SUDDIKSHANA KANNADA NEWS/ DAVANAGERE/ DATE:20-02-2024
ದಾವಣಗೆರೆ: ಫೆ.27ರಂದು ನಡೆಯುವ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನದಲ್ಲಿ ಭಾಗವಹಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 7ನೇ ವೇತನ ಆಯೋಗದ ಜಾರಿ, ಉಚಿತ ಆರೋಗ್ಯ ಯೋಜನೆ ಮುಂತಾದ ಯೋಜನೆಗಳ ಘೋಷಣೆ ಮಾಡುವ ಎಲ್ಲ ವಿಶ್ವಾಸವೂ ಇದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಂದಿನ ಮಹಾ ಸಮ್ಮೇಳನದಲ್ಲಿ ಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾತನಾಡಿ, ಸರ್ಕಾರಿ ನೌಕರರು, ಅಧಿಕಾರಿಗಳು, ಸಿಬ್ಬಂದಿ ಪ್ರತಿ ನಿತ್ಯ ಏಕಾಂತತೆಯಲ್ಲೇ ಕೆಲಸ ಮಾಡಬೇಕಾಗುತ್ತದೆ. ನಿರಂತರವಾಗಿ ಕೆಲಸ ಮಾಡುವುದರಿಂದ ಕ್ರಿಯಾಶೀಲತೆ, ಹೊಸ
ಆಲೋಚನೆ ಹೆಚ್ಚಾಗುವುದಿಲ್ಲ. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರಿಂದ ಹೆಚ್ಚಿನ ಉಲ್ಲಾಸ, ಸಂತೋಷ ದೊರೆಯುತ್ತದೆ. ಎಷ್ಟೇ ಕೆಲಸದ ಒತ್ತಡವಿರಲಿ ದಿನದ ಒಂದು ಗಂಟೆ ಯೋಗ, ಧ್ಯಾನ ಮುಂತಾದ ಕ್ರೀಡಾ ಚಟುವಟಿಕೆಗಳಿಗೆ ಮೀಸಲಿಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯತಿ ಸಿಇಓ ಸುರೇಶ್.ಬಿ.ಇಟ್ನಾಳ್ ಮಾತನಾಡಿ, ಹಲವಾರು ಸಾರ್ವಜನಿಕ ಯೋಜನೆಗಳ ಸೇರ್ಪಡೆಯಿಂದ ಸರ್ಕಾರಿ ಅಧಿಕಾರಿ, ನೌಕರರು, ಸಿಬ್ಬಂದಿ ಸದಾ ಒತ್ತಡದಲ್ಲೇ ಕೆಲಸ ಮಾಡಬೇಕಾಗುತ್ತದೆ. ಎಲ್ಲಕ್ಕಿಂತಲೂ ಆರೋಗ್ಯ ಭಾಗ್ಯ ಅತೀ ಮುಖ್ಯ. ಹಾಗಾಗಿ ಆರೋಗ್ಯಕ್ಕಾಗಿ ದಿನದ ಒಂದು ಗಂಟೆ ಮೀಸಲಿಡಬೇಕು ಎಂದು ಕರೆ ನೀಡಿದರು.
ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಕ್ರೀಡಾಕೂಟ ಉದ್ಘಾಟಿಸಿದರು. ಈ ವೇಳೆ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೀರೇಶ್ ಎಸ್.ಒಡೇನಪುರ, ಕಾರ್ಯಾಧ್ಯಕ್ಷ ಬಿ.ಪಾಲಾಕ್ಷ, ಉಮೇಶ್, ಮಂಜಮ್ಮ, ಡಾ.ರಂಗನಾಥ್, ಎಚ್.ಬಸವರಾಜ್, ಕೆ. ಎಂ. ಎಚ್. ಸ್ವಾಮಿ, ಬಿ.ಮಂಜುನಾಥ್, ಶಿವಾನಂದ ದಳವಾಯಿ, ಕಲ್ಪನಾ, ತಿಪ್ಪೇಸ್ವಾಮಿ, ರೂಪಾದೇವಿ, ರಾಮಪ್ಪ ಇತರರು ಇದ್ದರು.