟಿ ರೂಪಾಯಿ ಲಪಟಾಯಿಸಿದ್ದಾನೆ. 95 ಲಕ್ಷ ರೂಪಾಯಿ ಡ್ರೈವರ್ ನಿಂದ ವಸೂಲಿ ಮಾಡಿದ್ದಾರೆ. ಕಳ್ಳರೇ ಕಳ್ಳತನ ಮಾಡಿದ್ದಾರೆ. ಎಲ್ಲಾ ಸೃಷ್ಟಿ ಚುನಾವಣೆ ದೃಷ್ಟಿಯಿಂದ. ಕಾಂಗ್ರೆಸ್ ಕಾರ್ಯಕರ್ತರು ಇಡಿ, ಐಟಿ ದಾಳಿ
ಆಗಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಕೇಳಿದ್ದಾರಂತೆ. ನಾನು ಅಪರಾಧ ಮಾಡಿಲ್ಲ, ಡ್ರೈವರ್ ನಮ್ಮ ಬಳಿ ಕೆಲಸ ಮಾಡಿರಲಿಲ್ಲ. ಏಳು ವರ್ಷದಿಂದ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿರುವುದು ಸುಳ್ಳು. ಈ ಪ್ರಕರಣ ಕುರಿತಂತೆ ಹೆಚ್ಚಿನ ಮಾಹಿತಿ ಇಲ್ಲ. ಬೇರೆಯವರ ಸುದ್ದಿ ನನಗ್ಯಾಕೆ ಎಂದು ಪ್ರಶ್ನಿಸಿದರು.
ಕಳ್ಳರು ಹೇಳಿದ್ದನ್ನು ಬರೆದುಕೊಂಡಿದ್ದಾರೆ. ಜಿ. ಎಂ. ಗ್ರೂಪ್ ಎಲ್ಲಿದೆ? ನನ್ನನ್ನು ಕೆಟ್ಟದಾಗಿ ಬಿಂಬಿಸಲು ಕಳ್ಳರು ಮಾಡಿರುವ ಬದುಕು, ಇದು ಕಳ್ಳರ ಗುಂಪಿನ ಪಿತೂರಿ. ಕಳ್ಳತನ ಮಾಡಿ ಕಳ್ಳ ಅಲ್ಲ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಅಷ್ಟೇ. ಈ ಪ್ರಕರಣದಲ್ಲಿ ಬೇರೆ ಏನೂ ಇಲ್ಲ ಎಂದು ಸಿದ್ದೇಶ್ವರ ಸ್ಪಷ್ಟಪಡಿಸಿದರು.