Home ದಾವಣಗೆರೆ ಭ್ರಷ್ಟಾಚಾರ ವಿಚಾರದಲ್ಲಿ ರಾಜಿ ಇಲ್ಲ, ಡಬಲ್ ಬಿಲ್, ನಕಲಿ ಬಿಲ್ ಮಾಡುವವರ ಬಡಿದು ಹಾಕುವೆ: ಸಿಎಂ ಡಿ ಕೆ ಶಿವಕುಮಾರ್ ಖಡಕ್ ಎಚ್ಚರಿಕೆ!
ದಾವಣಗೆರೆನವದೆಹಲಿಬೆಂಗಳೂರು

ಭ್ರಷ್ಟಾಚಾರ ವಿಚಾರದಲ್ಲಿ ರಾಜಿ ಇಲ್ಲ, ಡಬಲ್ ಬಿಲ್, ನಕಲಿ ಬಿಲ್ ಮಾಡುವವರ ಬಡಿದು ಹಾಕುವೆ: ಸಿಎಂ ಡಿ ಕೆ ಶಿವಕುಮಾರ್ ಖಡಕ್ ಎಚ್ಚರಿಕೆ!

Share
ಡಿ ಕೆ ಶಿವಕುಮಾರ್
Share

ಬೆಂಗಳೂರು: “ನಾನು ಸೇರಿದಂತೆ ನನ್ನ ಮಂತ್ರಿ ಮಂಡಲ, ಅಧಿಕಾರಿಗಳು ಎಲ್ಲರೂ ಸರ್ಕಾರಿ ನೌಕರರು. ನಮ್ಮದು ಟೀಮ್ ಕರ್ನಾಟಕ. ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಕಲ್ಯಾಣ ಮಾಡುವುದೇ ನಮ್ಮ ಗುರಿ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಕರೆ ಕೊಟ್ಟರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಂಗಳವಾರ ನಡೆದ ಸರ್ಕಾರಿ ನೌಕರರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ನೌಕರರನ್ನು ಉದ್ದೇಶಿಸಿ ಮಾತನಾಡಿದರು.

“ನಮ್ಮನ್ನು ಸೇರಿದಂತೆ ರಾಜ್ಯದ ಜನರ ಸೇವೆ ಮಾಡುವ ಅವಕಾಶ ಸಿಕ್ಕಿರುವುದು 5.50 ಲಕ್ಷ ಸರ್ಕಾರಿ ನೌಕರರಿಗೆ ಮಾತ್ರ. ನಾವು ನಮಗೆ ಸಿಕ್ಕ ಅವಕಾಶ ಬಳಸಿಕೊಳ್ಳಬೇಕು. ಕೆಂಗಲ್ ಹನುಮಂತಯ್ಯ ಅವರ ಕಾಲದಿಂದ ಇಲ್ಲಿಯವರೆಗೆ ಎಲ್ಲ ಸಿಎಂಗಳು ತಮ್ಮದೇ ರೀತಿಯಲ್ಲಿ, ತಮ್ಮದೇ ಅನುಭವ ಸಿದ್ಧಾಂತದ ಮೇಲೆ ಆಡಳಿತ ಮಾಡಿದ್ದಾರೆ. ಕೆಂಗಲ್ ಹನುಮಂತಯ್ಯ ಅವರು ಜೈಲಿನ ಖೈದಿಗಳಿಂದ ವಿಧಾನಸೌಧ ಕಟ್ಟಿಸಿದರು. ಆಗ ಕೆಲವು ಖೈದಿಗಳು ಹನುಮಂತಯ್ಯ ಅವರ ಮೇಲೆ ಚಪ್ಪಲಿ ಎಸೆದಿದ್ದರು. ವಿಶ್ವೇಶ್ವರಯ್ಯ ಅವರು ₹1 ಗೆ ಕೆಲಸ ಮಾಡುತ್ತಿದ್ದರು ಎಂಬ ಇತಿಹಾಸ ಇದೆ. ನಾನು ಈ ಹಿಂದಿನವರ ಕೆಲಸಗಳನ್ನು ಟೀಕೆ ಮಾಡುವುದಿಲ್ಲ. ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಉಳಿಯುತ್ತವೆ” ಎಂದು ತಿಳಿಸಿದರು.

