SUDDIKSHANA KANNADA NEWS/ DAVANAGERE/ DATE:06-01-2024
ದಾವಣಗೆರೆ: ಭದ್ರಾ ಜಲಾಶಯದ ನೀರು ಬಿಡುಗಡೆ ವಿಚಾರ ಸಂಬಂಧ ಮತ್ತೆ ದಾವಣಗೆರೆ ಜಿಲ್ಲೆಗೆ ಅನ್ಯಾಯ ಮಾಡಲಾಗಿದೆ. ಎಡದಂಡ ನಾಲೆಗೆ ಜ.10, ಬಲದಂಡ ನಾಲೆಗೆ ಭದ್ರಾ ಜ.20 ರಿಂದ ನೀರು ಹರಿಸಲು ನಿರ್ಧರಿಸಲಾಗಿದೆ. ಆದ್ರೆ, ಮತ್ತೆ ಆನ್ ಅಂಡ್ ಆಫ್ ಜಾರಿಗೊಳಿಸಿರುವುದು ಭದ್ರಾ ಅಚ್ಚುಕಟ್ಟು ಪ್ರದೇಶದವರಿಗೆ ನಿರಾಸೆ ತಂದಿದೆ ಎಂದು ಬಿಜೆಪಿ ಮುಖಂಡ ಕೆ. ಬಿ. ಕೊಟ್ರೇಶ್ ಹೇಳಿದ್ದಾರೆ.
ಶಿವಮೊಗ್ಗದ ಮಲವಗೊಪ್ಪ ಕಾಡಾ ಕಚೇರಿಯಲ್ಲಿ ಸಚಿವ ಮಧು ಬಂಗಾರಪ್ಪರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಧಾರ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ದಾವಣಗೆರೆ ಜಿಲ್ಲೆಯ ರೈತರ ಹಿತ
ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅವರು ಹೇಳಿದ್ದಾರೆ.
ಜ.10 ರಿಂದ 16 ದಿನ ಆನ್ ಮತ್ತು 15 ದಿನ ಆಫ್, ನಂತರ 17 ದಿನ ಆನ್, 15 ದಿನ ಆಫ್, 18 ದಿನ ಆನ್ 15 ದಿನ ಆಫ್ ಮತ್ತು 20 ದಿನ ಆನ್, 15 ದಿನ ಆಫ್ ಇರುತ್ತದೆ. ಬಲದಂಡ ನಾಲೆಗೆ ಜ.20 ರಿಂದ ನೀರು ಹರಿಸಲಾಗುತ್ತಿದ್ದು ಮೊದಲಿಗೆ 12 ದಿನ ಆನ್, 20 ದಿನ ಆಫ್, 12 ದಿನ ಆನ್ 20 ದಿನ ಆಫ್, 14 ದಿನ ಆನ್ 20 ದಿನ ಆಫ್ ಮತ್ತು 15 ದಿನ ಆನ್ 20 ದಿನ ಆಫ್ ಇರುತ್ತದೆ ಎಂದು ತಿಳಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಸಾಕಷ್ಟು ಪ್ರಮಾಣದ ಮಳೆಯಾಗದ ಕಾರಣ ಭದ್ರಾ ಜಲಾಶಯದಲ್ಲಿ ನೀರಿನ ಕೊರತೆಯಾಗಿದೆ ಎನ್ನುತ್ತಿದ್ದಾರೆ. ಈ ಹಿಂದೆ ಜಲಾಶಯದ ನೀರಿನ ಮಟ್ಟ ಕಡಿಮೆ ಇದ್ದಾಗಲೂ ದಾವಣಗೆರೆ ರೈತರಿಗೆ ನೀರು ಕೊಡಲಾಗಿದೆ. ಈಗ ಯಾಕೆ ಕೊಡಲಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಪ್ರಸ್ತುತ ಜಲಾಶಯದಲ್ಲಿ ನೀರಾವರಿ ಬಳಕೆಗೆ ಬರುವ 12.50 ಟಿಎಂಸಿ ಪ್ರಮಾಣದ ನೀರನ್ನು ಬಲದಂಡ ನಾಲೆಗೆ 2650 ಕ್ಯೂಸೆಕ್ಸ್ ಮತ್ತು ಎಡದಂಡ ನಾಲೆಗೆ 380 ಕ್ಯೂಸೆಕ್ಸ್ ಮತ್ತು ಗೊಂದಿ ನಾಲೆ ಸೇರಿದಂತೆ ಪ್ರತಿದಿನ 0.27 ಟಿಎಂಸಿ ನೀರು ಹರಿಸಿದಲ್ಲಿ ಒಟ್ಟು 47 ದಿನಗಳಿಗೆ ನೀರು ಹರಿಸಬಹುದಾಗಿದೆ ಎಂದಿದ್ದಾರೆ. ರೈತರಿಗೆ ಭತ್ತ ಬೆಳೆಯಬೇಡಿ ಎಂದಿದ್ದಾರೆ. ಹಾಗಿದ್ದರೆ, ಆ ರೈತರು ಬೇರೆ ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಮಧು ಬಂಗಾರಪ್ಪರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ರೈತರಿಗೆ ನೀರು ಕೊಡುವ ಸಲುವಾಗಿ, ದಾವಣಗೆರೆಗೆ ನೀರು ಸಿಗದಿರುವ ರೀತಿಯಲ್ಲಿ ತೀರ್ಮಾನಿಸಲಾಗಿರುವುದು ಸಹಿಸಲ್ಲ. ಇದರ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಕೆ. ಬಿ. ಕೊಟ್ರೇಶ್ ಎಚ್ಚರಿಕೆ ನೀಡಿದ್ದಾರೆ.