Home ನವದೆಹಲಿ ಪಕ್ಷಕ್ಕಿಂತ ಜನ್ಮಕೊಟ್ಟ ಸಮಾಜವೇ ದೊಡ್ಡದು, ಸಿದ್ದರಾಮಯ್ಯರಂತೆ ಬದ್ಧತೆಯ ಜೀವನ ನಡೆಸಿ: ದಾವಣಗೆರೆಯಲ್ಲಿ ನಿರಂಜನಾನಂದಪುರಿ ಮಹಾಸ್ವಾಮೀಜಿ ಕರೆ
ನವದೆಹಲಿದಾವಣಗೆರೆಬೆಂಗಳೂರು

ಪಕ್ಷಕ್ಕಿಂತ ಜನ್ಮಕೊಟ್ಟ ಸಮಾಜವೇ ದೊಡ್ಡದು, ಸಿದ್ದರಾಮಯ್ಯರಂತೆ ಬದ್ಧತೆಯ ಜೀವನ ನಡೆಸಿ: ದಾವಣಗೆರೆಯಲ್ಲಿ ನಿರಂಜನಾನಂದಪುರಿ ಮಹಾಸ್ವಾಮೀಜಿ ಕರೆ

Share
ಸಮಾಜ
Share

ದಾವಣಗೆರೆ: “ಜೀವನ ಹಾಗೂ ರಾಜಕೀಯದಲ್ಲಿ ಮುನ್ನಡೆಯಲು ಬದ್ಧತೆ ಅತ್ಯಗತ್ಯ. ಪಕ್ಷಕ್ಕಿಂತ ನಮಗೆ ಜನ್ಮಕೊಟ್ಟ ಸಮಾಜವೇ ಅತ್ಯಂತ ಮುಖ್ಯ” ಎಂದು ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಜಗದ್ಗುರುಗಳಾದ ಪೂಜ್ಯ ಶ್ರೀ ಡಾ. ನಿರಂಜನಾನಂದಪುರಿ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

ದಾವಣಗೆರೆ ಜಿಲ್ಲಾ ಕುರುಬ ಸಮಾಜದ ವತಿಯಿಂದ ನೂತನವಾಗಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಮಾ. ನಾಗರಾಜ್ ಅವರಿಗೆ ಆಯೋಜಿಸಲಾಗಿದ್ದ “ಅಭಿಮಾನದ ಅಭಿನಂದನೆ” ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ದಾವಣಗೆರೆ ಬಂಡಾಯದ ಭೂಮಿ: ಸಮಾಜದ ಒಗ್ಗಟ್ಟಿಗೆ ಶ್ರೀಗಳ ಹರ್ಷ

ಆಶೀರ್ವಚನ ನೀಡಿದ ಶ್ರೀಗಳು, “ನಮ್ಮ ಸಮಾಜದವರು ಎಂದೂ ಒಟ್ಟಿಗೆ ಸೇರುವುದಿಲ್ಲ, ಅವರಿಗೆ ಪಕ್ಷವೇ ಮುಖ್ಯ ಎಂಬ ಮಾತೊಂದಿತ್ತು. ಆದರೆ, ಇತ್ತೀಚೆಗೆ ನಶಿಸಿ ಹೋಗಿದ್ದ ಒಗ್ಗಟ್ಟು ಮತ್ತೆ ಚಿಗುರೊಡೆದಿರುವುದು ಸಂತೋಷದ ಸಂಗತಿ. ದಾವಣಗೆರೆ ಎನ್ನುವುದು ಬಂಡಾಯ ಮತ್ತು ಕ್ರಾಂತಿಯ ಭೂಮಿ. ಇಲ್ಲಿ ರೂಪುಗೊಂಡ ಪ್ರತಿಯೊಂದು ಹೋರಾಟ ಮತ್ತು ವೇದಿಕೆಗಳು ತಮ್ಮ ಗುರಿಯನ್ನು ಯಶಸ್ವಿಯಾಗಿ ತಲುಪಿವೆ” ಎಂದರು.

ಮಾ. ನಾಗರಾಜ್ ಅವರ ಕಾರ್ಯಕ್ರಮಕ್ಕೆ ಕುರುಬ ಸಮಾಜದ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಹಾಗೂ ಮುಖಂಡರು ಪಕ್ಷಾತೀತವಾಗಿ ಆಗಮಿಸಿ, ಅವರಿಗೆ ಕಂಬಳಿ ಹೊದಿಸಿ ‘ಶ್ರೀರಕ್ಷೆ’ ನೀಡಿದ್ದಾರೆ. “ನೀವು ಧೈರ್ಯವಾಗಿ ಮುನ್ನಡೆಯಿರಿ, ನಿಮ್ಮ ಹಿಂದೆ ನಾವಿದ್ದೇವೆ” ಎಂಬ ಭರವಸೆಯನ್ನು ಸಮಾಜ ನೀಡಿದೆ. ಈ ಬಲವಾದ ಒಗ್ಗಟ್ಟನ್ನು ಬಿಜೆಪಿಯವರು ಕೂಡ ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಶ್ರೀಗಳು ತಿಳಿಸಿದರು.

