ನವದೆಹಲಿ: ಪೂರ್ವ ದೆಹಲಿಯ ಮಯೂರ್ ವಿಹಾರ್ ಫೇಸ್ 2 ನಲ್ಲಿರುವ ‘ಲವ್ಲಿ ಹೆರಿಟೇಜ್ ಸ್ಕೂಲ್’ನಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿದ್ದ 9 ವರ್ಷದ ಬಾಲಕಿಯೊಬ್ಬಳು ತರಗತಿಯ ಒಳಗೆಯೇ ಕುಸಿದುಬಿದ್ದು ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ. ಆಟದ ಅವ ಮುಗಿಸಿ ತರಗತಿಗೆ ಮರಳಿದ ಬಾಲಕಿ ಏಕಾಏಕಿ ಕುಸಿದುಬಿದ್ದಿದ್ದು, ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರೂ ಜೀವ ಉಳಿಯಲಿಲ್ಲ. ಆದರೆ ತುರ್ತು ಸಂದರ್ಭದಲ್ಲಿ ಶಾಲೆ ಸಿಬ್ಬಂದಿ ಸಿಪಿಆರ್ (CPR) ನೀಡಲಿಲ್ಲ ಮತ್ತು ವೈದ್ಯಕೀಯ ಸೌಲಭ್ಯ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಮೃತರ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯದ ಪ್ರಕಾರ, ಬಾಲಕಿ ತರಗತಿಗೆ ಬಂದು ಸುಸ್ತಾದಂತೆ ಸೊಂಟದ ಮೇಲೆ ಕೈಯಿಟ್ಟು ಕೆಲವೇ ಕ್ಷಣಗಳಲ್ಲಿ ಕೆಳಗೆ ಬಿದ್ದಿದ್ದಾಳೆ. ತರಗತಿ ಶಿಕ್ಷಕಿ ಕೂಡಲೇ ಬಾಲಕಿಯನ್ನು ಎತ್ತಲು ಪ್ರಯತ್ನಿಸಿ, ನಂತರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇದು ಹೃದಯಾಘಾತ (Cardiac Arrest) ಎಂದು ವೈದ್ಯರು ತಿಳಿಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಶಾಲೆ ಕಡೆಯಿಂದ ಸಿಪಿಆರ್ (CPR) ವೈಫಲ್ಯ: ಬಾಲಕಿ ಕುಸಿದುಬಿದ್ದಾಗ ತಕ್ಷಣವೇ ಜೀವ ಉಳಿಸುವ ಪ್ರಾಥಮಿಕ ಚಿಕಿತ್ಸೆಯಾದ ‘ಸಿಪಿಆರ್’ ನೀಡದಿರುವುದಕ್ಕೆ ಪೋಷಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಶಾಲೆಯ ನಿರ್ಲಕ್ಷ್ಯವೇ ಮಗಳಿಗೆ ಕುತ್ತು ತಂದಿದೆ ಎಂದು ಆರೋಪಿಸಿದ್ದಾರೆ.
ವೈದ್ಯಕೀಯ ಸೌಲಭ್ಯಗಳ ಕೊರತೆ: ದುಬಾರಿ ಶುಲ್ಕ ವಸೂಲಿ ಮಾಡುವ ಶಾಲೆಗಳಲ್ಲಿ ತುರ್ತು ಸಂದರ್ಭಗಳನ್ನು ಎದುರಿಸಲು ಯಾವುದೇ ವೈದ್ಯಕೀಯ ಸೌಲಭ್ಯಗಳು ಅಥವಾ ಸರಿಯಾದ ತರಬೇತಿ ಪಡೆದ ಸಿಬ್ಬಂದಿ ಇಲ್ಲದಿರುವುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲಾ ಆಡಳಿತ ಮಂಡಳಿಯ ಸ್ಪಷ್ಟನೆ: ಬಾಲಕಿಯ ಗಲ್ಲಕ್ಕೆ ಗಾಯವಾಗಿ ರಕ್ತ ಬಂದಿದ್ದರಿಂದ ಶಿಕ್ಷಕರಿಗೆ ಅದು ಅಪಘಾತ ಅಥವಾ ಮೂರ್ಛೆ ಹೋಗಿರಬಹುದು ಎಂದು ಅನಿಸಿತೇ ಹೊರತು ಹೃದಯಾಘಾತ ಎಂದು ಊಹಿಸಲು ಸಾಧ್ಯವಾಗಲಿಲ್ಲ ಎಂದು ಪ್ರಾಂಶುಪಾಲೆ ಭವನಾ ಮಲಿಕ್ ಸ್ಪಷ್ಟನೆ ನೀಡಿದ್ದಾರೆ.
ಈ ಘಟನೆಯು ದೆಹಲಿ ಸೇರಿದಂತೆ ದೇಶದ ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಪ್ರಥಮ ಚಿಕಿತ್ಸಾ ತರಬೇತಿಯ ಅಗತ್ಯತೆಯ ಕುರಿತು ಗಂಭೀರ ಚರ್ಚೆಗೆ ಗ್ರಾಸವಾಗಿದೆ.





Leave a comment