SUDDIKSHANA KANNADA NEWS/ DAVANAGERE/ DATE:21-02-2025
ದಾವಣಗೆರೆ: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಅವರಿಗೆ ಲೋಕಾಯುಕ್ತ ತನಿಖೆ ನಡೆಸಿ ಕ್ಲೀನ್ ಚಿಟ್ ನೀಡಿರುವುದು ಖುಷಿ ತಂದಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ವಿರುದ್ಧ ಬಿಜೆಪಿಯವರು ಷಡ್ಯಂತ್ರದಿಂದ ಕೇಸ್ ಆಗಿತ್ತು. ಈಗ ಲೋಕಾಯುಕ್ತವೇ ಕ್ಲೀನ್ ಚಿಟ್ ನೀಡಿದೆ. ಬಿಜೆಪಿಯವರಿಗೆ ನ್ಯಾಯಾಂಗ ತಕ್ಕ ಪಾಠ ಕಲಿಸಿದೆ ಎಂದು ಹೇಳಿದರು.
14 ಸೈಟ್ ಗಳ ಬಗ್ಗೆ ಮಾತ್ರ ಚರ್ಚೆ ಆಗ್ತಿದೆ. ಆದರೆ 125ಕ್ಕೂ ಹೆಚ್ಚು ಸೈಟ್ ಗಳ ಬಗ್ಗೆ ಮಾತ್ರ ಚರ್ಚೆಯಾಗುತ್ತಿಲ್ಲ ಏಕೆ? ಈ ಸೈಟ್ ಗಳನ್ನು ನೀಡಿದವರು ಯಾರು, ಯಾವ ಬೇಸೀಸ್ ಮೇಲೆ ಕೊಟ್ರು ಎನ್ನುವುದು ಚರ್ಚೆ ಆಗಬೇಕಲ್ವ. ಬಿಜೆಪಿ ಅವಧಿಯಲ್ಲಿ ಪ್ರಾರಂಭ ಮಾಡಿದ ವಿವಿ ಗಳನ್ನು ಕಾಂಗ್ರೆಸ್ ಸರ್ಕಾರ ಮುಚ್ಚುತ್ತಿದೆ ಎನ್ನುವ ಆರೋಪ ಮಾಡುವುದು ಸರಿಯಲ್ಲ. ಬಿಜೆಪಿ ಅವಧಿಯಲ್ಲಿ ವಿವಿ ಗಳನ್ನು ಪ್ರಾರಂಭ ಮಾಡಿದರು. ಆದರೆ ಎಷ್ಟು ಹಣವನ್ನು ವಿವಿಗೆ ಮೀಸಲಿಟ್ಟಿದ್ದಾರೆ ಎನ್ನುವುದು ಗೊತ್ತಾ? ಒಂದು ವಿವಿಗೆ ಎರಡು ಕೋಟಿ ಅನುದಾನ ಬಿಡುಗಡೆ ಮಾಡಿದರೆ ಅದು ಸಾಧ್ಯನಾ. ವಿವಿಗಳನ್ನು ಪ್ರಾರಂಭಿಸುವುದಕ್ಕೆ ರಾಜಕೀಯವಾಗಿ ಯೋಚನೆ ಮಾಡುವುದಕ್ಕಿಂತ ಸೌಲಭ್ಯ ಒದಗಿಸಬೇಕಲ್ವ ಎಂದು ಪ್ರಶ್ನಿಸಿದರು.
ಗೃಹ ಲಕ್ಷ್ಮಿ ಹಣದ ಬಗ್ಗೆ ಚರ್ಚೆ ಆಗ್ತಾ ಇದೆ. ಆದರೆ 15 ಲಕ್ಷದ ಬಗ್ಗೆ ಮಾತ್ರ ಚರ್ಚೆ ಆಗ್ತಾ ಇಲ್ಲ. ಕೇಂದ್ರ ಸರ್ಕಾರ ಹೇಳಿದ ಕಾಮಗಾರಿಗಳು ಬಗ್ಗೆ ಮಾತ್ರ ಚರ್ಚೆ ಆಗ್ತಾ ಇಲ್ಲ. ಮೂರು ತಿಂಗಳ ಗೃಹ ಲಕ್ಷ್ಮೀ ಹಣ ಬಂದಿಲ್ಲ ಎಂದರೆ ಅಯ್ಯೋಯ್ಯೋ ಬಂದಿಲ್ಲ ಎನ್ನುವಂತೆ ಕೇಳುತ್ತೀರಿ. ಮೇಕ್ ಇನ್ ಇಂಡಿಯಾ ಎಲ್ಲಿ ಬಂದಿದೆ ಹೇಳಿ. ನಮಗೆ ಈಗ ಒಂದು ಕಡ್ಡಿ ಪಟ್ಟಣ ಬರಬೇಕು ಎಂದರೆ ಅದು ಚೈನಾದಿಂದ ಬರಬೇಕು. ದೀಪಾವಳಿ ಗೆ ದೀಪಿಕಾ ಪಟಾಕಿ ಬರಬೇಕು ಎಂದರೆ ಚೈನಾದಿಂದ ಬರಬೇಕು. ಎಲ್ಲಿ ಹೋಯ್ತು ಮತ್ತೆ ಮೇಕ್ ಇನ್ ಇಂಡಿಯಾ. ಅದರ ಪ್ರಚಾರಕ್ಕೆ ಎಷ್ಟು ಹಣ ಖರ್ಚಾಗಿದೆ ಎನ್ನುವುದರ ಬಗ್ಗೆ ಚರ್ಚೆಯಾಗಿಬೇಕು. ಇಂತಹ ಚರ್ಚೆಗೆ ಅವರು ಬರೋದಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಕೇಂದ್ರ ನಾಯಕರನ್ನು ಟೀಕೆ ಮಾಡಿದರೆ ರಾಜ್ಯದಲ್ಲಿ ಸಚಿವರಿಗೆ ಅವರ ಸ್ಥಾನ ಉಳಿಯುತ್ತದೆ ಎಂದಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಹಣೆಬರಹ ಅದು ಯಾರು ಏನು ಮಾಡೋಕೆ ಆಗೋಲ್ಲ. ದೇಶದ ಜನತೆಗೆ ಕೇಂದ್ರದ ಐದು ಮಂತ್ರಿಗಳ ಹೆಸರು ಗೊತ್ತಿಲ್ಲದಂತೆ ಮಾಡಿದ್ದಾರೆ ಪ್ರಧಾನಿಗಳು. ಎಲ್ಲದಕ್ಕೂ ಪ್ರಧಾನಿಗಳನ್ನೇ ತೋರಿಸಿದರೆ ಜಿಲ್ಲಾ, ತಾಲ್ಲೂಕು ಗ್ರಾಮ ಪಂಚಾಯತಿ ಏಕೆ ಬೇಕು. ನಿತಿನ್ ಗಡ್ಕರಿಯವರು ಈ ದೇಶದ ಪ್ರಧಾನಿಯಾದರೆ ಈ ದೇಶ ಉತ್ತಮವಾಗಿರುತ್ತದೆ. ಆದ್ದರಿಂದ ಅವರಿಗೆ ಚರ್ಚೆಯಾಗ್ತಾ ಇದೆ ಅವರು ಆಗಲಿ ಎಂದು ಹೇಳಿದರು.