ಸಿದ್ದರಾಮಯ್ಯ ಬದ್ಧತೆಯ ನಾಯಕ – ಮಾ. ನಾಗರಾಜ್‌ಗೆ ಶ್ರಮಕ್ಕೆ ಸಿಕ್ಕ ಫಲ

ರಾಜಕೀಯ ಯಶಸ್ಸಿಗೆ ಬದ್ಧತೆಯ ಮಹತ್ವವನ್ನು ಪ್ರತಿಪಾದಿಸಿದ ಶ್ರೀಗಳು, “ಬದ್ಧತೆಯ ಜೀವನ ಇಲ್ಲದಿದ್ದರೆ ರಾಜಕೀಯದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ನಮ್ಮ ರಾಜ್ಯದಲ್ಲಿ ಬದ್ಧತೆಯ ಜೀವನ ನಡೆಸಿದ ಏಕೈಕ ನಾಯಕ ಸಿದ್ದರಾಮಯ್ಯ ಎಂದರೆ ತಪ್ಪಾಗಲಾರದು” ಎಂದು ಬಣ್ಣಿಸಿದರು.

ಮಾ. ನಾಗರಾಜ್ ಅವರ ಸಾಧನೆಯನ್ನು ಮೆಚ್ಚಿದ ಶ್ರೀಗಳು, “ನಾಗರಾಜ್ ಅವರು ಬಿಜೆಪಿಯಲ್ಲಿ, ಕೆಪಿಸಿಸಿ ಸದಸ್ಯರಾಗಿ ಹಾಗೂ ವಿದ್ಯಾರ್ಥಿ ಪರಿಷತ್‌ನಲ್ಲಿ ಸಮತೋಲನ ಕಾಯ್ದುಕೊಂಡು ಕೆಲಸ ಮಾಡಿದ್ದಾರೆ. ಅವರ ಈ ಸುದೀರ್ಘ ಬದ್ಧತೆಯ ಜೀವನವನ್ನು ಗುರುತಿಸಿ ಪಕ್ಷವು ಅವರಿಗೆ ರಾಜ್ಯಸಭೆ ಸದಸ್ಯತ್ವದ ಅಧಿಕಾರ ನೀಡಿದೆ. ಅವರ ದೇಹದಲ್ಲಿ ಕುರುಬರ ರಕ್ತ ಹರಿಯುತ್ತಿದೆ ಎಂಬ ಕಾರಣಕ್ಕೆ ಈ ಹುದ್ದೆ ಅವರಿಗೆ ವರವಾಗಿ ಒಲಿದು ಬಂದಿದೆ” ಎಂದರು.

ದಾವಣಗೆರೆಯಲ್ಲಿ ಎಂದೂ ಒಂದಾಗದ ಕುರುಬ ಸಮಾಜದ ಮುಖಂಡರು ಇಂದು ಒಂದೇ ವೇದಿಕೆಯಲ್ಲಿ ಸೇರಿರುವುದು ಸಮಾಜದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಒಳ್ಳೆಯ ಬೆಳವಣಿಗೆ ಎಂದು ಶ್ರೀಗಳು ಹಾರೈಸಿದರು.

ಈ ಸಂದರ್ಭದಲ್ಲಿ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರಂಜನಾನಂದಪುರಿ ಮಹಾಸ್ವಾಮಿಗಳು, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಬಿ. ಹೆಚ್. ಪರಶುರಾಮಪ್ಪ, ಜಿ.ಬಿ. ವಿನಯಕುಮಾರ, ಪ್ರಸನ್ನಕುಮಾರ ಕೆ., ಹೆಚ್.ಬಿ. ಗೋಣೆಪ್ಪ, ಎಸ್.ಎಲ್. ಆನಂದಪ್ಪ, ಜಡಗನಹಳ್ಳಿ ವಿರುಪಾಕ್ಷಪ್ಪ, ಬಿ.ಬಿ. ಮಲ್ಲೇಶ್, ಹೆಚ್. ಪರಶುರಾಮಪ್ಪ, ಕೆ. ರೇವಣಸಿದ್ದಪ್ಪ, ಹೆಚ್.ಜಿ. ಸಂಗಪ್ಪ, ಶಿವಾನಂದ ದಳವಾಯಿ, ಪುಷ್ಪಾ ಆನಂದಪ್ಪ, ಗುರುನಾಥ್, ಹಾಲೇಕಲ್ ಅರವಿಂದ್, ಬಿ.ಎಂ. ಸತೀಶ್ ಕೊಳೇನಹಳ್ಳಿ, ರಾಜು ಮೌರ್ಯ, ಪಿ.ಜೆ. ರಮೇಶ್, ಶಿವಣ್ಣ ಮಾಸ್ಟರ್, ವೀರಣ್ಣ, ಅಣಬೇರು ಶಿವಮೂರ್ತಿ, ಅಣ್ಣೆಶ್ ಐರಣಿ, ಪಿ.ಬಿ. ಬೀರಪ್ಪ, ಸೊಕ್ಕೆ ನಾಗರಾಜ್, ಬೈರೇಶ್, ಬೀರಪ್ಪ, ಕೆ.ವಿ. ಚನ್ನಪ್ಪ, ಬಸವರಾಜಪ್ಪ, ಕಲ್ಲೇರ ಬಸವರಾಜ್, ಗೋಣಿಬಸಪ್ಪ ಸೇರಿದಂತೆ ಸಮಾಜದ ಹಿರಿಯರು, ಮುಖಂಡರು ಹಾಗೂ ಯುವ ಬಂಧುಗಳು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *