SUDDIKSHANA KANNADA NEWS/ DAVANAGERE/ DATE:19-02-2025
ಬೆಂಗಳೂರು: ಜಾತಿಗಣತಿ ವರದಿ ಅನುಷ್ಠಾನ ಶತಸಿದ್ಧ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಂತೆ ಕರ್ನಾಟಕ ಕಾಂಗ್ರೆಸ್ ನಲ್ಲಿ ಕೊತ ಕೊತ ಶುರುವಾಗಿದೆ. ಒಕ್ಕಲಿಗ, ಲಿಂಗಾಯತ ಶಾಸಕರು ಈ ವರದಿ ಜಾರಿಗೆ ಹಿಂದಿನಿಂದಲೂ ವಿರೋಧ ಪಡಿಸಿಕೊಂಡೇ ಬಂದಿದ್ದಾರೆ. ಅದರಲ್ಲಿಯೂ ಡಿಸಿಎಂ ಡಿ. ಕೆ. ಶಿವಕುಮಾರ್ ಹಾಗೂ ಲಿಂಗಾಯತ ಸಮುದಾಯದ ಶಾಸಕರಿಗೆ ಠಕ್ಕರ್ ಕೊಡಲು ಸಿಎಂ ತಂತ್ರಗಾರಿಕೆ ರೂಪಿಸಿರುವುದು ಸ್ಪಷ್ಟ.
ಸಿಎಂ ಬದಲಾವಣೆ ವಿಚಾರ ಹೈಕಮಾಂಡ್ ಮುಟ್ಟಿದೆ. ಸಿದ್ದರಾಮಯ್ಯರು ಹೈಕಮಾಂಡ್ ನಿರ್ಧಾರದಂತೆ ನಡೆದುಕೊಳ್ಳುವುದಾಗಿ ಹೇಳಿದ್ದಾರೆ. ಈ ನಡುವೆ ಎರಡೂವರೆ ವರ್ಷ ಹತ್ತಿರವಾಗುತ್ತಿದ್ದಂತೆ ಸಿದ್ದರಾಮಯ್ಯ ರಾಜಕೀಯ
ದಾಳ ಉರುಳಿಸಿದ್ದಾರೆ. ಈ ಮೂಲಕ ಡಿಕೆಶಿ ಬಣಕ್ಕೆ ಟಾಂಗ್ ಕೊಡಲು ಜಾತಿ ಗಣತಿ ವರದಿ ಜಾರಿ ಅಸ್ತ್ರ ಉಪಯೋಗಿಸಿಕೊಳ್ಳುತ್ತಿರುವುದು ಸ್ಪಷ್ಟ.
ಜಾತಿ ಗಣತಿ ವರದಿಯು ವೈಜ್ಞಾನಿಕವಾಗಿ ನಡೆದಿದ್ದು ಅದನ್ನು ನಮ್ಮ ಸರ್ಕಾರ ಖಂಡಿತವಾಗಿಯೂ ಜಾರಿಗೊಳಿಸುತ್ತದೆ ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಂತೆ ಅಹಿಂದ ಶಾಸಕರು ಬೆಂಬಲಿಸಿದ್ದರೆ, ಒಕ್ಕಲಿಗರು, ಲಿಂಗಾಯತ ಶಾಸಕರು ಬಹಿರಂಗವಾಗಿ ವಿರೋಧ ವ್ಯಕ್ತಪಡಿಸದಿದ್ದರೂ, ಒಳಗೊಳಗೆ ಕೊತಕೊತ ಕುದಿಯುವಂತೆ ಮಾಡಿದೆ.
ಸರ್ಕಾರ ಜಾತಿ ಗಣತಿ ಪರವಾಗಿದೆ. ವರದಿಯನ್ನು ಸ್ವೀಕರಿಸಿದೆ. ಮುಂದಿನ ದಿನಗಳಲ್ಲಿ ಅದನ್ನು ಖಂಡಿತವಾಗಿಯೂ ಜಾರಿ ಮಾಡಲಾಗುತ್ತದೆ ಅದರ ಬಗ್ಗೆ ಅನುಮಾನ ಬೇಡ ಎಂದು ತಿಳಿಸಿದ್ದಾರೆ. ಮಾತ್ರವಲ್ಲ. ಜಾತಿ ಗಣತಿಯ ವರದಿ ವೈಜ್ಞಾನಿಕವಾಗಿ ತಯಾರಾಗಿದ್ದು ಸಮಾಜದ ಎಲ್ಲಾ ವರ್ಗಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ತಿಳಿಯಲು ಅನುಕೂಲ ಆಗಿದೆ. ಈ ಪ್ರಕಾರ ಸರ್ಕಾರದ ಕಾರ್ಯಕ್ರಮಗಳನ್ನು ರೂಪಿಸಲು ಸಹಕಾರಿಯಾಗುತ್ತದೆ ಎಂದಿದ್ದಾರೆ. ಇನ್ನು ಸಿದ್ದರಾಮಯ್ಯರ ಈ ನಿರ್ಧಾರಕ್ಕೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಡಿ. ಕೆ. ಶಿವಕುಮಾರ್ ಯಾವ ರೀತಿ ದಾಳ ಉರುಳಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.