ಗುವಾಹತಿ: ಅಸ್ಸಾಂನ ಗುವಾಹತಿಯಲ್ಲಿ ಹಿಂದೂ ಯುವಕನಿಗೆ ಅಖಿಲ್ ಕುಮಾರ್ ಚಂಡಕ್ ಎಂಬ ರಾಜಸ್ಥಾನ ಮೂಲದ ಹಿಂದೂ ವ್ಯಕ್ತಿಗೆ ಆತನ ಪತ್ನಿ ಹಾಗೂ ಅತ್ತೆ ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ ಹೇರಿ, ಅಮಲು ಪದಾರ್ಥ ನೀಡಿ ಕತ್ತರಿಸಿ (ಸುನ್ನತ್) ಬಲವಂತದ ಮತಾಂತರ ಮಾಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ. ಈ ಸಂಬಂಧ ಭಂಗಾಗರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಅತ್ತೆಯನ್ನು ಬಂಧಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ರಾಜಸ್ಥಾನದ ಅಖಿಲ್ ಕುಮಾರ್ ಚಂಡಕ್ ಹಾಗೂ ನೂರ್ಷಿಕಾ ಬೇಗಂ ದೆಹಲಿಯಲ್ಲಿ ಭೇಟಿಯಾಗಿ ಪ್ರೀತಿಸಿ ಮದುವೆಯಾಗಿದ್ದರು. ಸುಮಾರು ಮೂರು ವರ್ಷಗಳ ಕಾಲ ಇವರ ಸಂಸಾರ ಚೆನ್ನಾಗಿಯೇ ನಡೆದಿತ್ತು. ಆದರೆ ಪತ್ನಿ ಫೇಸ್ಬುಕ್ನಲ್ಲಿ ಸಿಂಧೂರ ಧರಿಸಿರುವ ಫೋಟೋ ಹಾಕಿದ ಬಳಿಕ ಗ್ರಾಮಸ್ಥರಿಗೆ ಅವರು ಹಿಂದೂ ವ್ಯಕ್ತಿಯನ್ನು ಮದುವೆಯಾಗಿರುವುದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಆತನ ಮೇಲೆ ಧರ್ಮ ಬದಲಾಯಿಸುವಂತೆ ವಿಪರೀತ ಒತ್ತಡ ಆರಂಭವಾಗಿದೆ.
ಅಮಲು ನೀಡಿ ಅಕ್ರಮ ಕೃತ್ಯದ ಆರೋಪ: ಜಲುಕ್ಬಾರಿಗೆ ಕರೆಸಿಕೊಂಡ ಅಪರಿಚಿತರು ಅಖಿಲ್ ಅವರನ್ನು ವಾಹನದಲ್ಲಿ ಟಿವಿ ಟವರ್ ಕಡೆಗೆ ಕರೆದೊಯ್ದು, ಅಮಲು ಪದಾರ್ಥ ನೀಡಿ ಅರಿವಿಲ್ಲದ ಸ್ಥಿತಿಯಲ್ಲಿ ಬಲವಂತವಾಗಿ ಸುನ್ನತ್ ಮಾಡಿಸಿದ್ದಾರೆ ಎಂದು ಸಂತ್ರಸ್ತ ಯುವಕ ಆರೋಪಿಸಿದ್ದಾರೆ.
ಗೋಮಾಂಸ ತಿನ್ನಲು ಬಲವಂತ: ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸುವ ಉದ್ದೇಶದಿಂದ ತಮ್ಮ ವಿರೋಧದ ನಡುವೆಯೂ ಬಲವಂತವಾಗಿ ಗೋಮಾಂಸ ತಿನ್ನಿಸಲಾಯಿತು ಮತ್ತು ಕಾನೂನುಬದ್ಧವಾಗಿ ಹೆಸರನ್ನು ಬದಲಾಯಿಸುವಂತೆ ಒತ್ತಡ ಹೇರಲಾಯಿತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅತ್ತೆ ಬಂಧನ, ಪತ್ನಿಗಾಗಿ ಶೋಧ: ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅತ್ತೆ ನೂರ್ ಖಾತುನ್ ಅವರನ್ನು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿರುವ ಪತ್ನಿ ನೂರ್ಷಿಕಾ ಬೇಗಂಗೂ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟೀಸ್ ನೀಡಿದ್ದು, ತನಿಖೆ ಮುಂದುವರಿಸಿದ್ದಾರೆ.
ಈ ಘಟನೆಯು ದೇಶಾದ್ಯಂತ ಸಂಚಲನ ಮೂಡಿಸಿದ್ದು, ಅಂತರ್ಧರ್ಮೀಯ ವಿವಾಹಗಳು ಮತ್ತು ಮತಾಂತರದ ವಿವಾದಗಳ ಕುರಿತು ಮತ್ತೊಮ್ಮೆ ತೀವ್ರ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.





Leave a comment