ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಪಾಕಿಸ್ತಾನದೊಂದಿಗೆ ಇನ್ನೂ ಹಲವರು ಸಂಪರ್ಕದಲ್ಲಿರುವ ಶಂಕೆ ಇದ್ದು, ಜಿಲ್ಲಾ ಪೊಲೀಸ್ ಇಲಾಖೆಯು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಆಗ್ರಹಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ತುಮಕೂರು ಮತ್ತು ದಾವಣಗೆರೆಯ ಯುವಕನನ್ನು ಈ ಹಿಂದೆ ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇರೆಗೆ ಬಂಧಿಲಾಗಿತ್ತು. ಈಗ ಹರಿಹರದಲ್ಲಿಯೂ ಸೆರೆ ಹಿಡಿಯಲಾಗಿದೆ.
ಇದೇ ರೀತಿ ಇನ್ನೂ ಹಲವರು ಜಿಲ್ಲೆಯಲ್ಲಿ ಇದ್ದು, ಇಂಥವರ ಹೆಡೆಮುರಿ ಕಟ್ಟುವ ಕೆಲಸ ಪೊಲೀಸ್ ಇಲಾಖೆಯಿಂದ ಆಗಬೇಕಿದೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ, ಬಿಹಾರ, ರಾಜಸ್ತಾನ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಕೆಲಸಕ್ಕೆಂದು ಬರುವವರ ಮೇಲೆ ಕಣ್ಗಾವಲು ಅಗತ್ಯ. ಕೇವಲ ಹದಿನೈದು ದಿನಗಳ ಹಿಂದೆ ಬಂದಿದ್ದ ಸೊಹೇಲ್ ಸಿಕ್ಕಿಬಿದ್ದಿದ್ದಾನೆ. ಪೊಲೀಸ್ ಇಲಾಖೆಯವರೇ ಕೊಟ್ಟಿರುವ ಮಾಹಿತಿ ಪ್ರಕಾರ ಈತ ವಾಟ್ಸಪ್ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಪಾಕಿಸ್ತಾನದವರೊಂದಿಗೆ ಸಂಪರ್ಕ ಹೊಂದಿರುವುದು ಮೊಬೈಲ್ ನಲ್ಲಿ ಗೊತ್ತಾಗಿದೆ. ಹಾಗಾಗಿ, ಈತನನ್ನು ಇಲ್ಲಿಗೆ ಕರೆದುಕೊಂಡು ಬಂದವರು ಯಾರು? ಸಹಾಯ ಮಾಡಿದವರು ಯಾರ್ಯಾರಿದ್ದಾರೆ. ಇಲ್ಲಿಗೆ ಕಳುಹಿಸಿದ್ದು ಯಾರು, ಕೆಲಸಕ್ಕೆ ಸೇರಿಸಿಕೊಂಡಿರುವ ಕಾರ್ಖಾನೆ ಮಾಲೀಕನೂ ಸೇರಿದಂತೆ ಎಲ್ಲರನ್ನೂ ವಿಚಾರಣೆಗೊಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪಾಕಿಸ್ತಾನದ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇರೆಗೆ ಇಬ್ಬರನ್ನು ಬೇರೆ ಜಿಲ್ಲೆಗಳ ಪೊಲೀಸರು ಬಂದು ಬಂಧಿಸಿದ್ದಾರೆ. ಇಲ್ಲಿನ ಪೊಲೀಸರು ಈ ರೀತಿಯ ಚಟುವಟಿಕೆಗಳನ್ನು ಹತ್ತಿಕ್ಕಬೇಕಾದರೆ ಹೊರ ರಾಜ್ಯಗಳಿಂದ ಬಂದಿರುವವರ
ಮೇಲೆ ನಿಗಾ ಇಡಲೇಬೇಕಿದೆ. ಇಲ್ಲದಿದ್ದರೆ ಆಪತ್ತು ಖಚಿತ. ಅಲ್ಪಸಂಖ್ಯಾತರ ತುಷ್ಟೀಕರಣದಲ್ಲಿ ನಿರತವಾಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಇದು ಕಾಣುತ್ತಿಲ್ಲವೇ? ಆದಷ್ಟು ಬೇಗ ಇದರ ಜಾಲ ಕಂಡು ಹಿಡಿದು ಇವರ ಹಿಂದಿರುವವರನ್ನು ಜೈಲಿಗೆ ಕಳುಹಿಸುವ
ಕೆಲಸ ಆಗಬೇಕು ಎಂದು ರಾಜನಹಳ್ಳಿ ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.
- BJP Karnataka
- DAVANAGERE NEWS
- Davanagere police surveillance
- DUDA ex chairman
- harihara arrest case
- Harihara Sohail arrest
- Migrant workers verification
- Pakistan contact suspect
- Rajanahalli Shivakumar
- security alert Davanagere
- ದಾವಣಗೆರೆ ಪೊಲೀಸ್
- ದಾವಣಗೆರೆ ಸುದ್ದಿ
- ದೂಡಾ ಮಾಜಿ ಅಧ್ಯಕ್ಷ
- ಪಾಕಿಸ್ತಾನ ಸಂಪರ್ಕ
- ಬಿಜೆಪಿ ಆಕ್ರೋಶ
- ರಾಜನಹಳ್ಳಿ ಶಿವಕುಮಾರ್
- ಹರಿಹರ ಸೊಹೇಲ್ ಬಂಧನ
- ಹೊರರಾಜ್ಯದವರ ಮೇಲೆ ನಿಗಾ





Leave a comment