Home ಕ್ರೈಂ ನ್ಯೂಸ್ ದಾವಣಗೆರೆ: ಬೀಗ ಹಾಕಿದ ಮನೆಗೆ ಕನ್ನ ಹಾಕಿದ್ದ ಮಧ್ಯಪ್ರದೇಶದ ಖದೀಮ ಬಂಧನ; 6 ಲಕ್ಷ ರೂ. ಮೌಲ್ಯದ ಬೆಳ್ಳಿ ಸ್ವತ್ತು ವಶ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ದಾವಣಗೆರೆ: ಬೀಗ ಹಾಕಿದ ಮನೆಗೆ ಕನ್ನ ಹಾಕಿದ್ದ ಮಧ್ಯಪ್ರದೇಶದ ಖದೀಮ ಬಂಧನ; 6 ಲಕ್ಷ ರೂ. ಮೌಲ್ಯದ ಬೆಳ್ಳಿ ಸ್ವತ್ತು ವಶ!

Share
ದಾವಣಗೆರೆ
Share

ದಾವಣಗೆರೆ: ನಗರದ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಭಾರಿ ಮನೆಗಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೀಗ ಹಾಕಿದ್ದ ಮನೆಯ ಹಿಂಬಾಗಿಲು ಮುರಿದು ಚಿನ್ನಾಭರಣ, ಬೆಳ್ಳಿ ಲೂಟಿ ಮಾಡಿದ್ದ ಮಧ್ಯಪ್ರದೇಶ ಮೂಲದ ಅಂತರರಾಜ್ಯ ಕಳ್ಳನನ್ನು ವಿದ್ಯಾನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತನಿಂದ ಸುಮಾರು 6 ಲಕ್ಷ ರೂಪಾಯಿ ಮೌಲ್ಯದ 2 ಕೆಜಿ 900 ಗ್ರಾಂ ತೂಕದ ಬೆಳ್ಳಿ ಸಾಮಾನುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಘಟನೆಯ ಹಿನ್ನೆಲೆ:

ದಾವಣಗೆರೆಯ ವಿದ್ಯಾ ನಗರ ನಿವಾಸಿ ಎಲ್. ಕೆ. ಲಿಂಗರಾಜ್ ಎಂಬುವವರು ಮೇ 25 ರಿಂದ ಜೂನ್ 13 ರ ಅವಧಿಯಲ್ಲಿ ತಮ್ಮ ಮನೆಗೆ ಬೀಗ ಹಾಕಿ ಹೊರಹೋಗಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು, ಮನೆಯ ಹಿಂಬಾಗಿಲನ್ನು ಕಬ್ಬಿಣದ ಆಯುಧದಿಂದ ಮುರಿದು ಒಳನುಗ್ಗಿದ್ದರು. ಬೆಡ್‌ರೂಮ್‌ನಲ್ಲಿದ್ದ ತಿಜೋರಿ ಲಾಕರ್ ಒಡೆದು ಸುಮಾರು 3 ಕೆಜಿ ಬೆಳ್ಳಿ ಸಾಮಾನುಗಳು ಹಾಗೂ ಕಳ್ಳತನದ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಸಿಸಿಟಿವಿ ಡಿವಿಆರ್ ಅನ್ನು ಹೊತ್ತೊಯ್ದಿದ್ದರು. ಈ ಸಂಬಂಧ ಜೂನ್ 14 ರಂದು ವಿದ್ಯಾನಗರ ಠಾಣೆಯಲ್ಲಿ ಬಿ.ಎನ್.ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಸಿನಿಮೀಯ ಶೈಲಿಯಲ್ಲಿ ಆರೋಪಿ ಬಂಧನ:

ಜಿಲ್ಲಾ ಪೊಲೀಸ್ ಅಧೀಕ್ಷಕ ಶೇಖರ್ ಹೆಚ್.ಟಿ., ಹೆಚ್ಚುವರಿ ಎಸ್ಪಿ ಪರಮೇಶ್ವರ ಹೆಗಡೆ ಹಾಗೂ ಡಿವೈಎಸ್ಪಿ ಶರಣ ಬಸವೇಶ್ವರ ಬಿ ಅವರ ಮಾರ್ಗದರ್ಶನದಲ್ಲಿ ವಿದ್ಯಾನಗರ ಠಾಣೆ ಇನ್ಸ್‌ಪೆಕ್ಟರ್ ಶಿಲ್ಪಾ ವೈ.ಎಸ್. ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ಕೈಗೊಂಡಿತ್ತು. ತಾಂತ್ರಿಕ ಹಾಗೂ ಖಚಿತ ಮಾಹಿತಿ ಮೇರೆಗೆ ಮಧ್ಯಪ್ರದೇಶದ ಖಂಡ್ವಾ ಜಿಲ್ಲೆಯ ನಿವಾಸಿ ಜೀತ್ ಸಿಂಗ್ ಟಾಂಕ್ (53) ಎಂಬಾತನನ್ನು ದಸ್ತಗಿರಿ ಮಾಡಲಾಗಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಎರಡು ಪ್ರಮುಖ ಪ್ರಕರಣಗಳು ಪತ್ತೆ:

ಈತನ ಬಂಧನದಿಂದ ದಾವಣಗೆರೆ ನಗರದ ಎರಡು ಪ್ರಮುಖ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ. ವಿದ್ಯಾನಗರ ಪೊಲೀಸ್ ಠಾಣೆಯ ಒಂದು ಪ್ರಕರಣ ಹಾಗೂ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮತ್ತೊಂದು ಮನೆಗಳ್ಳತನ ಪ್ರಕರಣ ಪತ್ತೆಯಾದಂತಾಗಿದೆ.

ಯಶಸ್ವಿ ಕಾರ್ಯಾಚರಣೆ ನಡೆಸಿದ ಇನ್ಸ್‌ಪೆಕ್ಟರ್ ಶಿಲ್ಪಾ ವೈ.ಎಸ್, ಪಿಎಸ್‌ಐಗಳಾದ ಸಚಿನ್ ಬಿರಾದಾರ, ನಾಗರಾಜ ಹಾಗೂ ಸಿಬ್ಬಂದಿಗಳಾದ ಶಂಕರ್ ಆರ್. ಜಾಧವ, ಆನಂದ, ಮಲ್ಲಿಕಾರ್ಜುನ್ ಸೇರಿದಂತೆ ಇಡೀ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles