ದಾವಣಗೆರೆ: ಪತಿಯ ಅಕ್ರಮ ಸಂಬಂಧ ಮತ್ತು ಮಾದಕ ವ್ಯಸನದ ವಿರುದ್ಧ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದ 26 ವರ್ಷದ ಕಾವ್ಯಾ ಎಂಬುವವರ ನಿಗೂಢ ಸಾವು ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಪತ್ನಿಯ ಸಾವಿನ ಬೆನ್ನಲ್ಲೇ ಪೋಷಕರು ನೀಡಿದ ದೂರಿನ ಮೇರೆಗೆ ಪತಿ ಮನುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ಹಿನ್ನೆಲೆ:
ದಾವಣಗೆರೆ ತಾಲೂಕಿನ ಮಂಡಲೂರು ಗ್ರಾಮದ ಕಾವ್ಯಾ ಮತ್ತು ಚನ್ನಗಿರಿಯ ಮನು ಎಂಬುವವರಿಗೆ ಎರಡು ವರ್ಷಗಳ ಹಿಂದೆ ವಿವಾಹವಾಗಿತ್ತು. ಸರ್ಕಾರಿ ನೌಕರನಾಗಿದ್ದ ಮನುಗೆ ಪರಸ್ತ್ರೀ ಸಹವಾಸ ಹಾಗೂ ಮಾದಕ ವ್ಯಸನದ ಚಟವಿತ್ತು ಎಂದು ಹೇಳಲಾಗಿದೆ. ಇದನ್ನು ಪತ್ತೆ ಹಚ್ಚಿದ್ದ ಕಾವ್ಯಾ, ಸ್ಕ್ರೀನ್ ಶಾಟ್ ಹಾಗೂ ಪ್ರಮುಖ ದಾಖಲೆಗಳನ್ನು ಪೆನ್ ಡ್ರೈವ್‌ನಲ್ಲಿ ಸಂಗ್ರಹಿಸಿ ತನ್ನ ತಮ್ಮನ ಬ್ಯಾಗ್‌ನಲ್ಲಿ ಬಚ್ಚಿಟ್ಟಿದ್ದರು.
ಕೊಲೆ ಆರೋಪ:
ಕಾವ್ಯಾ ಅವರು ಅಂಚೆ ಇಲಾಖೆಯ ವಸತಿಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆ ಕಂಡರೂ, ಇದು ನೇರವಾದ ಕೊಲೆ ಎಂದು ಕಾವ್ಯಾ ಪೋಷಕರು ಆರೋಪಿಸಿದ್ದಾರೆ. ಪತಿಯ ಅಕ್ರಮ ಸಂಬಂಧದ ದಾಖಲೆಗಳು ಕಾವ್ಯಾ ಬಳಿ ಇದ್ದಿದ್ದೇ ಈ ಹತ್ಯೆಗೆ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದೆ.
ತನಿಖೆ ಚುರುಕು:
ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾವ್ಯಾ ಸಂಗ್ರಹಿಸಿದ್ದ ಆ “ಪೆನ್ ಡ್ರೈವ್” ಇದೀಗ ತನಿಖೆಯ ಕೇಂದ್ರಬಿಂದುವಾಗಿದೆ. ಇದರಲ್ಲಿರುವ ಮಾಹಿತಿಗಳು ಪ್ರಕರಣಕ್ಕೆ ದೊಡ್ಡ ತಿರುವು ನೀಡುವ ಸಾಧ್ಯತೆಯಿದೆ.






Leave a comment