“ಅಂಬೇಡ್ಕರ್ ಅವರು ಇತಿಹಾಸ ಮರೆತವ ಇತಿಹಾಸ ಸೃಷ್ಟಿಸಲಾರ ಎಂದು ಹೇಳಿದ್ದಾರೆ. ನೀವು ಸಾಕಷ್ಟು ವಿದ್ಯೆ, ಅನುಭವ ಹೊಂದಿದ್ದೀರಿ. ನಾನು ಹೆಚ್ಚು ಓದಿಲ್ಲ, ಆದರೆ ಜಿಲ್ಲಾ ಪಂಚಾಯ್ತಿ ಸದಸ್ಯನಾಗಿ, ಶಾಸಕ, ಮಂತ್ರಿ, ಉಪಮುಖ್ಯಮಂತ್ರಿಯಾಗಿ ಅನುಭವ ಇದೆ. ನೀವು ಶ್ರಮಜೀವಿ, ಸರ್ಕಾರದ ನಾಡಿ ಮಿಡಿತ ಇಟ್ಟುಕೊಂಡು, ಜನ ಮತ್ತು ಸರ್ಕಾರದ ಸೇತುವೆಯಾಗಿದ್ದೀರಿ. ನಾವು ಅಧಿಕಾರದಲ್ಲಿ ಇದ್ದಾಗ ಯಾವ ಸಾಕ್ಷಿಗುಡ್ಡೆ ಬಿಟ್ಟು ಹೋಗುತ್ತೇವೆ ಎಂಬುದು ಮುಖ್ಯ” ಎಂದು ಕರೆ ಕೊಟ್ಟರು.

ಭ್ರಷ್ಟಾಚಾರ ವಿಚಾರದಲ್ಲಿ ರಾಜಿ ಇಲ್ಲ, ಡಬಲ್ ಬಿಲ್, ನಕಲಿ ಬಿಲ್ ಮಾಡುವವರನ್ನು ಬಡಿದು ಹಾಕುವೆ

“ಭ್ರಷ್ಟಾಚಾರ ವಿಚಾರದಲ್ಲಿ ನಾನು ರಾಜಿ ಇಲ್ಲ. ಅಧಿಕಾರಿಗಳ ಪ್ರತಿ ಹೆಜ್ಜೆ ಪರಿಶೀಲಿಸುತ್ತೇನೆ. ಪ್ರತಿ ಫಲಾನುಭವಿ ಮಾಹಿತಿ ಇಟ್ಟುಕೊಳ್ಳಬೇಕು. ಅವರು ಅದನ್ನು ಹೇಗೆ ಬಳಸುತ್ತಿದ್ದಾರೆ ಎಂದು ನೋಡಬೇಕು. ನಮ್ಮಲ್ಲಿ ಡಬಲ್ ಬಿಲ್ ಮಾಡುವ ಕೆಲಸ ಮಾಡುತ್ತಿದ್ದಾರೆ. ನಾನು ಅಂತಹವರನ್ನು ಬಡಿದು ಹಾಕುತ್ತೇನೆ. ನಕಲಿ ಬಿಲ್ ಗಳಿಗೆ ಅವಕಾಶ ಇಲ್ಲ. ದಾಖಲೆ ತಿದ್ದುವುದಕ್ಕೆ ಬ್ರೇಕ್ ಹಾಕಲು ಆಸ್ತಿ ದಾಖಲೆ ಡಿಜಿಟಲೀಕರಣ ಮಾಡಲಾಗುತ್ತಿದೆ” ಎಂದರು.

“ಪ್ರತಿ ತಾಲ್ಲೂಕು ಅಧಿಕಾರಿಗಳು ತಮ್ಮ ದಿನದ ಕಾರ್ಯಕ್ರಮದ ವಿವರ ಹಿರಿಯ ಅಧಿಕಾರಿಗಳಿಗೆ ನೀಡಬೇಕು. ಸಹಕಾರ, ಕಂದಾಯ ಅಧಿಕಾರಿಗಳಿಗೆ ನ್ಯಾಯ ನೀಡುವ ಅಧಿಕಾರ ಇರುತ್ತದೆ. ನ್ಯಾಯ ಪೀಠದಿಂದ ಅನ್ಯಾಯ ಆಗಬಾರದು. ಯಾರ ಒತ್ತಡಕ್ಕೂ ಮಣಿಯದೆ ಕೆಲಸ ಮಾಡಿ. ವಿಧಾನಸಭೆ ಆದ ಮೇಲೆ ಪ್ರತಿ ತಾಲ್ಲೂಕಿಗೂ ನಾನು ಭೇಟಿ ನೀಡುತ್ತೇನೆ. ಖಾಸಗಿ ಶಾಲೆಗಳು ಸೇರಿ ಎಲ್ಲಾ ಶಾಲೆಗಳು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಿ” ಎಂದು ಸೂಚಿಸಿದರು.

Share

Leave a comment

Leave a Reply

Your email address will not be published. Required fields are marked *