SUDDIKSHANA KANNADA NEWS/ DAVANAGERE/ DATE:21-02-2025
ದಾವಣಗೆರೆ: ಆರ್ಥಿಕಾಭಿವೃದ್ದಿಗೆ ಮೈಕ್ರೋ ಫೈನಾನ್ಸ್, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಮತ್ತು ಲೇವಾದೇವಿ, ಗಿರಿವಿದಾರರ ಕೊಡುಗೆ ಇದ್ದು ನಿಯಮಬದ್ದವಾಗಿ ವ್ಯವಹಾರ ಮಾಡಿ, ಆದರೆ ಸಾಲಕಟ್ಟಿಸಿಕೊಳ್ಳುವಾಗ ಬಲವಂತದ ಕ್ರಮಕ್ಕೆ ಮುಂದಾಗದೇ ನಿಯಮಬದ್ದವಾಗಿ ವ್ಯವಹರಿಸಬೇಕೆಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೂಚನೆ ನೀಡಿದರು.
ಅವರುಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ನಡೆದ ಮೈಕ್ರೋ ಫೈನಾನ್ಸ್, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಮತ್ತು ಲೇವಾದೇವಿ ಹಾಗೂ ಗಿರಿವಿದಾರರೊಂದಿಗೆ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಫೈನಾನ್ಸ್ ಮತ್ತು ಎನ್ ಬಿಎಫ್ಸಿ ಹಣಕಾಸು ಸಂಸ್ಥೆಯವರು ಗ್ರಾಮಾಂತರ ಪ್ರದೇಶ ಸೇರಿದಂತೆ ನಗರ ಪ್ರದೇಶದಲ್ಲಿ ಸಾಲವನ್ನು ನೀಡಿವೆ. ಆದರೆ ಸಾಲ ವಸೂಲಾತಿಯಲ್ಲಿ ನಿಯಮ ಮೀರಿ ಘಾಸಿಯಾಗುವಂತೆ ವಸೂಲಾತಿ ಮಾಡಿದ್ದರಿಂದ ಮನಃನೊಂದು ಆತ್ಮಹತ್ಯೆ ಪ್ರಕರಣಗಳು ರಾಜ್ಯದಲ್ಲಿ ಕಂಡು ಬಂದಿದ್ದರಿಂದ ಅಮಾನವೀಯ ಕ್ರಮಗಳ ನಿಯಂತ್ರಣಕ್ಕಾಗಿ ಸರ್ಕಾರ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಿದೆ ಎಂದು ತಿಳಿಸಿದರು.
ಕಾಯ್ದೆಯನ್ವಯ ಎಲ್ಲಾ ಹಣಕಾಸು ಸಂಸ್ಥೆಯವರು ಮಾರ್ಚ್ 12 ರೊಳಗಾಗಿ ಆಯಾ ಜಿಲ್ಲಾಧಿಕಾರಿಗಳಿಂದ ನೊಂದಣಿ ಮಾಡಿಸಿಕೊಂಡು ನಿಯಮಬದ್ದವಾಗಿ ವ್ಯವಹಾರ ಮಾಡಲು ಆದೇಶ ಮಾಡಲಾಗಿದೆ. ಈ ಸುಗ್ರೀವಾಜ್ಞೆ ಎಲ್ಲಾ ಫೈನಾನ್ಸ್ ಸಂಸ್ಥೆಯವರಿಗೆ ಮಾಹಿತಿ ಇದ್ದು ನೊಂದಣಿಗೆ ಮುಂದಾಗಬೇಕೆಂದು ಸೂಚನೆ ನೀಡಿದರು.
ಹೊಸ ಕಾಯ್ದೆಯಡಿ ಸಾಲ ನೀಡಿಕೆಯ ಎಲ್ಲಾ ಒಡಂಬಡಿಕೆ ಪತ್ರಗಳನ್ನು ಸ್ಥಳೀಯ ಭಾಷೆ ಕನ್ನಡದಲ್ಲಿ ಮುದ್ರಣ ಮಾಡಿ ಎಲ್ಲಾ ಷರತ್ತುಗಳ ಸಂಪೂರ್ಣ ವಿವರ ಸಾಲ ಪಡೆಯುವವರಿಗೆ ಮಾಹಿತಿ ನೀಡಬೇಕು. ಸಾಮರ್ಥ್ಯವನ್ನಾಧರಿಸಿ ಸಾಲ ನೀಡಬೇಕು, ಫೈನಾನ್ಸ್ ನವರು ಯಾವುದೇ ಅಡಮಾನಗಳನ್ನು ಪಡೆಯದೇ ಸಾಲ ನೀಡಬೇಕು, ಸಾಲ ಪಡೆಯುವಾಗ ಅನೇಕ ಸಹಿಯನ್ನು ಪಡೆಯುವುದು, ಸಾಲ ತೀರಿಸಿದ್ದರೂ ಇನ್ನೂ ಕಂತುಗಳು ಬಾಕಿ ಇವೆ, ಸಾಲ ಕಟ್ಟದಿದ್ದಾಗ ಅವರ ಮನೆ ಬಾಗಿಲಿಗೆ ತೆರಳಿ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಕಾನೂನಿನಲ್ಲಿ ಅವಕಾಶ ಇಲ್ಲ ಎಂದರು.
