SUDDIKSHANA KANNADA NEWS/ DAVANAGERE/ DATE:20-12-2024
ಬೆಳಗಾವಿ: ವಿಧಾನ ಪರಿಷತ್ ಸದಸ್ಯ ಸಿ. ಟಿ. ರವಿ ಬಂಧನಕ್ಕೆ ರಾಜ್ಯ ಬಿಜೆಪಿ ನಾಯಕರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿ. ಟಿ. ರವಿ ಪ್ರಯಾಣಿಸುತ್ತಿರುವ ವಾಹನ ತಡೆಯಬೇಡಿ. ಹೋಗಲು ಅನುವು ಮಾಡಿಕೊಡಿ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ವಿಜಯೇಂದ್ರ ಮನವಿ ಮಾಡಿದರು.
ಬೆಳಗಾವಿಯ ಚನ್ನಮ್ಮ ವೃತ್ತದ ಬಳಿ ಮಾಜಿ ಸಚಿವರು ಹಾಗೂ ವಿಧಾನಪರಿಷತ್ ಸದಸ್ಯ ಸಿ. ಟಿ. ರವಿ ಅವರ ಬಂಧನ ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಸುವರ್ಣಸೌಧದೊಳಕ್ಕೆ ನುಗ್ಗಿ ಕೆಲವು ಕಾಂಗ್ರೆಸ್ ಪುಡಾರಿಗಳು,
ರೌಡಿಗಳು ದಾಂಧಲೆ ನಡೆಸಿದವರು ಹಾಗೂ ನಡುರಸ್ತೆಯಲ್ಲಿ ಹಲ್ಲೆ ಮಾಡಲು ಪ್ರಚೋದನೆ ನೀಡಿದವರನ್ನೂ ಸಹ ಬಂಧಿಸಬೇಕು. ಅಲ್ಲದೇ ಸಭಾಪತಿಗಳ ಗಮನಕ್ಕೂ ತರದೆ ಏಕಾಏಕಿ ಸಿ.ಟಿ ರವಿ ಅವರನ್ನು ಬಂಧಿಸಿದ್ದು ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿ. ಟಿ. ಅವರಿಗೆ ಗಾಯವಾಗಿದ್ದರೂ ಆಸ್ಪತ್ರೆಗೆ ಕರೆದುಕೊಂಡು ಹೋಗದೇ ರಾತ್ರಿಯೆಲ್ಲಾ 400-500 ಕಿ.ಮೀ ಸುತ್ತಾಡಿಸಿ ಬೆಂಗಳೂರಿನ ನ್ಯಾಯಾಲಯಕ್ಕೆ ಹಾಜರು ಪಡಿಸುತ್ತೇವೆ ಎಂದು ಗದಗ, ರಾಮದುರ್ಗ ಸೇರಿ ಎಲ್ಲಾ ಪೊಲೀಸ್ ಸ್ಟೇಷನ್ ಸುತ್ತಾಡಿಸಿ ದ್ವೇಷ ಹಾಗೂ ಕೀಳುಮಟ್ಟದ ರಾಜಕೀಯ ಮಾಡುವ ಮೂಲಕ ಪ್ರಜಾಪ್ರಭುತ್ವಕ್ಕೆ ಕೊಳ್ಳಿ ಇಡಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ನಡೆ ಖಂಡಿಸಲಾಯಿತು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಆರೋಪಿಸಿದರು.
ಪ್ರತಿಭಟನೆಯಲ್ಲಿ ವಿರೋಧ ಪಕ್ಷ ನಾಯಕ ಆರ್. ಅಶೋಕ, ಉಪ ನಾಯಕ ಅರವಿಂದ ಬೆಲ್ಲದ, ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನೀಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಮಾಜಿ ಶಾಸಕರಾದ ಸಂಜಯ್ ಪಾಟೀಲ್, ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್, ಗೀತಾ ಸುತಾರ್, ಸತೀಶ್ ಅಪ್ಪಾಜಿಗೋಳ ಸೇರಿದಂತೆ ಪದಾಧಿಕಾರಿಗಳು, ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.