SUDDIKSHANA KANNADA NEWS/ DAVANAGERE/ DATE:17-02-2024
ದಾವಣಗೆರೆ: ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ಮಂಡಿಸಿದ 2024 25 ನೇ ಸಾಲಿನ ಆಯವ್ಯಯ ಮುಂಗಡಪತ್ರದಲ್ಲಿ ವಿಶ್ವ ಕನ್ನಡ ಸಮ್ಮೇಳನಕ್ಕೆ ಅನುದಾನವನ್ನು ಘೋಷಿಸದೆ ಇರುವುದಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ವಿಶ್ವ ಕನ್ನಡಿಗರಿಗೆ ತೀವ್ರ ಅಸಮಾಧಾನವನ್ನು ಉಂಟು ಮಾಡಿದೆ ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ ವಾಮದೇವಪ್ಪ ಹೇಳಿದ್ದಾರೆ.
ಈ ಹಿಂದೆ ಘೋಷಿಸಿದಂತೆ ದಾವಣಗೆರೆಯಲ್ಲಿ ವಿಶ್ವಕನ್ನಡ ಸಮ್ಮೇಳನ ನಡೆಸುವ ಹಾಗೂ 30 ಕೋಟಿ ರೂಪಾಯಿ ಅನುದಾನವನ್ನು ತೆಗೆದಿರಿಸಿ ಆದೇಶ ಹೊರಡಿಸಿದ್ದರು. ನಿಕಟ ಪೂರ್ವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ತಾವು ಮಂಡಿಸಿದ ಆಯವ್ಯದಲ್ಲಿ ಹಣವನ್ನು ಕೊಡುವುದಾಗಿ ಘೋಷಿಸಿದ್ದರು. ಕನ್ನಡಿಗರ ಬಗ್ಗೆ ಅಪಾರ ಹಾಗೂ ಅನನ್ಯ ಗೌರವ ಹೊಂದಿದ್ದ ಮತ್ತು ನುಡಿದಂತೆ ನಡೆಯುತ್ತೇನೆ ಎಂಬ ಖ್ಯಾತಿಗೆ ಹೆಸರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಶ್ವ ಕನ್ನಡ ಸಮ್ಮೇಳನಕ್ಕೆ ತಮ್ಮ ಆಯವ್ಯಯದಲ್ಲಿ ಅನುದಾನ ಘೋಷಿಸದೆ ಇರುವುದು ಬೇಸರ ತರಿಸಿದೆ ಎಂದು ತಿಳಿಸಿದ್ದಾರೆ.
ಇತ್ತೀಚಿಗೆ ದಾವಣಗೆರೆಗೆ ಬಂದಾಗ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ವಿಶ್ವ ಕನ್ನಡ ಸಮ್ಮೇಳನಕ್ಕೆ ಅನುದಾನ ಮಂಜೂರು ಮಾಡುವಂತೆ ವಿನಂತಿಸಿ ಮನವಿ ಪತ್ರ ಸಲ್ಲಿಸಲಾಗಿತ್ತು. ಈಗ ತಾವು ಆಯವ್ಯಯದ ಮೇಲಿನ ಉತ್ತರದಲ್ಲಿಯಾದರೂ ಅನುದಾನವನ್ನು ಘೋಷಿಸಿ ಕನ್ನಡಿಗರ ಮನಸನ್ನು ಗೆಲ್ಲಬೇಕೆಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಿನಂತಿಸುತ್ತದೆ ಎಂದು ಹೇಳಿದ್ದಾರೆ.
