Home ಕ್ರೈಂ ನ್ಯೂಸ್ ರಾಮ, ಸೀತೆ ಮಾಂಸಾಹಾರ ಸೇವನೆ ಹೇಳಿಕೆ ವಿವಾದ: ಧ್ರುವ್ ರಾಠಿ ವಿಡಿಯೋ ತೆಗೆದುಹಾಕಲು ದೆಹಲಿ ಹೈಕೋರ್ಟ್ ಮಹತ್ವದ ಸೂಚನೆ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ರಾಮ, ಸೀತೆ ಮಾಂಸಾಹಾರ ಸೇವನೆ ಹೇಳಿಕೆ ವಿವಾದ: ಧ್ರುವ್ ರಾಠಿ ವಿಡಿಯೋ ತೆಗೆದುಹಾಕಲು ದೆಹಲಿ ಹೈಕೋರ್ಟ್ ಮಹತ್ವದ ಸೂಚನೆ!

Share
ಹೈಕೋರ್ಟ್
Share

ನವದೆಹಲಿ: ಪ್ರಸಿದ್ಧ ಯುಟ್ಯೂಬರ್ ಧ್ರುವ್ ರಾಠಿ (Dhruv Rathee) ಅವರ ವಿವಾದಾತ್ಮಕ ವಿಡಿಯೋ ಒಂದನ್ನು ಯುಟ್ಯೂಬ್‌ನಿಂದ ತೆಗೆದುಹಾಕುವಂತೆ ಕೋರಿ ಸಲ್ಲಿಕೆಯಾಗಿರುವ ಮೇಲ್ಮನವಿಯ ಕುರಿತು ಮುಂದಿನ 15 ದಿನಗಳ ಒಳಗಾಗಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರದ ಕುಂದುಕೊರತೆ ಮೇಲ್ಮನವಿ ಸಮಿತಿಗೆ (GAC) ಕಟ್ಟುನಿಟ್ಟಿನ ಆದೇಶ ನೀಡಿದೆ. ಕೋರ್ಟ್‌ನ ಈ ಆದೇಶವನ್ನು ಉಲ್ಲಂಘಿಸಿದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರ ಪೀಠವು ಎಚ್ಚರಿಸಿದೆ.

ವಿವಾದವೇನು?

ಖ್ಯಾತ ಯುಟ್ಯೂಬರ್ ಧ್ರುವ್ ರಾಠಿ ಮಾರ್ಚ್ 21 ರಂದು ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ “Can Hindus Eat Beef? | Kerala Story 2 Exposed” ಎಂಬ ಶೀರ್ಷಿಕೆಯಡಿ ವಿಡಿಯೋ ಒಂದನ್ನು ಅಪ್‌ಲೋಡ್ ಮಾಡಿದ್ದರು. ಈ ವಿಡಿಯೋದಲ್ಲಿ ಹಿಂದೂ ಧರ್ಮದ ಪೂಜನೀಯ ದೇವತೆಗಳಾದ ಶ್ರೀರಾಮ, ಸೀತೆ ಮತ್ತು ಶ್ರೀಕೃಷ್ಣ ಮಾಂಸಾಹಾರ ಹಾಗೂ ಮದ್ಯವನ್ನು ಸೇವಿಸುತ್ತಿದ್ದರು ಎಂದು ಧ್ರುವ್ ರಾಠಿ ಪ್ರತಿಪಾದಿಸಿದ್ದರು. ಈ ಹೇಳಿಕೆಯು ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ವಕೀಲೆ ಅಮಿತಾ ಸಚ್‌ದೇವ್ ಕೋರ್ಟ್ ಮೆಟ್ಟಿಲೇರಿದ್ದರು.

ಕೇಂದ್ರ ಸರ್ಕಾರ ಹಾಗೂ ಗೂಗಲ್ ವಾದವೇನು?

ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಅಡಿಷನಲ್ ಸಾಲಿಸಿಟರ್ ಜನರಲ್ (ASG) ಚೇತನ್ ಶರ್ಮಾ ಅವರು, “ಈ ವಿಡಿಯೋ ಸಮಾಜದಲ್ಲಿ ದ್ವೇಷ ಬಿತ್ತುವ ಹಾಗೂ ಸಮಾಜವನ್ನು ಒಡೆಯುವಂತಿದೆ. ಇಂತಹ ಆಕ್ಷೇಪಾರ್ಹ ವಿಷಯವನ್ನು ಯುಟ್ಯೂಬ್ (ಗೂಗಲ್) ಸ್ವಯಂಪ್ರೇರಿತವಾಗಿ ತಕ್ಷಣವೇ ತೆಗೆದುಹಾಕಬೇಕಿತ್ತು” ಎಂದು ವಾದಿಸಿದರು.

ಇನ್ನೊಂದೆಡೆ, ಗೂಗಲ್ ಸಂಸ್ಥೆಯ ಪರ ವಕೀಲರು ಮಾತನಾಡಿ, ಈ ಕುರಿತು ಅರ್ಜಿದಾರರಿಗೆ ಈಗಾಗಲೇ ಲಿಖಿತ ಪ್ರತಿಕ್ರಿಯೆ ನೀಡಲಾಗಿದ್ದು, ಸದ್ಯ ಈ ಪ್ರಕರಣವು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಅಡಿಯಲ್ಲಿ ಬರುವ ಕುಂದುಕೊರತೆ ಮೇಲ್ಮನವಿ ಸಮಿತಿಯ (GAC) ಮುಂದಿದೆ ಎಂದು ಕೋರ್ಟ್‌ಗೆ ತಿಳಿಸಿದರು.

ವಾದ-ಪ್ರತಿವಾದ ಆಲಿಸಿದ ದೆಹಲಿ ಹೈಕೋರ್ಟ್, ಸಮಾಜದಲ್ಲಿ ಶಾಂತಿ ಕದಡುವ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಇಂತಹ ಸೂಕ್ಷ್ಮ ವಿಷಯಗಳ ಕುರಿತು ಜಿಎಸಿ (GAC) ಸಮಿತಿಯು ಮುಂದಿನ 15 ದಿನಗಳಲ್ಲಿ ಅಂತಿಮ ನಿರ್ಧಾರ ಪ್ರಕಟಿಸಬೇಕು ಎಂದು ಗಡುವು ವಿಧಿಸಿದೆ.

Share

Leave a comment

Leave a Reply

Your email address will not be published. Required fields are marked *

Related Articles