ಬೆಂಗಳೂರು: ಭಾರತದ ಮಾಜಿ ಹಾಕಿ ತಂಡದ ನಾಯಕ ಹಾಗೂ ಒಲಿಂಪಿಕ್ ಪದಕ ವಿಜೇತ ಎಂ.ಎಂ. ಸೋಮಯ್ಯ ಅವರ ಬೆಂಗಳೂರಿನ ಇಂದಿರಾನಗರದಲ್ಲಿರುವ ಮನೆಗೆ ಕನ್ನ ಹಾಕಿರುವ ಕಳ್ಳರು, 1980ರ ಮಾಸ್ಕೋ ಒಲಿಂಪಿಕ್ಸ್‌ನ ಚಿನ್ನದ ಪದಕ ಸೇರಿದಂತೆ ಹಲವು ಪ್ರತಿಷ್ಠಿತ ಅಂತರರಾಷ್ಟ್ರೀಯ ಕ್ರೀಡಾ ಪದಕಗಳು ಮತ್ತು ಬೆಲೆಬಳಕೆಯ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಅಕ್ಟೋಬರ್ 28 ರ ರಾತ್ರಿ ಸೋಮಯ್ಯ ಹಾಗೂ ಅವರ ಕುಟುಂಬಸ್ಥರು ಕೊಡಗಿಗೆ ತೆರಳಿದ್ದ ವೇಳೆ ಈ ಕೃತ್ಯ ನಡೆದಿದ್ದು, ಪಕ್ಕದ ಮನೆಯವರ ಸಿಸಿಟಿವಿ ದೃಶ್ಯಾವಳಿಗಳಿಂದ ಕಳ್ಳತನದ ವಿಷಯ ಬೆಳಕಿಗೆ ಬಂದಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಅಕ್ಟೋಬರ್ 28 ರಂದು ರಾತ್ರಿ ಸುಮಾರು 2:34 ರ ಸುಮಾರಿಗೆ ನೀಲಿ ಮತ್ತು ಕೆಂಪು ಶರ್ಟ್ ಧರಿಸಿದ್ದ ಇಬ್ಬರು ದುಷ್ಕರ್ಮಿಗಳು ಬಾಗಿಲು ಮುರಿದು ಒಳನುಗ್ಗಿದ್ದಾರೆ. ಕ್ರೀಡಾ ಪದಕಗಳ ಜೊತೆಗೆ ಬೆಳ್ಳಿಯ ಕಪ್‌ಗಳು, ಚಿನ್ನದ ಬಳೆ, ನಾಣ್ಯ ಹಾಗೂ 30,000 ರೂಪಾಯಿ ನಗದು ಸೇರಿದಂತೆ ಒಟ್ಟು 3.53 ಲಕ್ಷ ರೂಪಾಯಿ ಮೌಲ್ಯದ ಇತರ ಬೆಲೆಬಳಕೆಯ ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಮೂಲ್ಯ ಕ್ರೀಡಾ ಸ್ಮರಣಿಕೆಗಳು ಕಳವು: ಕೇವಲ ಬೆಲೆಬಳಕೆಯ ವಸ್ತುಗಳಷ್ಟೇ ಅಲ್ಲದೆ, ದೇಶದ ಹೆಮ್ಮೆಯ ಪ್ರತೀಕವಾಗಿರುವ 1980ರ ಮಾಸ್ಕೋ ಒಲಿಂಪಿಕ್ಸ್ ಚಿನ್ನದ ಪದಕ, 1982ರ ಏಷ್ಯನ್ ಗೇಮ್ಸ್ ಬೆಳ್ಳಿ ಪದಕ, ಮತ್ತು 1986ರ ಏಷ್ಯನ್ ಗೇಮ್ಸ್ ಹಾಗೂ ಚಾಂಪಿಯನ್ಸ್ ಟ್ರೋಫಿಯ ಕಂಚಿನ ಪದಕಗಳು ಕಳುವಾಗಿರುವುದು ಕ್ರೀಡಾ ಲೋಕಕ್ಕೆ ತೀವ್ರ ಆಘಾತ ತಂದಿದೆ.
ಪೊಲೀಸ್ ತನಿಖೆ ಮತ್ತು ಎಫ್‌ಐಆರ್ ದಾಖಲು: ಅಕ್ಕಪರೋಡಿನ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಇಬ್ಬರು ಕಳ್ಳರ ಚಲನವಲನಗಳು ಸೆರೆಯಾಗಿದ್ದು, ಎಂ.ಎಂ. ಸೋಮಯ್ಯ ಅವರ ದೂರಿನ ಮೇರೆಗೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 331(4) ಮತ್ತು 305 ರಡಿ ಪ್ರಕರಣ ದಾಖಲಿಸಲಾಗಿದೆ.
ಪದಕಗಳ ಮರುಪಡೆಯಲು ಒತ್ತಾಯ: ಕಳ್ಳತನವಾಗಿರುವ ಕ್ರೀಡಾ ಪದಕಗಳು ದೇಶದ ಐತಿಹಾಸಿಕ ಸಂಪತ್ತಾಗಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸಿ ಅಮೂಲ್ಯ ಪದಕಗಳನ್ನು ಮರಳಿ ಕೊಡಿಸುವಂತೆ ಸೋಮಯ್ಯ ಅವರು ಪೊಲೀಸರನ್ನು ಒತ್ತಾಯಿಸಿದ್ದಾರೆ.
ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ತಲೆಮರೆಸಿಕೊಂಡಿರುವ ಕಳ್ಳರಿಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.





Leave a comment