SUDDIKSHANA KANNADA NEWS/ DAVANAGERE/ DATE:25-02-2024
ಬೆಂಗಳೂರು: ಲೋಕಸಭೆ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿವೆ. ಇನ್ನು ಉಳಿದಿರುವುದು ಕೆಲವೇ ತಿಂಗಳು ಮಾತ್ರ ಬಾಕಿ. ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಣೆಗೆ ಕಾಂಗ್ರೆಸ್ ಪಕ್ಷವು ಬಿಸಿ ಬಿಸಿ ಚರ್ಚೆ ನಡೆಸಿದೆ. ಇನ್ನು ಈ ಬಾರಿ ಪಾದಯಾತ್ರೆ, ಜನಪರ, ಜನೋಪಯೋಗಿ, ಸಮಾಜ ಸೇವೆ, ಪಕ್ಷ ಸಂಘಟನೆ ಕುರಿತಂತೆ ತಮ್ಮದೇ ಆದ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಗಮನ ಸೆಳೆದಿರುವ ಕಾಂಗ್ರೆಸ್ ಔಟ್ರಿಚ್ ವಿಭಾಗದ ರಾಜ್ಯ ಉಪಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ.
ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜಿವಾಲ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಟ್ಟಿಗೆ ಲೋಕಸಭಾ ಟಿಕೆಟ್ ಕುರಿತಂತೆ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಬಲ ಆಕಾಂಕ್ಷಿ ವಿನಯ್ ಕುಮಾರ್ ಜಿ.ಬಿ ಅವರು ದೀರ್ಘ ಸಮಾಲೋಚನೆ ನಡೆಸಿದರು.
ಹೈಕಮಾಂಡ್ ಮಟ್ಟದಲ್ಲಿಯೂ ವಿನಯ್ ಕುಮಾರ್ ಅವರಿಗೆ ಟಿಕೆಟ್ ನೀಡುವ ಕುರಿತಂತೆ ಸಮಾಲೋಚನೆ ನಡೆದಿದೆ. ಬಲ್ಲ ಮೂಲಗಳ ಪ್ರಕಾರ ಈಗ ಇಬ್ಬರ ಹೆಸರು ಹೈಕಮಾಂಡ್ ಮಟ್ಟದಲ್ಲಿದೆ. ಹೈಕಮಾಂಡ್ ಪ್ಯಾನಲ್ ನಲ್ಲಿ ವಿನಯ್ ಕುಮಾರ್ ಹಾಗೂ ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಈ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡುವುದು ಪಕ್ಕಾ ಆಗಿದೆ ಎಂದು ಎಐಸಿಸಿ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.
ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸ್ಪರ್ಧೆ ಮಾಡುವುದಾದರೆ ಅವರಿಗೆ ಟಿಕೆಟ್ ನೀಡಲು ಹೈಕಮಾಂಡ್ ನಿರ್ಧರಿಸಿದೆ. ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರಿಗೆ ಸ್ಪರ್ಧೆ ಮಾಡುವಂತೆ ಹೈಕಮಾಂಡ್ ಸೂಚನೆ ನೀಡಿದ್ದು, ಇದನ್ನು ತಿರಸ್ಕರಿಸಿದ್ದಾರೆ. ಹಾಗಾಗಿ, ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಈ ನಡುವೆ ಪ್ರಬಲ ಆಕಾಂಕ್ಷಿಯಾಗಿರುವ ವಿನಯ್ ಕುಮಾರ್ ಅವರು ಜಿಲ್ಲೆಯಾದ್ಯಂತ ಪ್ರವಾಸ ಮಾಡಿದ್ದಲ್ಲದೇ, ರಾಜ್ಯ ಹಾಗೂ ಹೈಕಮಾಂಡ್ ಮಟ್ಟದಲ್ಲಿಯೂ ತೀವ್ರವಾಗಿ ಪ್ರಯತ್ನ ನಡೆಸಿದ್ದಾರೆ. ಟಿಕೆಟ್ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಎಲ್ಲಾ ವರಿಷ್ಠರನ್ನು ಭೇಟಿ ಮಾಡಿ ಈಗಾಗಲೇ ಟಿಕೆಟ್ ನೀಡುವಂತೆ ಮನವಿ ಸಲ್ಲಿಸಿದ್ದಾರೆ.