ನಾಡೋಜ ಡಾ. ಮಹೇಶ ಜೋಶಿ ಬೇಸರ:
ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮಂಡಿಸಿದ ಆಯವ್ಯಯದಲ್ಲಿ , ಕನ್ನಡ-ಕನ್ನಡಿಗ-ಕರ್ನಾಟಕದ ಹಿತರಕ್ಷಣೆಯನ್ನು ಕಡೆಗಣಿಸಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಕನ್ನಡಪರ ಚಟುವಟಿಕೆಗಳನ್ನು ಅಯೋಜಿಸಲು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹೆಚ್ಚಿನ ಅನುದಾನವನ್ನು ನೀಡಬೇಕಾಗಿತ್ತು. ಆದರೆ, ಅವಶ್ಯಕತೆಗೆ ತಕ್ಕಂತೆ ಅನುದಾನ ನೀಡದಿರುವುದು ಹಾಗೂ ಇತರೆ ಇಲಾಖೆಗಳಿಗೆ ಸ್ಪಷ್ಟ ಅನುದಾನದ ಅಂಕಿಅಂಶಗಳನ್ನು ನೀಡಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಯಾವುದೇ ಸ್ಪಷ್ಟ ಅನುದಾನದ ಮೊತ್ತವನ್ನು ಘೋಷಿಸದೇ ಇತರೆ ಸಾಲಿನಲ್ಲಿ ಸೇರಿಸಿರುವುದು ವಿಷಾದನೀಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
1973ರಲ್ಲಿ ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂಬ ಹೆಸರನ್ನು ಮರುನಾಮಕರಣ ಮಾಡಲು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಯತ್ನ ಅಮೋಘವಾದದ್ದೆಂದು, ಅಂದಿನ ಮುಖ್ಯ ಮಂತ್ರಿಗಳಾದ ಡಿ. ದೇವರಾಜರಸು ಅವರು 1974ರಲ್ಲಿ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ, ಶ್ಲಾಘಿಸಿ ಸುದೀರ್ಘ ಭಾಷಣ ಮಾಡಿದ್ದರು,” ಎಂಬ ವಿಷಯವನ್ನು ಈ ಸಂದರ್ಭದಲ್ಲಿ ನೆನೆಸಿಕೊಳ್ಳಬೇಕು ಎಂದು ನಾಡೋಜ ಡಾ. ಮಹೇಶ ಜೋಶಿಯವರು ಹೇಳಿದ್ದಾರೆ.
“ಪ್ರಸಕ್ತ ವರ್ಷದಲ್ಲಿ, ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಘೋಷವಾಕ್ಯವನ್ನು ಹೊರಡಿಸಿದ್ದ ಸರ್ಕಾರವು ಸುವರ್ಣ ಮಹೋತ್ಸವ ವರ್ಷದಲ್ಲಿ 2024ರ ಜೂನ್ 7,8 ಮತ್ತು 9ರಂದು ಮಂಡ್ಯ ಜಿಲ್ಲೆಯಲ್ಲಿ, 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಮುಖ್ಯಮಂತ್ರಿಗಳೊಡನೆ ಚರ್ಚಿಸಿ, ಈ ಸಮ್ಮೇಳನಕ್ಕೆ 30 ಕೋಟಿ ರೂಪಾಯಿಗಳ ಅನುದಾನವನ್ನು ನೀಡುವಂತೆ ಮನವಿ ಸಲ್ಲಿಸಲಾಗಿತ್ತು. ಸುವರ್ಣ ಮಹೋತ್ಸವ ಆಚರಣೆಯ ಮೊದಲ ಅಖಿಲ ಭಾರತ ಸಮ್ಮೇಳನವಾದ್ದರಿಂದ, ಈ ಸಮ್ಮೇಳನವನ್ನು ಅದ್ದೂರಿಯಾಗಿ ಆಚರಿಸಿ ಅಭೂತಪೂರ್ವವಾಗಿ ಯಶ್ವಿಗೊಳಿಸಬೇಕೆಂದು ಚರ್ಚಿಸಲಾಗಿತ್ತು. ಆದರೆ, ಆಯವ್ಯಯ ಮಂಡನೆಯನ್ನು ಗಮನಿಸಿದಾಗ ಕನ್ನಡಿಗರಿರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಸ್ತಾವನೆಯನ್ನು ಪರಿಗಣಿಸದೇ ಇರುವುದು ಆಘಾತ ಉಂಟುಮಾಡಿದೆ,” ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.