ಬೆಂಗಳೂರು: ಭಾರತೀಯ ರಾಜಕಾರಣ, ಚುನಾವಣಾ ನಿಧಿ, ಭ್ರಷ್ಟಾಚಾರ ಹಾಗೂ ವ್ಯವಸ್ಥೆಯ ವಾಸ್ತವಿಕತೆಗಳ ಕುರಿತು ಶಾಸಕ ಅರವಿಂದ್ ಬೆಲ್ಲದ್ ಅವರು ನೀಡಿರುವ ದಿಟ್ಟ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಸ್ವಾತಂತ್ರ್ಯಾನಂತರ ರಾಜಕಾರಣಕ್ಕೆ ಹಣ ಎಲ್ಲಿಂದ ಬರಬೇಕು ಎಂಬುದರ ಬಗ್ಗೆ ಸಂವಿಧಾನ ಕರ್ತರು ಯಾಕೆ ಚರ್ಚಿಸಲಿಲ್ಲ ಎಂಬುದು ತಮ್ಮನ್ನು ಕಾಡುವ ದೊಡ್ಡ ಪ್ರಶ್ನೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹಿಂದೆಲ್ಲಾ ಚುನಾವಣೆ ಎದುರಿಸಲು ಹೊಲ-ಗದ್ದೆ ಮಾರುತ್ತಿದ್ದರು, ಆದರೆ ಇಂದು ಚುನಾವಣೆ ಗೆದ್ದೇ ಆಸ್ತಿ ಮಾಡುವಂತಹ ವ್ಯವಸ್ಥೆ ಹೇಗೆ ಬಂತು ಎಂಬುದನ್ನು ನಾವೆಲ್ಲರೂ ವಿಮರ್ಶೆ ಮಾಡಬೇಕಿದೆ ಎಂದು ಅವರು ತಿಳಿಸಿದ್ದಾರೆ. ಸಮಾಜದಲ್ಲಿ ಶೇ. 80-85% ರಷ್ಟು ಭ್ರಷ್ಟಾಚಾರ ಅಧಿಕಾರಿ ವರ್ಗದಲ್ಲೇ ಇದೆ ಎಂದು ಹರಿಹಾಯ್ದಿರುವ ಅವರು, ಇದಕ್ಕೆ ಕುಸಿದ ನ್ಯಾಯಾಂಗ ವ್ಯವಸ್ಥೆಯೇ ಮೂಲ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.
ರಾಜಕಾರಣ ಮತ್ತು ವೃತ್ತಿಪರತೆ: ರಾಜಕಾರಣ ಎನ್ನುವುದು ಕೇವಲ ಸಮಾಜ ಸೇವೆಯಲ್ಲ, ಅದೊಂದು ಪ್ರೊಫೆಷನ್. ದಿನದ 24 ಗಂಟೆಯೂ ರಾಜಕಾರಣದಲ್ಲೇ ತೊಡಗಿಸಿಕೊಳ್ಳುವ ರಾಜಕಾರಣಿಯ ಕುಟುಂಬ ನಿರ್ವಹಣೆಯ ವಾಸ್ತವಿಕತೆಯನ್ನು ಅರ್ಥೈಸಿಕೊಳ್ಳಬೇಕು.
ಚುನಾವಣಾ ವೆಚ್ಚದ ವಾಸ್ತವತೆ: ಒಂದು ಲಕ್ಷ ಜನರ ರ‍್ಯಾಲಿ ಆಯೋಜಿಸಲು ಕನಿಷ್ಠ 10,000 ವಾಹನಗಳು ಬೇಕು. ಇಂತಹ ರಾಜಕೀಯ ಪಕ್ಷಗಳ ವಾಸ್ತವಿಕ ಖರ್ಚಿನ ಲೆಕ್ಕಾಚಾರಗಳ ಬಗ್ಗೆ ಕಣ್ಣುಮುಚ್ಚಿ ಕೂರಲು ಸಾಧ್ಯವಿಲ್ಲ.
ಭ್ರಷ್ಟಾಚಾರಕ್ಕೆ ಅಡಿಪಾಯ: ವ್ಯವಸ್ಥಿತ ಭ್ರಷ್ಟಾಚಾರಕ್ಕೆ ನಿಜವಾದ ಅಡಿಪಾಯ ಬಿದ್ದಿದ್ದೇ ಇಂದಿರಾ ಗಾಂಧಿಯವರ ಕಾಲದಲ್ಲಿ ಎಂದು ಅರವಿಂದ್ ಬೆಲ್ಲದ್ ಬಹಿರಂಗವಾಗಿ ಟೀಕಿಸಿದ್ದಾರೆ.
ಅಧಿಕಾರಿಗಳ ಭ್ರಷ್ಟಾಚಾರ ಹಾಗೂ ನ್ಯಾಯಾಂಗ: RTO ಅಧಿಕಾರಿಯೊಬ್ಬರ ಬಳಿ ಸಿಗುವ ಕೋಟಿಗಟ್ಟಲೆ ಆಸ್ತಿಯಂತಹ ನಿದರ್ಶನಗಳನ್ನು ಉಲ್ಲೇಖಿಸಿ, ಅಧಿಕಾರಿಗಳ ಭ್ರಷ್ಟಾಚಾರ ತಡೆಯುವಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಆಗಬೇಕಾದ ಸುಧಾರಣೆಗಳ ಕುರಿತು ರಾಷ್ಟ್ರವ್ಯಾಪಿ ಮುಕ್ತ ಚರ್ಚೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಶಾಸಕ ಅರವಿಂದ್ ಬೆಲ್ಲದ್ ಅವರ ಈ ನೇರ ಹಾಗೂ ದಿಟ್ಟ ನುಡಿಗಳು ಆಡಳಿತ ಮತ್ತು ವಿರೋಧ ಪಕ್ಷಗಳೆರಡರಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ರಾಜಕೀಯ ವಲಯದಲ್ಲಿ ಬಲವಾದ ಕಂಪನ ಸೃಷ್ಟಿಸಿದೆ.





Leave a comment