SUDDIKSHANA KANNADA NEWS/ DAVANAGERE/ DATE:22-02-2025
ದಾವಣಗೆರೆ: ದಾವಣಗೆರೆ ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಉದ್ಯೋಗಾವಕಾಶ ಕೇಂದ್ರೀತ ವೃತ್ತಿಪರ ತರಬೇತಿ ಹಾಗೂ ನಾಗರಿಕ ಸೇವೆಗಳಾದ ಐಎಎಸ್ ಹಾಗೂ ಕೆಎಎಸ್ ಜೊತೆಗೆ ಸರ್ಕಾರಿ ಉದ್ಯೋಗದ ಪರೀಕ್ಷೆಗಳ ತರಬೇತಿ ಕೇಂದ್ರ ಪ್ರಾರಂಭಿಸುವ ಕುರಿತು ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ ಗಂಗಾಧರಸ್ವಾಮಿ ಹಾಗೂ ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ.ಡಿ. ಕುಂಬಾರ್ ಅವರೊಂದಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮಹತ್ವದ ಚರ್ಚೆ ನಡೆಸಿದ್ದಾರೆ.
ತಮ್ಮ ಗೃಹಕಚೇರಿಯಲ್ಲಿ ಈ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಂಸದರು ಎಸ್ಎಸ್ ಕೇರ್ ಟ್ರಸ್ಟ್ ಮೂಲಕ ಈ ಯೋಜನೆಗಳ ಕಾರ್ಯಗತಗೊಳಿಸುವ ಕುರಿತು ಅಂತಿಮ ಹಂತದ ರೂಪುರೇಷೆಗಳ ಸಿದ್ದತೆ ಕೈಗೊಂಡಿದ್ದಾರೆ.
ಈ ಯೋಜನೆಗಳನ್ನು ದಾವಣಗೆರೆ ವಿಶ್ವವಿದ್ಯಾಲಯ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ. ಇದರಿಂದ ಶೀಘ್ರದಲ್ಲೇ ದಾವಣಗೆರೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮಹತ್ವಾಕಾಂಕ್ಷೆಯ ಎರಡು ಉಚಿತ ಯೋಜನೆಗಳು ಲಭ್ಯವಾಗಲಿವೆ ಎಂದು ಡಾ.ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.