SUDDIKSHANA KANNADA NEWS/ DAVANAGERE/ DATE:31-01-2024
ದಾವಣಗೆರೆ: ಮಂಡ್ಯ ನಗರದ ಬಿ ಎಂ ರಸ್ತೆಯಲ್ಲಿರುವ ಜಿಲ್ಲಾ ಕುರುಬರ ಸಂಘದ ಸಾರ್ವಜನಿಕ ವಿದ್ಯಾರ್ಥಿ ನಿಲಯ ಕಟ್ಟಡದ ಮೇಲೆ ಕಲ್ಲುತೂರಾಟ ಮಾಡಿ ಕಟ್ಟಡದ ಕಿಟಕಿ ಗಾಜುಗಳನ್ನು ಧ್ವಂಸಗೊಳಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘ, ದಾವಣಗೆರೆ ಜಿಲ್ಲಾ ಕುರುಬರ ಸಂಘ ಹಾಗೂ ಸಮಾಜದ ವಿವಿಧ ಸಂಘಟನೆಗಳ ಸದಸ್ಯರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ಲೋಕೇಶ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಮುಖಂಡ, ನಿವೃತ್ತ ಸಬ್ ರಿಜಿಸ್ಟ್ರರ್ ಮಲ್ಲಿಕಾರ್ಜುನಪ್ಪ ಕಳೆದ ಜನವರಿ 29ರ ಮಧ್ಯಾಹ್ನ ಸುಮಾರು ಎರಡು ಗಂಟೆ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ.
ಕುಮಾರಸ್ವಾಮಿ, ಮಾಜಿ ಸಚಿವ ಸಿ. ಟಿ. ರವಿ ನೇತೃತ್ವದಲ್ಲಿ ಮಂಡ್ಯ ತಾಲೂಕಿನ ಕೆರೆಗೋಡು ಗ್ರಾಮದಲ್ಲಿ ನಡೆದ ಹನುಮಧ್ವಜದ ವಿವಾದದ ಪ್ರತಿಭಟನೆಯ ಮೆರವಣಿಗೆ ಸಮಯದಲ್ಲಿ ಮಂಡ್ಯ ನಗರದ ಬಿಎಂ. ರಸ್ತೆಯಲ್ಲಿರುವ ಮಂಡ್ಯ ಜಿಲ್ಲಾ ಕುರುಬರ ಸಂಘದ ಸಾರ್ವಜನಿಕ ವಿದ್ಯಾರ್ಥಿ ನಿಲಯ ಕಟ್ಟಡದ ಮೇಲೆ ಕಲ್ಲುತೂರಾಟ ಮಾಡಿ ಕಟ್ಟಡದ ಕಿಟಕಿ, ಗಾಜುಗಳನ್ನು ಧ್ವಂಸಗೊಳಿಲಾಗಿದೆ. ಇಂಥ ಕಿಡಿಗೇಡಿಗಳ ವಿರುದ್ಧ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಮಾಜದ ಮುಖಂಡ ಎಸ್. ಎಸ್. ಗಿರೀಶ್ ಮಾತನಾಡಿ, ಕಟ್ಟಡದ ಮೇಲೆ ಇದ್ದ ಸಂಗೊಳ್ಳಿ ರಾಯಣ್ಣ ಮತ್ತು ಕನಕದಾಸರ ಭಾವಚಿತ್ರಕ್ಕೆ ಅವಮಾನ ಮಾಡಲಾಗಿದೆ. ಈಗ ಸ್ಥಳೀಯರನ್ನು ಕೇಳಿದಾಗ ಪ್ರತಿಭಟನಾಕಾರರು ಅಲ್ಲಿದ್ದ ವಾಹನಗಳಿಗೆ ಬೆಂಕಿ ಹಚ್ಚುವ ಹುನ್ನಾರ ನಡೆಸಿದ್ದು ಬೆಳಕಿಗೆ ಬಂದಿದೆ. ಈ ವಿವಾದವನ್ನು ರಾಜಕೀಯ ದುರುದ್ದೇಶಕ್ಕಾಗಿ ಸೃಷ್ಟಿಸಲಾಗಿದೆ. ಚಿತ್ರದುರ್ಗದಲ್ಲಿ ನಡೆದ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಶೋಷಿತರ ಸಮಾವೇಶ ಯಶಸ್ವಿಯಾಗಿರುವುದನ್ನು ಸಹಿಸಲಾಗದೆ ಅಸೂಯೆಯಿಂದ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಇಂತಹ ಹೀನ ಕೃತ್ಯಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದರು.
ಹೆಚ್. ಡಿ. ಕುಮಾರಸ್ವಾಮಿ ಅವರು ಮತ್ತು ಬಿಜೆಪಿ ಪಕ್ಷದ ಮುಖಂಡರು ಹಿಂದೂ ಧರ್ಮವನ್ನು ಗುತ್ತಿಗೆಗೆ ತೆಗೆದುಕೊಂಡವರ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ನಾಡಿನಲ್ಲಿ ಭಯ ಮತ್ತು ದಬ್ಬಾಳಿಕೆಯ ವಾತಾವರಣ ಸೃಷ್ಟಿಸಲು ಹೊರಟಿದ್ದಾರೆ ಎಂದು ಹೇಳಿದರು.
