ದಾವಣಗೆರೆ: ನಗರದ ಜಿಎಂ ಯೂನಿವರ್ಸಿಟಿ ಆವರಣದಲ್ಲಿರುವ ಜಿಎಂ ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ಅಂಡ್ ರಿಸರ್ಚ್ (GMIPSR) ಸಂಸ್ಥೆಯು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (RGUHS) 2026-27ನೇ ಸಾಲಿನ ದಾವಣಗೆರೆ ವಲಯದ ಪುರುಷ ಮತ್ತು ಮಹಿಳಾ ವಿಭಾಗದ ವಾಲಿಬಾಲ್ ಪಂದ್ಯಾವಳಿ ಹಮ್ಮಿಕೊಂಡಿದ್ದು, ನವೆಂಬರ್ 2 ರಂದು ಪುರುಷ ವಿಭಾಗದ ಪಂದ್ಯಾವಳಿಗೆ ಚಾಲನೆ ದೊರೆಯಿತು.
ನವೆಂಬರ್ 3 ರವರೆಗೆ ಜಿಎಂ ಯೂನಿವರ್ಸಿಟಿ ಕ್ಯಾಂಪಸ್ನ ಕ್ರೀಡಾ ಮೈದಾನದಲ್ಲಿ ನಡೆಯುವ ಈ ಕ್ರೀಡಾಕೂಟವನ್ನು ಜಿಎಂ ಐಪಿಎಸ್ಆರ್ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಗಿರೀಶ್ ಬೋಳಕಟ್ಟಿ ಸಸಿಗೆ ನೀರುಣಿಸುವ ಜೊತೆಗೆ ವಾಲಿಬಾಲ್ ಆಟವಾಡುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರಲ್ಲದೇ, ಕ್ರೀಡಾಪಟುಗಳಿಗೆ ಕ್ರೀಡಾ ಸ್ಪೂರ್ತಿ ತುಂಬಿದರು.
ಈ ವೇಳೆ ಕ್ರೀಡಾಪಟುಗಳನ್ನುದ್ದೇಶಿಸಿ ಮಾತನಾಡಿದ ಅವರು, ವಿಶ್ವವಿದ್ಯಾಲಯ ಮಟ್ಟದ ಕ್ರೀಡಾಕೂಟದಲ್ಲಿ ‘ಟೀಮ್ ಸ್ಪಿರಿಟ್’ ಅಥವಾ ತಂಡದ ಒಗ್ಗಟ್ಟು ಅತ್ಯಂತ ಮುಖ್ಯವಾದದ್ದು ಎಂದು ಪ್ರತಿಪಾದಿಸುತ್ತಾ, ಕ್ರೀಡಾಪಟುಗಳು ಜಗಳ ಅಥವಾ ಅನಗತ್ಯ ವಿವಾದಗಳಲ್ಲಿ ತೊಡಗದೆ ಕ್ರೀಡಾ ಮನೋಭಾವದಿಂದ ಆಟವಾಡಬೇಕು. “ನಾವು ಬೇರೆ ಬೇರೆ ಕಾಲೇಜು ತಂಡಗಳಾಗಿ ವಿಂಗಡಣೆಯಾಗಿದ್ದರೂ, ಅಂತಿಮವಾಗಿ ನಾವೆಲ್ಲರೂ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಕುಟುಂಬಕ್ಕೆ ಸೇರಿದವರು” ಎಂದು ಕಿವಿಮಾತು ಹೇಳಿದರು.
