Home ದಾವಣಗೆರೆ ಲೇಖಕ ರವಿ ಹಂಜ್‌ ವಿರುದ್ಧ ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು: ಬಸವಣ್ಣನವರ ಕುರಿತು ಅವಹೇಳನಕ್ಕೆ ಆಕ್ರೋಶ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಲೇಖಕ ರವಿ ಹಂಜ್‌ ವಿರುದ್ಧ ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು: ಬಸವಣ್ಣನವರ ಕುರಿತು ಅವಹೇಳನಕ್ಕೆ ಆಕ್ರೋಶ!

Share
ದಾವಣಗೆರೆ
Share

ದಾವಣಗೆರೆ: ವಿಶ್ವಗುರು ಜಗಜ್ಯೋತಿ ಬಸವಣ್ಣನವರ ವ್ಯಕ್ತಿತ್ವ, ವಚನ ಸಾಹಿತ್ಯ ಹಾಗೂ ಶರಣ ಪರಂಪರೆಯ ಕುರಿತು ಲೇಖಕ ರವಿ ಹಂಜ್ ಅವರ ಅವಹೇಳನಕಾರಿ ಮಾತುಗಳು ಹಾಗೂ ‘ಬಸವ ಮಂಟಪ’ ಕೃತಿಯಲ್ಲಿನ ಆಕ್ಷೇಪಾರ್ಹ ಅಂಶಗಳ ಕುರಿತು ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಲಿಂಗಾಯತ ಸಮುದಾಯದ ಮುಖಂಡರು ನಗರದ ಬಡಾವಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ. ಪಾಟೀಲ್ ಅವರು ದೂರು ನೀಡಿದ್ದು, ಈ ವೇಳೆ ಬಸವೇಶ್ವರ ಟ್ರಾನ್ಸ್ ಪೋರ್ಟ್ ಮಾಲೀಕರಾದ ಮಹಾಂತೇಶ್ ವಿ. ಒಣರೊಟ್ಟಿ, ಟಿಂಕರ್ ಮಂಜಣ್ಣ, ಸಚಿನ್ ಲೆಕ್ಕದ, ಬಸವರಾಜ್ ಎಂ. ಬಾವಿ ಹಾಜರಿದ್ದರು.

12ನೇ ಶತಮಾನದ ಮಹಾನ್ ಸಮಾಜ ಸುಧಾರಕ, ಸಮಾನತೆಯ ಹರಿಕಾರ, ಕಾಯಕ ಮತ್ತು ದಾಸೋಹ ತತ್ವಗಳ ಪ್ರತಿಪಾದಕ, ವಿಶ್ವಗುರು ಜಗಜ್ಯೋತಿ ಬಸವಣ್ಣನವರು ಕನ್ನಡ ನಾಡಿಗಷ್ಟೇ ಅಲ್ಲದೆ ಇಡೀ ವಿಶ್ವದ ಮಾನವೀಯ ಮೌಲ್ಯಗಳ ಪ್ರತೀಕವಾಗಿದ್ದಾರೆ. ಬಸವಣ್ಣನವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿದ್ದ ಅಸಮಾನತೆ, ಮೂಢನಂಬಿಕೆ ಮತ್ತು ಜಾತಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾನ್ ಚೇತನ ಎಂದು ಹೇಳಿದ್ದಾರೆ.

ಇತ್ತೀಚೆಗೆ ಲೇಖಕ ರವಿ ಹಂಜ್ ಅವರು ರಚಿಸಿರುವ ‘ಬಸವ ಮಂಟಪ’ ಕೃತಿ ಹಾಗೂ ಈ ಕೃತಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ವಿಡಿಯೋಗಳು ಮತ್ತು ಸಂದರ್ಶನಗಳಲ್ಲಿ ಬಸವಣ್ಣನವರ ವ್ಯಕ್ತಿತ್ವ, ವಚನ ಸಾಹಿತ್ಯ ಹಾಗೂ ಶರಣ ಪರಂಪರೆಯ ಕುರಿತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ವಿಚಾರ ಸಾರ್ವಜನಿಕವಾಗಿ ಚರ್ಚೆಗೆ
ಬಂದಿದೆ. ವಿಶೇಷವಾಗಿ ಬಸವಣ್ಣನವರನ್ನು ಕೊಲೆಗಡುಕ, ದರೋಡೆಕೋರ ಎಂದು ಬಿಂಬಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿರುವುದು ಬಸವಣ್ಣನವರ ಅನುಯಾಯಿಗಳಲ್ಲಿ ತೀವ್ರ ನೋವು ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿರುವ ವಿಡಿಯೋವನ್ನು ಗಮನಕ್ಕೆ ತೆಗೆದುಕೊಂಡಿದ್ದು, ಅದರಲ್ಲಿರುವ ಹೇಳಿಕೆಗಳು ಹಾಗೂ ಸಂಬಂಧಪಟ್ಟ ಕೃತಿಯಲ್ಲಿನ ಆಕ್ಷೇಪಾರ್ಹ ಬರಹಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ಆ ಸ್ವಾತಂತ್ರ್ಯದ ಹೆಸರಿನಲ್ಲಿ ಉದ್ದೇಶಪೂರ್ವಕವಾಗಿ ಸಮಾಜದ ಶಾಂತಿ, ಸೌಹಾರ್ದತೆ ಮತ್ತು ಗೌರವಾನ್ವಿತ ಐತಿಹಾಸಿಕ ವ್ಯಕ್ತಿತ್ವಗಳ ಘನತೆಗೆ ಧಕ್ಕೆ ಉಂಟುಮಾಡುವಂತಹ ಕೃತ್ಯಗಳು ನಡೆದಿದ್ದರೆ ಅವುಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಪರಿಶೀಲಿಸಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.

