SUDDIKSHANA KANNADA NEWS/ DAVANAGERE/ DATE:03-03-2024
ದಾವಣಗೆರೆ: ಜನರಿಗೆ ಜನಸ್ನೇಹಿ ಆಡಳಿತ ನೀಡುವ ಮೂಲಕ ಮನೆ ಬಾಗಿಲಿಗೆ ಸೌಲಭ್ಯ ಕಲ್ಪಿಸುವ ಜೊತೆಗೆ ಪಂಚ ಗ್ಯಾರಂಟಿಗಳನ್ನು ಅರ್ಹ ಎಲ್ಲರಿಗೂ ಮುಟ್ಟಿಸುವ ಕೆಲಸವನ್ನು ಮಾಡಲಾಗುತ್ತದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ಅವರು ದಾವಣಗೆರೆ ತಾಲೂಕಿನ ದೊಡ್ಡಬಾತಿ ಗ್ರಾಮದಲ್ಲಿ ಜಿಲ್ಲಾ ಅಡಳಿತ, ಜಿಲ್ಲಾ ಪಂಚಾಯತ್ ಹಾಗೂ ಗ್ರಾಮ ಪಂಚಾಯಿತಿ ದೊಡ್ಡಬಾತಿ ಹಾಗೂ ಹಳೆಬಾತಿ ಗ್ರಾಮ ಪಂಚಾಯಿತಿಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರಿಂದ ಅಹವಾಲು ಸ್ವೀಕಾರ, ವಿವಿಧ ಸರ್ಕಾರಿ ಸೌಲಭ್ಯಗಳ ವಿತರಣೆ ಹಾಗೂ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನರ ಸಮಸ್ಯೆಗಳು, ಕುಂದುಕೊರತೆಗಳನ್ನು ಇತ್ಯಾರ್ಥ ಮಾಡುವ ಉದ್ದೇಶದಿಂದ ಅಧಿಕಾರಿಗಳ ತಂಡವೇ ಜನರ ಮನೆ ಬಾಗಿಲಿಗೆ ಬಂದು ಅರ್ಜಿ ಪಡೆದು ಸರ್ಕಾರದ ಸೌಲಭ್ಯ ಕಲ್ಪಿಸುವ ಮೂಲಕ ಜನರ ಕುಂದುಕೊರತೆಗಳಿಗೆ ಸ್ಪಂದಿಸಲಾಗುತ್ತಿದೆ. ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ನೀಡಿದ್ದು ಇದು ಎಲ್ಲಾ ಕುಟುಂಬಕ್ಕೂ ಸಿಕ್ಕಿದೆ. ಆದರೆ ಯಾವುದೇ ಕುಟುಂಬ, ಫಲಾನುಭವಿಗಳಿಗೆ ಈ ಯೋಜನೆಗಳನ್ನು ಪಡೆಯಲು ಸಾಧ್ಯವಾಗದಿದ್ದಲ್ಲಿ ಅವರಿಗೆ ತಕ್ಷಣವೇ ಮುಟ್ಟಿಸುವ ಕೆಲಸ ಮಾಲಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ಪ್ರಾಸ್ತಾವಿಕವಾಗಿ ಮಾತನಾಡಿ ದೊಡ್ಡಬಾತಿ, ಹಳೆಬಾತಿ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಮನೆ ಮನೆಗೆ ಭೇಟಿ ನೀಡಿ ಜನರ ಕುಂದುಕೊರತೆಯ ಅಹವಾಲು ಸ್ವೀಕರಿಸಲಾಗಿದೆ. ಎರಡು ಗ್ರಾಮಗಳಿಂದ 908 ಅರ್ಜಿಗಳು ಇಲ್ಲಿಯವರೆಗೆ ಸ್ವೀಕೃತವಾಗಿವೆ. ಜ್ವಲಂತ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ನೀಲನಹಳ್ಳಿ ಗ್ರಾಮದಲ್ಲಿ ಗ್ರಾಮಠಾಣಾ ಅಧಿಸೂಚನೆ ಹೊರಡಿಸಿ ಇ-ಸ್ವತ್ತು ನೀಡಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾ ಸಹಕಾರ ಬ್ಯಾಂಕ್ ಮೂಲಕ 89 ಜನರಿಗೆ ಹೈನುಗಾರಿಕೆ ಮಾಡಲು ಹಸು ಕೊಡಿಸಲಾಗಿದೆ ಎಂದ ಅವರು ಜನರಿಂದ ಸ್ವೀಕರಿಸಲಾದ ಕುಂದುಕೊರತೆಗಳನ್ನು ನಿವಾರಿಸುವ ಮೂಲಕ ಜನರಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್ ಮಾತನಾಡಿ ಅಂಗನವಾಡಿ ಕೇಂದ್ರ ನಿರ್ಮಾಣ, ಖಾತರಿಯಡಿ ದನದ ಕೊಟ್ಟಿಗೆ ನಿರ್ಮಾಣ, ಸಚಿವರ ನಿರ್ದೇಶನದಂತೆ ದೊಡ್ಡಬಾತಿ
ಗ್ರಾಮದಲ್ಲಿ ಎಲ್ಲ ಕಡೆ ಚರಂಡಿ ನಿರ್ಮಾಣ ಮಾಡಲು ಕ್ರಮ ವಹಿಸಲಾಗುತ್ತದೆ ಎಂದ ಅವರು ಗ್ರಾಮ ಪಂಚಾಯಿತಿ ಸೇವೆಗಳನ್ನು ಇನ್ನು ಮುಂದೆ ವಾಟ್ಸಪ್ ಮೂಲಕ ಪಡೆಯಬಹುದಾಗಿದೆ ಎಂದರು.
ದೊಡ್ಡಬಾತಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಂಜುಳಾ.ಡಿ ಇವರು ಅಧ್ಯಕ್ಷತೆ ವಹಿಸಿದ್ದರು. ಹಳೆಬಾತಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸೀತಾ ಆರ್, ದೊಡ್ಡಬಾತಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಭಾನುವಳ್ಳಿ ಸಿದ್ದಪ್ಪ, ಹಳೇಬಾತಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪುಷ್ಪ ಎ, ಅಪರ ಜಿಲ್ಲಾಧಿಕಾರಿ ಸೈಯ್ಯದಾ ಅಫ್ರೀನ್ ಭಾನು ಎಸ್.ಬಳ್ಳಾರಿ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಕರಿಬಸಪ್ಪ, ಗಿರೀಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಉಪವಿಭಾಗಾಧಿಕಾರಿ ದುರ್ಗಾಶ್ರೀ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಗರ್ಭಿಣಿ ತಾಯಂದಿರಿಗೆ ಸೀಮಂತ, ವಿಕಲಚೇತನರಿಗೆ ಸಾಧನಾ ಸಲಕರಣೆ, ಕಾರ್ಮಿಕ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ, ನಿವೇಶನ ಹಕ್ಕುಪತ್ತ ವಿತರಣೆ ಸೇರಿದಂತೆ ಇನ್ನಿತರೆ
ಸೌಲಭ್ಯಗಳನ್ನು ವಿತರಿಸಲಾಯಿತು. ಸಂವಿಧಾನ ಪೀಠಿಕೆ ಓದುವ ಮೂಲಕ ಪ್ರತಿಜ್ಞೆ ಸ್ವೀಕರಿಸಲಾಯಿತು.