ದಾವಣಗೆರೆ: ರಾಜ್ಯದಲ್ಲಿ ಒಂದರ ಹಿಂದೆ ಒಂದರಂತೆ ಇಂಧನ, ಹಾಲಿನ ಮತ್ತು ಸಾರಿಗೆ ಬಸ್ ಪ್ರಯಾಣ ದರಗಳನ್ನು ಏರಿಕೆ ಮಾಡುತ್ತಿರುವ ರಾಜ್ಯ ಸರ್ಕಾರದ ಧೋರಣೆ ವಿರುದ್ಧ ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ. ಪಾಟೀಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಸಮಯದಲ್ಲಿ ಉಚಿತ ಗ್ಯಾರಂಟಿಗಳ ಆಮಿಷವಡ್ಡಿ ಅಧಿಕಾರ ಹಿಡಿದ ಆಡಳಿತ ಪಕ್ಷವು, ಈಗ ನಿರ್ವಹಣಾ ವೈಫಲ್ಯವನ್ನು ಮುಚ್ಚಿಕೊಳ್ಳಲು ಜನಸಾಮಾನ್ಯರ ಮೇಲೆ ನಿರಂತರವಾಗಿ ಬೆಲೆ ಏರಿಕೆಯ ಬರೆ ಎಳೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಪ್ರತಿದಿನ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಬಡ ವರ್ಗದವರು ಅವಲಂಬಿಸಿರುವ ಸಾರ್ವಜನಿಕ ಸಾರಿಗೆಯ ದರವನ್ನು ಶೇ. 23 ರಿಂದ ಶೇ. 35 ರವರೆಗೆ ಹೆಚ್ಚಿಸಿರುವುದು ಜನಸಾಮಾನ್ಯರ ಬದುಕನ್ನು ದುಸ್ತರಗೊಳಿಸಿದೆ. ಕೂಡಲೇ ಸರ್ಕಾರ ತನ್ನ ಧೋರಣೆಯನ್ನು ಬದಲಿಸಿ ಬೆಲೆ ಏರಿಕೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಬೆಲೆ ಏರಿಕೆ ಖಂಡನೆ: ಹಾಲಿನ ದರ ಮತ್ತು ಬಸ್ ಪ್ರಯಾಣ ದರ ಏರಿಕೆಯಿಂದ ಬಡ ಹಾಗೂ ಮಧ್ಯಮ ವರ್ಗದವರ ಮಾಸಿಕ ಬಜೆಟ್ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಆಡಳಿತ ವೈಫಲ್ಯದ ಆರೋಪ: ಸಾರಿಗೆ ಸಂಸ್ಥೆಗಳ ಆರ್ಥಿಕ ನಷ್ಟವನ್ನು ಸರಿಪಡಿಸಲು ಜನರ ಜೇಬಿಗೆ ಕತ್ತರಿ ಹಾಕುವುದನ್ನು ಬಿಟ್ಟು, ಸರ್ಕಾರ ಸೂಕ್ತ ಆರ್ಥಿಕ ನಿರ್ವಹಣೆ ಮತ್ತು ಅನುದಾನ ಒದಗಿಸಬೇಕು.
ಜನಸ್ನೇಹಿ ಸಾರಿಗೆಗೆ ಒತ್ತಾಯ: ಸಾರ್ವಜನಿಕ ಸಾರಿಗೆಯನ್ನು ಲಾಭದ ದೃಷ್ಟಿಯಿಂದ ನೋಡದೆ, ಜನಸಾಮಾನ್ಯರಿಗೆ ಹೊರೆಯಾಗದಂತೆ ಅನುಕೂಲ ಕಲ್ಪಿಸಬೇಕು. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸಾರಿಗೆ ದರ ಏರಿಕೆ ಆದೇಶವನ್ನು ಮರುಪರಿಶೀಲಿಸಬೇಕು ಎಂದು ಶಿವನಗೌಡ ಟಿ. ಪಾಟೀಲ್ ಒತ್ತಾಯಿಸಿದ್ದಾರೆ.





Leave a comment