‘ಬಸವ ಮಂಟಪ’ ಕೃತಿಯಲ್ಲಿನ ಆಕ್ಷೇಪಾರ್ಹ ಎಂದು ಹೇಳಲಾಗಿರುವ ಬರಹಗಳನ್ನು ಮೂಲ ಕೃತಿಯೊಂದಿಗೆ ಪರಿಶೀಲಿಸಬೇಕು. ಬಸವಣ್ಣನವರ ವಚನಗಳನ್ನು ತಪ್ಪಾಗಿ ಅರ್ಥೈಸಿ ಅಥವಾ ತಿರುಚಿ ಸಾರ್ವಜನಿಕವಾಗಿ ಮಂಡಿಸಿರುವ ಅಂಶಗಳಿದ್ದರೆ ಅವುಗಳ ಕುರಿತು ತಜ್ಞರ ಅಭಿಪ್ರಾಯ ಪಡೆದು ತನಿಖೆ ನಡೆಸಬೇಕು. ಈ ಹೇಳಿಕೆಗಳಿಂದ ಸಮಾಜದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆಯೇ ಹಾಗೂ ಕಾನೂನುಬಾಹಿರ ಕೃತ್ಯ ನಡೆದಿದೆಯೇ ಎಂಬುದನ್ನು ಪರಿಶೀಲಿಸಬೇಕು. ತನಿಖೆಯಲ್ಲಿ ಅಪರಾಧದ ಅಂಶಗಳು ಕಂಡುಬಂದಲ್ಲಿ ಅನ್ವಯವಾಗುವ ಕಾನೂನು ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಪ್ರಕರಣಕ್ಕೆ ಸಂಬಂಧಿಸಿದ ಡಿಜಿಟಲ್ ಸಾಕ್ಷ್ಯಾಧಾರಗಳು ಮತ್ತು ಮೂಲ ವಿಡಿಯೋಗಳನ್ನು ಸಂರಕ್ಷಿಸಿ ತನಿಖೆಗೆ ಒಳಪಡಿಸಬೇಕು. ದೂರು ಸ್ವೀಕರಿಸಿದ ಬಗ್ಗೆ ಅಧಿಕೃತ ಸ್ವೀಕೃತಿ ನೀಡಿ, ಕೈಗೊಂಡ ಕ್ರಮದ ಮಾಹಿತಿಯನ್ನು ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ನಮ್ಮ ಉದ್ದೇಶ ಯಾವುದೇ ವ್ಯಕ್ತಿಯ ವಿರುದ್ಧ ವೈಯಕ್ತಿಕ ದ್ವೇಷ ಸಾಧಿಸುವುದಲ್ಲ. ವಿಶ್ವಗುರು ಬಸವಣ್ಣನವರ ಗೌರವ, ಶರಣ ಪರಂಪರೆಯ ಘನತೆ ಮತ್ತು ಸಮಾಜದ ಶಾಂತಿ ಸೌಹಾರ್ದತೆಯನ್ನು ಕಾಪಾಡುವುದು ನಮ್ಮ ಆಶಯವಾಗಿದೆ. ಆದ್ದರಿಂದ ಈ ದೂರನ್ನು ಗಂಭೀರವಾಗಿ ಪರಿಗಣಿಸಿ ನಿಷ್ಪಕ್ಷಪಾತ ತನಿಖೆ ನಡೆಸಿ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದ್ದಾರೆ.

Share

Recent Posts

Recent Comments

No comments to show.
Related Articles