ನಾನ್ ಬ್ಯಾಂಕಿಂಗ್ ಹಣಕಾಸು ಸಂಸ್ಥೆಯವರು ವಾಹನಗಳ ಮೇಲೆ ಸಾಲ ನೀಡಿ ಅವರು ಒಂದು ಕಂತು ಕಟ್ಟಲು ವಿಫಲವಾದರೂ ವಾಹನ ವಶಕ್ಕೆ ಪಡೆದು ಬೇರೆಯವರಿಗೆ ಮಾರಾಟ ಮಾಡಿರುವ ಅನೇಕ ಪ್ರಕರಣಗಳಿವೆ. ಆದರೆ ಯಾವುದೇ ಸಂಸ್ಥೆಗಳಿಗೆ ಸೀಜ್ ಮಾಡುವ ಅಧಿಕಾರ ಇಲ್ಲ, ನ್ಯಾಯಾಲಯದ ಮೂಲಕ ಮುಟ್ಟುಗೋಲಿಗೆ ಆದೇಶ ಪಡೆದ ನಂತರವೇ ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿ ಹರಾಜು ಮೂಲಕ ವಿಲೆ ಮಾಡಬಹುದು. ಓರ್ವ ಸಂಸ್ಥೆ ಟ್ರ್ಯಾಕ್ಟರ್ಗೆ ಸಾಲ ನೀಡಿದ್ದು ರೈತ 7 ಲಕ್ಷದಲ್ಲಿ 5 ಲಕ್ಷ ಸಾಲವನ್ನು ಮರುಪಾವತಿಸಿದ್ದರೂ ಅದನ್ನು ವಶಕ್ಕೆ ಪಡೆದು ಬೇರೆಯವರಿಗೆ ಮಾರಾಟ ಮಾಡಿದ ಪ್ರಕರಣ ದಾವಣಗೆರೆಯಲ್ಲಿ ಕಂಡುಬಂದಿದೆ. ಆ ಸಂಸ್ಥೆಯಿಂದಲೇ ರೈತನಿಗೆ ಟ್ರ್ಯಾಕ್ಟರ್ ಕೊಡಿಸುವ ಕೆಲಸವನ್ನು ಮಾಡಲಾಗುತ್ತದೆ ಎಂದ ಅವರು ಯಾವುದೇ ಹಣಕಾಸು ಸಂಸ್ಥೆಯಾಗಿರಲಿ, ಈ ಜಿಲ್ಲೆಯಲ್ಲಿ ವ್ಯವಹರಿಸುತ್ತಿದ್ದಲ್ಲಿ ಪ್ರಾದೇಶಿಕ ಕಚೇರಿ ಹೊಂದುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.
ಸಾಲಗಾರರಿಗೆ ಕಿರುಕುಳ, ಮಾನಸಿಕ ಒತ್ತಡ ನೀಡಿದಲ್ಲಿ ಪೊಲೀಸ್ ಉಪ ಅಧೀಕ್ಷಕರ ಮೂಲಕ ಸುಮೋಟೋ ಪ್ರಕರಣ ದಾಖಲಿಸುವ ಅಧಿಕಾರ ಕಾಯಿದೆಯಲ್ಲಿದೆ. ತಪ್ಪಿತಸ್ಥರೆಂದು ಕಂಡುಬಂದಲ್ಲಿ 10 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡವಿರುತ್ತದೆ. ಒಂದು ವೇಳೆ ಸಾಲ ವಸೂಲಾತಿಯಾಗುತ್ತಿಲ್ಲವೆಂದರೆ ಅದನ್ನು ಸಂಸ್ಥೆಯ ಕಾನೂನು ಚೌಕಟ್ಟಿನಲ್ಲಿ ವಸೂಲಾತಿಗೆ ಕ್ರಮ ವಹಿಸಬೇಕು, ಮಾನಸಿಕ, ದೈಹಿಕ ಹಿಂಸೆಗೆ ಅವಕಾಶವಿಲ್ಲ ಎಂದರು.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಮಾತನಾಡಿ ಸುಗ್ರೀವಾಜ್ಞೆಯಲ್ಲಿ ಬಹಳ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದೆ. ನಿಯಮಬದ್ದ ಹಾಗೂ ಪಾರದರ್ಶಕವಾಗಿ ವ್ಯವಹಾರ ಮಾಡಲು ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ನಿಯಮ ಮೀರಿ ವಸೂಲಾತಿ ಕ್ರಮ ಕೈಗೊಳ್ಳುವಂತಿಲ್ಲ, ಹೊಸ ಕಾನೂನಿನ ಅವಕಾಶಗಳ ದುರ್ಬಳಕೆ ಮಾಡಿಕೊಂಡಲ್ಲಿ ಫೈನಾನ್ಸ್ ಸಂಸ್ಥೆಯವರು ಸಹ ಹತ್ತಿರದ ಠಾಣೆಗೆ ಮಾಹಿತಿ ನೀಡಬಹುದಾಗಿದೆ ಎಂದರು.
ಸಭೆಯಲ್ಲಿ ಸಹಕಾರ ಸಂಘಗಳ ಉಪನಿಬಂಧಕರಾದ ಮಧು ಶ್ರೀನಿವಾಸ್ ಲೇವಾದೇವಿ, ಗಿರಿವಿದಾರರ ಮತ್ತು ಚಿಟ್ಸ್ ಫಂಡ್ಗಳ ವ್ಯವಹಾರದ ಬಗ್ಗೆ ಮತ್ತು ನಿಯಮಗಳ ಬಗ್ಗೆ ಮಾತನಾಡಿದರು. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ.ಸಂತೋಷ್, ಮಂಜುನಾಥ್ ಹಾಗೂ ಫೈನಾನ್ಸ್ ಸಂಸ್ಥೆಯವರು ಉಪಸ್ಥಿತರಿದ್ದರು.