ದಾವಣಗೆರೆ: ಈ ಬಾರಿ ಮಳೆ ಕೊರತೆಯಿಂದಾಗಿ ಭದ್ರಾ ಜಲಾಶಯ ಕೇವಲ 175 ಅಡಿ ಮಟ್ಟಕ್ಕೆ ತಲುಪಿದ್ದು, ಅಚ್ಚುಕಟ್ಟು ಪ್ರದೇಶದ ರೈತರ ಬೆಳೆಗಳಿಗೆ ಹಾಗೂ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ತೀವ್ರ ಅಭಾವ ಉಂಟಾಗುವ ಆತಂಕ ಎದುರಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ರೈತರ ಬೆಳೆಗಳಿಗೆ ಇದುವರೆಗೂ ಸಮರ್ಪಕವಾಗಿ ಕಾಲುವೆ ಮೂಲಕ ನೀರು ಹರಿಸದ ರಾಜ್ಯ ಕಾಂಗ್ರೆಸ್ ಸರ್ಕಾರ, ಇದೀಗ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸುವ ಆದೇಶ ಹೊರಡಿಸಿರುವುದು ಭದ್ರಾ ಅಚ್ಚುಕಟ್ಟು ಪ್ರದೇಶದ ಲಕ್ಷಾಂತರ ರೈತರ ಹಿತಕ್ಕೆ ಮಾರಕವಾಗಿದೆ ಎಂದು ದಾವಣಗೆರೆ ರೈತರು ಆರೋಪಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಶಾಖಾ ಕಾಲುವೆಯ ವ್ಯಾಪ್ತಿಯ ಕೆರೆಗಳಿಗೆ ಹಾಗೂ ವಾಣಿವಿಲಾಸ ಸಾಗರ ಜಲಾಶಯಕ್ಕೆ ನೀರು ಹರಿಸುವ ಉದ್ದೇಶದಿಂದ, ಭದ್ರಾ ಜಲಾಶಯದಿಂದ 3.00 ಟಿಎಂಸಿ ನೀರನ್ನು ಎತ್ತಿ ಚಿತ್ರದುರ್ಗ ಶಾಖಾ ಕಾಲುವೆಗೆ ಹರಿಸಲು ರಾಜ್ಯ ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ
ಎಂದು ಕಿಡಿಕಾರಿದ್ದಾರೆ.
ನಿಯಮದಂತೆ ಮೊದಲು ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ 17.04 ಟಿಎಂಸಿ ನೀರನ್ನು ಲಿಫ್ಟ್ ಮಾಡಿದ ನಂತರ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸಬೇಕಾಗಿದೆ. ಆದರೆ ರೈತರ ಹಿತವನ್ನು ಕಡೆಗಣಿಸಿ, ಕದ್ದುಮುಚ್ಚಿ ನೀರು ಹರಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಅತ್ಯಂತ ದುರದೃಷ್ಟಕರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಬೆಳೆಗಳಿಗೆ ನೀರು ಒದಗಿಸುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು. ರೈತರ ಜಮೀನುಗಳಿಗೆ ನೀರು ನೀಡದೆ, ಜಲಾಶಯದ ನೀರನ್ನು ಬೇರೆಡೆಗೆ ಹರಿಸುವ ಯಾವುದೇ ನಿರ್ಧಾರವನ್ನು ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ತಿಳಿಸಿದ್ದಾರೆ.
ನಮ್ಮ ರಕ್ತವನ್ನು ಕೊಟ್ಟೆವು, ಆದರೆ ಒಂದು ಹನಿ ನೀರನ್ನು ಕೊಡುವುದಿಲ್ಲ. ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಹಕ್ಕು ಮತ್ತು ನೀರಿಗಾಗಿ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಹಾಗೂ ಅಡಿಕೆ ಬೆಳೆಗಾರರ ಪರವಾಗಿ ಆಗಸ್ಟ್ 26ರಿಂದ ಆಗಸ್ಟ್ 28ರವರೆಗೆ ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಿಂದ ದಾವಣಗೆರೆ ಎಸಿ ಕಚೇರಿವರೆಗೆ ಬೃಹತ್ ಪಾದಯಾತ್ರೆ ಮೂಲಕ ಉಗ್ರ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ತಕ್ಷಣ ರಾಜ್ಯ ಸರ್ಕಾರವು ಗುಟ್ಕಾ ನಿಷೇಧ ಆದೇಶ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸುವ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.





Leave a comment