SUDDIKSHANA KANNADA NEWS/ DAVANAGERE/ DATE:18-02-2024
ದಾವಣಗೆರೆ: ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ನವರತ್ನ ಕಂಪನಿಯಿಂದ ರೂ.1.63 ಕೋಟಿ ವೆಚ್ಚದಲ್ಲಿ ವಿನೂತ ತಾಂತ್ರಿಕತೆಯಿಂದ ಬಿಸಿನೀರು ಪೂರೈಕೆ ಮಾಡಲು ಪರಿಕರಗಳನ್ನು ಪೂರೈಕೆ ಮಾಡಿದ್ದು ಜಿಲ್ಲೆಗೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಅನುಕೂಲತೆಗೆ ಕಾರಣವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಹೇಳಿದರು.
ಅವರು ಇಎಸ್ಐ ಆಸ್ಪತ್ರೆಯಲ್ಲಿ ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಕಂಪನಿಯಿಂದ ಗಾಳಿಯ ಮೂಲಕ ಹೀಟ್ ಪಂಪ್ ಉಪಯೋಗಿಸಿ ಬಿಸಿನೀರು ಸಂಗ್ರಹಿಸಿ ಪೂರೈಸುವ ಟ್ಯಾಂಕರ್ ಹಸ್ತಾಂತರ ಮಾಡಿ ಸಮಾರಂಭದಲ್ಲಿ ಮಾತನಾಡಿದರು.
ಇದೊಂದು ಅತ್ಯಾಧುನಿಕ ತಂತ್ರಜ್ಞಾನವಾಗಿದ್ದು ಅತ್ಯಂತ ಕಡಿಮೆ ಮಾತ್ರದ ವಿದ್ಯುತ್ ಬಳಕೆಯ ಮೂಲಕ ವಾತಾವರಣದ ಗಾಳಿ ಬಳಸಿ ಬಿಸಿ ನೀರು ಒದಗಿಸಲಾಗುತ್ತದೆ. ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ, ಬಾಲಮಂದಿರದಲ್ಲಿನ ಮಕ್ಕಳಿಗೆ ಹಾಗೂ ಮಹಿಳಾ ನಿಲಯದಲ್ಲಿನ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.
ಬಿಸಿನೀರು ಪೂರೈಕೆ ಮಾಡುವ ಸಾಧನಗಳನ್ನು ಇಎಸ್ಐ ಆಸ್ಪತ್ರೆ, ಬಾಲಮಂದಿರ ಹಾಗೂ ರಾಜ್ಯ ಮಹಿಳಾ ನಿಲಯದಲ್ಲಿ ಸಿಎಸ್ಆರ್ ನಿಧಿಯಡಿ ಅಳವಡಿಸಲಾಗುತ್ತಿದೆ. ಕಂಪನಿಯೊಂದಿಗೆ ಕಳೆದ ಡಿಸೆಂಬರ್ ನಲ್ಲಿ ಜಿಲ್ಲಾಡಳಿತ ಒಡಂಬಡಿಕೆ ಮಾಡಿಕೊಂಡಿದ್ದು 45 ದಿನಗಳಲ್ಲಿಯೇ ಯೋಜನೆಯನ್ನು ಕಂಪನಿ ಅನುಷ್ಟಾನ ಮಾಡುವ ಮೂಲಕ ಜಿಲ್ಲೆಯ ಜನರಿಗೆ ಅನುಕೂಲ ಕಲ್ಪಿಸಿದೆ ಎಂದು ವಿವರಿಸಿದರು.
ಈ ವರ್ಷ ಪವರ್ಗ್ರಿಡ್ ಕಂಪನಿಯಿಂದ ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ ಅತ್ಯಾಧುನಿಕ ಸಾಧನಗಳನ್ನು ಅಳವಡಿಕೆಗೆ ಆದ್ಯತೆ ನೀಡಿದ್ದು ಇದುವರೆಗೆ ರೂ.5 ಕೋಟಿ ಮೊತ್ತದ ಪರಿಕರಗಳನ್ನು ಒದಗಿಸಲಾಗಿದೆ. ಇದೇ ಆರ್ಥಿಕ ವರ್ಷದಲ್ಲಿ ಮಾಡಿಕೊಂಡಿರುವ ಒಡಂಬಡಿಕೆಯಂತೆ ಆರೋಗ್ಯ ಮತ್ತು ಪೌಷ್ಟಿಕತೆಯ ಸುಧಾರಣೆಗಾಗಿ ರೂ.15 ಕೋಟಿ ಮೊತ್ತದ ಕ್ರಿಯಾ ಯೋಜನೆ ಮುಂದಿನ ದಿನಗಳಲ್ಲಿ ಸಾಕಾರಗೊಳ್ಳಲಿದ್ದು ಜಿಲ್ಲೆಗೆ ಬಹುದೊಡ್ಡ ಕೊಡುಗೆ ನೀಡುತ್ತಿರುವ ಕಂಪನಿಗೆ ಜಿಲ್ಲಾಡಳಿತ ಎಲ್ಲಾ ಸಹಕಾರ ನೀಡಲಿದೆ ಎಂದರು.
ಕಾರ್ಯಕ್ರಮದಲ್ಲಿ ಪವರ್ ಗ್ರಿಡ್ ಕಂಪನಿಯ ಜನರಲ್ ಮ್ಯಾನೇಜರ್ ಹರೀಶ್ ಕುಮಾರ್ ನಾಯರ್, ಇಎಸ್ಐ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಬಸವನಗೌಡ ಜಿ.ಎಂ, ನರ್ಸಿಂಗ್ ಸೂಪರಿಂಡೆಂಟ್ ಗಣೇಶ್, ಬಾಲ ಮಂದಿರದ ಅಧೀಕ್ಷಕರಾದ ಫಾತಿಮಾ ಹೆಚ್., ಮಹಿಳಾ ನಿಲಯದ ಅಧೀಕ್ಷಕಿ ಶಕುಂತಲಾ ಬಿ.ಕೋಲಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.