SUDDIKSHANA KANNADA NEWS/ DAVANAGERE/ DATE:17-03-2024
ದಾವಣಗೆರೆ: ಸಾರ್ವಜನಿಕರು ಯಾವುದೇ ದಾಖಲೆಗಳಿಲ್ಲದೇ ರೂ.50 ಸಾವಿರವರೆಗೆ ಪ್ರಯಾಣದ ವೇಳೆ ಕೊಂಡೊಯ್ಯಬಹುದಾಗಿದೆ. ಇನ್ನು ಹೆಚ್ಚಿನ ನಗದು ತೆಗೆದುಕೊಂಡು ಹೋಗಲು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 190 ಸೆಕ್ಟರ್ ಅಧಿಕಾರಿಗಳ ನೇಮಕ; ಹರಪನಹಳ್ಳಿ ಸೇರಿ 8 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 190 ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮತಗಟ್ಟೆಗಳಲ್ಲಿ ನಿರಂತರ ಪ್ರವಾಸ ಕೈಗೊಂಡು ಮತದಾರರಲ್ಲಿ ಜಾಗೃತಿ ಮೂಡಿಸುವುದು, ಇವಿಎಂ ಗಳ ಬಳಕೆ ಬಗ್ಗೆ ಮತದಾರರಿಗೆ ಜಾಗೃತಿ ಮೂಡಿಸುವುದು ಮತ್ತು ಮತದಾರರಿಗೆ ಬೆದರಿಕೆ ಉಂಟು ಮಾಡುವವರ ಮೇಲೆ ನಿಗಾವಹಿಸಿ ಮುಕ್ತ, ನ್ಯಾಯ ಸಮ್ಮತ ಚುನಾವಣೆ ನಡೆಯಲು ಪ್ರತಿ ಹಂತದ ವರದಿಯನ್ನು ನೀಡುವರು ಎಂದು ಹೇಳಿದರು.
ಕಂಟ್ರೋಲ್ ರೂಂ ಸ್ಥಾಪನೆ:
ಮತದಾರರಿಗೆ ಆಮಿಷವೊಡ್ಡಿ ಅನಧಿಕೃತವಾಗಿ ಮದ್ಯ, ಹಣ ಹಾಗೂ ಇತರೆ ವಸ್ತುಗಳ ಹಂಚಿಕೆ ಮಾಡಿ ಮತದಾರರ ಮೇಲೆ ಪ್ರಭಾವಭೀರುವ ಕೆಲಸ ಮಾಡಿದಲ್ಲಿ ದೂರು ನೀಡಲು ಹಾಗೂ ಸಹಾಯಕ್ಕಾಗಿ ಕಂಟ್ರೋಲ್ ರೂಂ ಸ್ಥಾಪನೆ ಮಾಡಲಾಗಿದೆ. 1950 ಹಾಗೂ 18004250380 ಟೋಲ್ ಫ್ರೀ ನಂಬರ್ಗೆ ಕರೆ ಮಾಡಬಹುದಾಗಿದೆ. ಮತ್ತು ಸಿವಿಜಿಲ್ ಆಫ್ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ಅದರ ಛಾಯಾಚಿತ್ರ, ವಿಡಿಯೋ ಮೂಲಕ ಮಾಹಿತಿಯನ್ನು ನೀಡಬಹುದಾಗಿದೆ.
ಮಾಧ್ಯಮಗಳಲ್ಲಿ ಬರುವ ಕಾಸಿಗಾಗಿ ಸುದ್ದಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ, ತೇಜೋವಧೆ ಮಾಡುವಂತಹ ಸುದ್ದಿಗಳನ್ನು ಪೋಸ್ಟ್ ಮಾಡುವುದರ ಮೇಲೆ ನಿಗಾವಹಿಸಲು ಮೀಡಿಯಾ ಮಾನಿಟರಿಂಗ್ ತಂಡ, ಸಾಮಾಜಿಕ ಜಾಲತಾಣಾ ವೀಕ್ಷಣಾ ತಂಡವನ್ನು ನೇಮಕ ಮಾಡಲಾಗಿದೆ. ಯಾವುದೇ ರಾಜಕೀಯ ಜಾಹೀರಾತುಗಳನ್ನು ಮುದ್ರಣ ಮಾಧ್ಯಮ ಹೊರತುಪಡಿಸಿ ಇತರೆ ಮಾಧ್ಯಮಗಳಲ್ಲಿ ಜಾಹೀರಾತು ನೀಡಲು ಎಂ.ಸಿ.ಎಂ.ಸಿ ಅನುಮತಿ ಕಡ್ಡಾಯವಾಗಿರುತ್ತದೆ.
ವಿದ್ಯುನ್ಮಾನ ಮತಯಂತ್ರ ಬಳಕೆ:
ಪ್ರಸಕ್ತ ಲೋಕಸಭಾ ಚುನಾವಣೆಗೆ ಎಂ.3 ಮೇಕ್ 2023 ವಿದ್ಯುನ್ಮಾನ ಮತಯಂತ್ರಗಳ ಬಳಕೆ ಮಾಡಲಾಗುತ್ತಿದ್ದು ಬಿಇಎಲ್ ನಿಂದ ತಯಾರಿಸಲಾದ ಬ್ಯಾಲೆಟ್ ಯುನಿಟ್ 2526, ಕಂಟ್ರೋಲ್ ಯುನಿಟ್ 2339, ವಿವಿಪ್ಯಾಟ್ 2534 ಯಂತ್ರಗಳ ಬಳಕೆ ಮಾಡಲಾಗುತ್ತಿದೆ ಎಂದರು.