ಈ ದಬ್ಬಾಳಿಕೆ ಮತ್ತು ನೀಚ ಕೃತ್ಯವನ್ನು ಸಮರ್ಥವಾಗಿ ಎದುರಿಸಲು ರಾಜ್ಯದಲ್ಲಿರುವ ಕುರುಬ ಸಮಾಜ ಶಕ್ತವಾಗಿದೆ ಎಂಬುದನ್ನು ಈ ಮೂಲಕ ತಿಳಿಸುತ್ತೇವೆ. ಕುರುಬ ಸಮಾಜದ ಸಹನೆ ಮತ್ತು ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಭಕ್ತ ಕನಕದಾಸರು ಕುರುಬರು ಹಿಂದೂಗಳು ಎಂಬುದನ್ನು ಕಲ್ಲು ತೂರಿದ ಕಿಡಿಗೇಡಿಗಳು ಅರ್ಥ ಮಾಡಿಕೊಳ್ಳಬೇಕಾಗಿದೆ. ಇಂತಹ ಪ್ರಯತ್ನಕಾರಿ ಕೃತ್ಯಗಳಿಂದ ಯುವಕರನ್ನು ದಾರಿ ತಪ್ಪಿಸುವ ಕೆಲಸವನ್ನು ಕೂಡಲೇ ನಿಲ್ಲಿಸಬೇಕು. 2023 ವಿಧಾನಸಭಾ ಚುನಾವಣೆಯ ಮುಂಚೆ ತಾವು ಧರ್ಮ ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸವನ್ನು ಮಾಡಿದ್ದೀರಿ. ಈಗ ಜಾತಿ ಜಾತಿಗಳ ಮಧ್ಯೆ ವಿಷ ಬೀಜವನ್ನು ಹೆಚ್ಚಿಸುವ ಕೆಲಸಕ್ಕೆ ಕೈ ಹಾಕಿದ್ದೀರಿ. ಸಮಾಜದಲ್ಲಿ ಸಾಮರಸ್ಯದಿಂದ ಕೂಡಿ ಬಾಳ್ವೆಯನ್ನು ನಡೆಸುತ್ತಿರುವ ಎಲ್ಲಾ ಸಮುದಾಯಗಳನ್ನು ಒಡೆದು ಆಳುವ ನೀತಿಯನ್ನು ಈ ಕೂಡಲೇ ನಿಲ್ಲಿಸದಿದ್ದರೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ. ತಕ್ಕ ರೀತಿ ಪಾಠವನ್ನು ಎರಡು ಪಕ್ಷಗಳಿಗೆ ಕಲಿಸಬೇಕಾಗುತ್ತದೆ. ಈ ಕೃತ್ಯಕ್ಕೆ ಪ್ರಚೋದನೆ ನೀಡಿದ ಮತ್ತು ಕ್ಯತ್ಯಯನ್ನು ಎಸಗಿದ ಸಮಾಜಘಾತಕರ ವಿರುದ್ಧ ಸೂಕ್ತ ಎಚ್ಚರಿಕೆಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಸಮಾಜದ ಮುಖಂಡರಾದ ಕುಂಬಳೂರು ವಿರುಪಾಕ್ಷಪ್ಪ, ಕೆ. ರೇವಣಸಿದ್ದಪ್ಪ, ಎಚ್.ಬಿ. ಗೋಣೀಪ, ಪರಶುರಾಮ್ ಕೆ., ಪರಶುರಾಮ್ ಬಿ. ದಿಳ್ಯಪ್ಪ, ಪ್ರೊ. ಬಿ. ಯಲ್ಲಪ್ಪ ಕುಂಬಳೂರು, ಎಂ. ವಿರೂಪಾಕ್ಷಪ್ಪ, ಮಳಲಕೆರೆ ಪ್ರಕಾಶ್, ಸುನಂದಮ್ಮ, ಜಡಗನಹಳ್ಳಿ ಚಿಕ್ಕಣ್ಣ, ಹೆಚ್. ಜಿ. ಸಂಗಪ್ಪ, ಜೆಕೆ ಕೊಟ್ರ ಬಸಪ್ಪ, ದೀಪಕ್, ಜಡಗ್ನಳ್ಳಿ ವಿರೂಪಾಕ್ಷಪ್ಪ, ಶ್ರೀನಿವಾಸ್, ಆನಂದ, ಎಂ. ಮನು, ಪುರಂದರ ಲೋಕಿಕೆರೆ, ಅನಂತಪ್ಪ ಮತ್ತಿತರರು ಪಾಲ್ಗೊಂಡಿದ್ದರು.