ಆಟದ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳು ಅಥವಾ ಕುಂದುಕೊರತೆಗಳು ಎದುರಾದರೆ ಕ್ರೀಡಾಪಟುಗಳು ನೇರವಾಗಿ ದೈಹಿಕ ಶಿಕ್ಷಣ ನಿರ್ದೇಶಕರಿಗೆ ವರದಿ ಮಾಡಬೇಕೇ ಹೊರತು, ಆಟಗಾರರು ತಮ್ಮ ತಮ್ಮಲ್ಲೇ ಗಲಾಟೆ ಮಾಡಿಕೊಳ್ಳಬಾರದು. ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಇಂತಹ ಉತ್ತಮ ಅವಕಾಶವನ್ನು ಸದ್ವಿನಿಯೋಗಿಸಿಕೊಳ್ಳಬೇಕು ಎಂದು ಕರೆನೀಡಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಲಯ ಸಮನ್ವಯಾಧಿಕಾರಿ ಗೋಪಾಲ ಕೃಷ್ಣ ಮಾತನಾಡಿ, ಜಿಎಂಐಪಿಎಸ್ಆರ್ ಸಂಸ್ಥೆಯು ವಾಲಿಬಾಲ್ನಂತಹ ಅತಿ ಹೆಚ್ಚು ತಂಡಗಳು ಪಾಲ್ಗೊಳ್ಳುವ ದೊಡ್ಡ ಮಟ್ಟದ ಪಂದ್ಯಾವಳಿಯನ್ನು ಯಶಸ್ವಿಯಾಗಿ ಸಂಘಟಿಸುತ್ತಿರುವುದಕ್ಕೆ ಧನ್ಯವಾದ ಮತ್ತು ಅಭಿನಂದನೆಗಳನ್ನು ಸಲ್ಲಿಸಿದರು. ಕ್ರೀಡಾಪಟುಗಳು ಕ್ರೀಡಾ ಶಿಸ್ತಿಗೆ ಪ್ರಾಮುಖ್ಯತೆ ಕೊಡಬೇಕು. ಆಯೋಜಕರ ಶ್ರಮ ಮತ್ತು ಶ್ರಮದ ವೆಚ್ಚವನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಮನವಿ ಮಾಡಿದರು.
ಈ ಬೃಹತ್ ಪಂದ್ಯಾವಳಿಯಲ್ಲಿ ಹಾವೇರಿ, ಹುಬ್ಬಳ್ಳಿ, ಬೆಳಗಾವಿ, ರೋಣ, ಹೊಸಪೇಟೆ, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ಕೊಪ್ಪಳ ಹಾಗೂ ಗದಗ ಸೇರಿದಂತೆ ವಿವಿಧ ಜಿಲ್ಲೆಗಳ ಮೆಡಿಕಲ್, ನರ್ಸಿಂಗ್, ಫಾರ್ಮಸಿ, ಆಯುರ್ವೇದಿಕ್ ಮತ್ತು ಡೆಂಟಲ್ ಕಾಲೇಜುಗಳಿಂದ 45ಕ್ಕೂ ಹೆಚ್ಚು ತಂಡಗಳಿಂದ 500ಕ್ಕೂ ಹೆಚ್ಚು ಕ್ರೀಡಾಪಟುಗಳು ಈ ಪಂದ್ಯಾವಳಿಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವರು.
ನವೆಂಬರ್ 3 ರಂದು ಬೆಳಗ್ಗೆ 9.30 ಗಂಟೆಗೆ ಮಹಿಳೆಯರ ವಿಭಾಗದ ಪಂದ್ಯಾವಳಿಗೆ ಚಾಲನೆ ಸಿಗಲಿದ್ದು, ಎರಡು ದಿನಗಳ ಪಂದ್ಯಾವಳಿಗೆ 20 ತಂಡಗಳು ಪಾಲ್ಗೊಳ್ಳಲಿವೆ. ಪಂದ್ಯಾವಳಿಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ನಾಲ್ಕನೇ ಸ್ಥಾನ ಪಡೆಯುವ ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿಗಳು ಹಾಗೂ ಪ್ರಶಸ್ತಿ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಗುವುದು ಎಂದು ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕರಾದ ಜಿ.ಬಿ. ಅಜ್ಜಯ್ಯ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ವ್ಯವಹಾರಗಳ ನಿರ್ದೇಶನಾಲಯದ ನಿರ್ದೇಶಕರಾದ ಡಾ. ಹೆಚ್.ಎಸ್. ಕಿರಣ್ ಕುಮಾರ್, ಜಿ.ಎಮ್.ಐ.ಪಿ.ಎಸ್.ಆರ್. ಕ್ರೀಡಾ ಸಮನ್ವಯಾಧಿಕಾರಿ ಡಾ. ಮೊಹಮ್ಮದ್ ಯೂಸುಫ್ ಮಲಿಕ್ ದಮಾನಿ, ಶಿವಮೊಗ್ಗ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನ ದೈಹಿಕ ನಿರ್ದೇಶಕರಾದ ರಮೇಶ್ ನಾಯಕ್ ಸೇರಿದಂತೆ ಇತರರು ಇದ್ದರು.






Leave a comment