SUDDIKSHANA KANNADA NEWS/ DAVANAGERE/ DATE:13-02-2024
ದಾವಣಗೆರೆ: ಪ್ರತಿಯೊಬ್ಬ ಸರ್ಕಾರಿ ನೌಕರರು ಸರ್ಕಾರದ ಸೇವಾ ನಿಯಮ ಹಾಗೂ ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ತಿಳಿದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಹೇಳಿದರು.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಕುಂದು ಕೊರತೆಗಳ ಜಂಟಿ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಸಭೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿ ನಾವೆಲ್ಲರೂ ಜನಪರ ನಿರ್ಧಾರ ಕೈಗೊಂಡು ಕೆಲಸ ಮಾಡಬೇಕು. ಸರ್ಕಾರಿ ನೌಕರರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಇದಕ್ಕಾಗಿ ಕ್ರೀಡೆ, ಮನರಂಜನಾ ಕೂಟಗಳಲ್ಲಿ ಭಾಗವಹಿಸಬೇಕು. ಸರ್ಕಾರಿ ನೌಕರರ ಸಂಘದಿಂದ ಪ್ರಸಕ್ತ ಸಾಲಿನ ಕ್ರೀಡಾ ಕೂಟ ಹಮ್ಮಿಕೊಂಡಿದ್ದು, ಇದರಲ್ಲಿ ವೈಯಕ್ತಿಕ ಕ್ರೀಡೆಗಳು, ಗುಂಪು ಕ್ರೀಡೆಗಳು, ಸಾಂಸ್ಕೃತಿಕ ಸ್ಪರ್ಧೆ ಇರಲಿವೆ. ಎಲ್ಲ ಸಿಬ್ಬಂದಿ ಮತ್ತು ಅಧಿಕಾರಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಬೇಕು ಎಂದರು.
ಜಿಲ್ಲಾಡಳಿತ ಭವನದಲ್ಲಿ ಅವಧಿ ಮೀರಿ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ಸಂಜೆ ಮನೆಗೆ ತೆರಳಲು ಇಲ್ಲಿಂದ ಸಿಟಿ ಬಸ್ ಬಿಡಲು ನೌಕರರು ಮನವಿ ಮಾಡಿದಾಗ ಪ್ರತಿನಿತ್ಯ ಸಂಜೆ 2 ಕೆ ಎಸ್ ಆರ್ ಟಿಸಿ ಸಿಟಿ ಬಸ್ ಗಳನ್ನು ಬಿಡಲು ಸೂಚಿಸಲಾಗುತ್ತದೆ ಎಂದರು.
ವಿವಿಧ ಕಚೇರಿಗಳಿಗೆ ದಾಖಲೆ ಕೋರಿ ಸಲ್ಲಿಸುವ ಮಾಹಿತಿ ಹಕ್ಕು ಅರ್ಜಿಗಳಿಗೆ ನಿಯಮಾನುಸಾರ ದಾಖಲೆ ಒದಗಿಸಿ ಕಾಲಮಿತಿಯಲ್ಲಿ ವಿಲೇ ಮಾಡಬೇಕು, ಯಾವುದೇ ಕಾರಣಕ್ಕೂ ಅರ್ಜಿಗಳನ್ನು ಅವಧಿ ನಂತರ ಇಟ್ಟುಕೊಳ್ಳುವುದು ತಪ್ಪಾಗುತ್ತದೆ ಎಂದು ಹೇಳಿದರು.
ಸರ್ಕಾರಿ ನೌಕರರಿಗೆ ವಸತಿ ಗೃಹ ನೀಡಲು ಒಂದು ಮಹಡಿಯಲ್ಲಿ 10 ಮನೆಗಳಂತೆ ಒಟ್ಟು 90 ಮನೆಗಳನ್ನು ನಿರ್ಮಿಸಲು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಲಾಗಿದೆ. ನೌಕರರ ಆರೋಗ್ಯ ಹಿತದೃಷ್ಠಿಯಿಂದ ಇ.ಸಿ.ಜಿ, ರಕ್ತದೊತ್ತಡ ಪರೀಕ್ಷೆ, ಮಧುಮೇಹದ ಪರೀಕ್ಷೆಯನ್ನು 3 ತಿಂಗಳಿಗೊಮ್ಮೆ ಮಾಡಿ ನೌಕರರ ಆರೋಗ್ಯ ತಪಾಸಣೆ ಮಾಡಲು ಆರೋಗ್ಯ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾಡಳಿತ ಭವನದ ಆವರಣದಲ್ಲಿ ಕ್ಯಾಂಟಿನ್ ಸ್ಥಾಪನೆ ಮಾಡಬೇಕೆಂದಾಗ ಇದನ್ನು ಪರಿಶೀಲಿಸಿ ಕಾರ್ಯರೂಪಕ್ಕೆ ತರಲಾಗುತ್ತದೆ. ಜಿಲ್ಲಾಡಳಿತ ಭವನದಲ್ಲಿ ಸಿಬ್ಬಂದಿ ವರ್ಗದವರಿಗೆ ದ್ವಿಚಕ್ರವಾಹನಗಳ ನಿಲುಗಡೆಗಾಗಿ ಮಾಡುವ ಸ್ಥಳದ ಬಗ್ಗೆ ಪರಿಶೀಲನೆ ಮಾಡಿ ಸೂಕ್ತವಾದ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತದೆ ಎಂದರು. ಸಂವಿಧಾನದ ಪ್ರಸ್ತಾವನೆ ಓದುವ ಮೂಲಕ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೀರೇಶ್ ಎಸ್. ಒಡೆನಪುರ ಮಾತಾನಾಡಿ ಸರ್ಕಾರಿ ನೌಕರರ ಮಹಾಸಮ್ಮೇಳವನ್ನು ಫೆ.27 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ 25 ರಿಂದ 30 ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ನೌಕರರಿಗೆ ಓ.ಓ.ಡಿ.ಸೌಲಭ್ಯವಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣನಾಯ್ಕ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಿಕಿ ಜಯಲಕ್ಷ್ಮೀ ಬಾಯಿ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಚಂದ್ರಶೇಖರ್ ಸುಂಕದ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ವಾಸಂತಿ ಉಪ್ಪಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಧ್ಯಕ್ಷರಾಧ ಪಾಲಾಕ್ಷಿ ಹಾಗೂ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.