ಈ ಬಾರಿ ಟಿಕೆಟ್ ನೀಡಿದರೆ ಗೆಲ್ಲುವ ಭರವಸೆ ಹೊಂದಿರುವ ವಿನಯ್ ಕುಮಾರ್ ಅವರು ಇದಕ್ಕಾಗಿ ಈಗಾಗಲೇ ತಂತ್ರಗಾರಿಕೆ ನಡೆಸಿದ್ದಾರೆ. ಮಹತ್ವದ ಬೆಳವಣಿಗೆಯೊಂದರಲ್ಲಿ ವಿನಯ್ ಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧನಿದ್ದು, ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ “ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶ”ದ ಸಮಾರೋಪ ಸಮಾರಂಭಕ್ಕೆ ಕಾಂಗ್ರೆಸ್ ನಾಯಕರ ದಂಡೇ ಆಗಮಿಸಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸಿಎಂ
ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ ಸಿಂಗ್ ಸುರ್ಜಿವಾಲ ಸೇರಿದಂತೆ ಘಟಾನುಘಟಿ ನಾಯಕರು ನಾಯಕರು ಆಗಮಿಸಿದ್ದರು. ನಾಯಕರ ಜೊತೆ ಟಿಕೆಟ್ ನೀಡುವಂತೆ ಮನವಿ ಮಾಡಿದರಲ್ಲದೇ, ಈ ಬಾರಿ ಬಿಜೆಪಿ ಮಣಿಸಲು
ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇನೆ. ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ರಾಹುಲ್ ಗಾಂಧಿ ಅವರು ಸಹ ಯುವಕರಿಗೆ ಹೆಚ್ಚಿನ ಪ್ರಾಶಸ್ತ್ಯ, ಆದ್ಯತೆ ನೀಡುವ ಕುರಿತಂತೆ ಗಂಭೀರವಾಗಿ ಚಿಂತನೆ ನಡೆಸಿದ್ದಾರೆ ಎಂದು ಎಐಸಿಸಿ ಮೂಲಗಳು ತಿಳಿಸಿವೆ. ಕೆಪಿಸಿಸಿ ಹೇಳುವ ಪ್ರಕಾರವೂ ಇದು ನಿಜವಾಗಿದೆ. ಯುವಕರಿಗೆ ಹೆಚ್ಚಿನ
ಅವಕಾಶ ನೀಡಿದರೆ ಬಿಜೆಪಿ ಎದುರಿಸಲು ಅನುಕೂಲವಾಗಲಿದೆ. ಯುವಸಮುದಾಯದ ಮತಗಳನ್ನು ಕಾಂಗ್ರೆಸ್ ಗೆ ಸೆಳೆಯುವಂತೆ ಟಾಸ್ಕ್ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ವಿನಯ ನಡಿಗೆ, ಹಳ್ಳಿಗಳ ಕಡೆಗೆ
ಜನರ ಸಮಸ್ಯೆಗಳಿಗೆ ಧ್ವನಿಯಾಗುವ ದೃಷ್ಟಿಯಿಂದ, ಪಾದಯಾತ್ರೆಯ ಮೂಲಕ ಜನರ ಬಳಿ ತೆರಳಿ, ಸಮಸ್ಯೆಗಳನ್ನು ಆಲಿಸಿ, ಮುಂದೆ ಅಧಿಕಾರಕ್ಕೆ ಬಂದಾಗ ಆ ಸಮಸ್ಯೆಗಳನ್ನು ಪರಿಹರಿಸುವ ಭರವಸೆಯನ್ನು ನೀಡಿ, ಜನರು ಮತ್ತು ಜನಪ್ರತಿನಿಧಿಗಳ ಮಧ್ಯೆ ಆರೋಗ್ಯಕರ ಬಾಂಧವ್ಯವನ್ನು ಬೆಳೆಸುವುದೇ ಈ ಪಾದಯಾತ್ರೆಯ ಮೂಲ ಉದ್ದೇಶ ಎಂದು ವಿನಯ್ ಕುಮಾರ್ ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದಾರೆ. ಜನರ, ಪ್ರೀತಿ, ವಿಶ್ವಾಸ ಗಳಿಸಿದ್ದಾರೆ.
ವಿನಯ್ ಕುಮಾರ್ ಏನಂದ್ರು…?
ಈಗಾಗಲೇ ಹೈಕಮಂಡ್ ಮಟ್ಟದಲ್ಲಿ ನನ್ನ ಹೆಸರು ಚರ್ಚೆಯಾಗುತ್ತಿರುವುದು ನಿಜ. ಮಾತ್ರವಲ್ಲ, ಈಗಾಗಲೇ ಎಐಸಿಸಿ ವರಿಷ್ಠರು, ರಾಜ್ಯ ವರಿಷ್ಠರು, ಜಿಲ್ಲಾ ಘಟಕದವರು ಹೆಸರು ಪ್ರಸ್ತಾಪ ಮಾಡಿದ್ದಾರೆ. ಪಕ್ಷದ ಮುಖಂಡರು, ಕಾರ್ಯಕರ್ತರು, ಶಾಸಕರು ಸೇರಿದಂತೆ ಎಲ್ಲರೂ ನನ್ನನ್ನು ಬೆಂಬಲಿಸುವ ವಿಶ್ವಾಸ ಇದೆ. ಅದೇ ರೀತಿಯಲ್ಲಿ ಹೈಕಮಾಂಡ್ ನಲ್ಲಿ ಮತ್ತೊಬ್ಬರ ಹೆಸರು ಸಹ ಚರ್ಚೆಯಾಗುತ್ತಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಕಾಂಗ್ರೆಸ್ ಪಕ್ಷವು ಟಿಕೆಟ್ ನೀಡುತ್ತದೆ ಎಂಬ ವಿಶ್ವಾಸ ನನ್ನದು ಎಂದು ಹೇಳುತ್ತಾರೆ.
ಸಾಮಾಜಿಕ ನ್ಯಾಯ ಕಲ್ಪನೆಯಡಿ ಕಾಂಗ್ರೆಸ್ ಪಕ್ಷ ದೇಶದ ಜನರಿಗೆ ಹಲವಾರು ಯೋಜನೆಗಳನ್ನು ನೀಡಿದೆ. ಬಡವರು, ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ವರ್ಗದವರಿಗೆ ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹ ಜ್ಯೋತಿ, ಶಕ್ತಿ ಸೇರಿದಂತೆ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಮಹಿಳೆಯರ ಒಲವು ಕಾಂಗ್ರೆಸ್ ಪಕ್ಷದ ಮೇಲಿದೆ. ಎಲ್ಲಾ ವರ್ಗದ ಜನರೂ ಸಹ ಈ ಕಾರ್ಯಕ್ರಮಗಳನ್ನು ಒಪ್ಪಿಕೊಂಡಿದ್ದಾರೆ. ನನಗೆ ಟಿಕೆಟ್ ನೀಡಿದರೆ ಗೆಲ್ಲುವುದು ಖಚಿತ ಎಂಬುದು ವಿನಯ್ ಕುಮಾರ್ ಅವರ ವಿಶ್ವಾಸ, ದೃಢವಾದ ಮಾತು.