ದಾವಣಗೆರೆ:ಜಿಲ್ಲೆಯಲ್ಲಿ ಸಾರ್ವಜನಿಕ ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಮುಂಬರುವ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಗಳ ಕೊನೆಯವರೆಗೆ ಧ್ವನಿವರ್ಧಕಗಳ ಬಳಕೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿದೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.
ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳು-2000 (Noise Pollution Regulation & Control Rules 2000) ಅಡಿಯಲ್ಲಿ ನಿಯಮಾನುಸಾರ ಪೊಲೀಸ್ ಇಲಾಖೆಯು ಧ್ವನಿವರ್ಧಕಗಳ ಬಳಕೆಯನ್ನು ಪರಿಶೀಲಿಸಿದ ನಂತರವೇ ಅನುಮತಿ ನೀಡಲಿದೆ.
ಆದೇಶದಲ್ಲಿನ ಪ್ರಮುಖ ಮುಖ್ಯಾಂಶಗಳು:
ಹೊರ ಜಿಲ್ಲೆಯ ಡಿ.ಜೆಗಳಿಗೆ ಸಂಪೂರ್ಣ ನಿಷೇಧ: ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಹೊರ ಜಿಲ್ಲೆಗಳಿಂದ ಡಿ.ಜೆ (DJ) ಸಿಸ್ಟಂಗಳನ್ನು ತಂದು ದಾವಣಗೆರೆ ಜಿಲ್ಲೆಯ ವ್ಯಾಪ್ತಿಯಲ್ಲಿ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
4 ಸಾಮಾನ್ಯ ಸ್ಪೀಕರ್ ಬಾಕ್ಸ್‌ಗಳಿಗೆ ಮಾತ್ರ ಅವಕಾಶ: ಅತಿಯಾದ ಶಬ್ದ ಹೊರಸೂಸುವ ಡಿ.ಜೆ ಉಪಕರಣಗಳನ್ನು ಹೊರತುಪಡಿಸಿ, ನಿಯಮಿತ ಶಬ್ದ ಹೊರಡಿಸುವ ಗರಿಷ್ಠ 4 ಬಾಕ್ಸ್ ಸಾಮಾನ್ಯ ಧ್ವನಿವರ್ಧಕಗಳನ್ನು ಬಳಸಲು ಅವಕಾಶ ನೀಡಲಾಗಿದೆ.
ಪ್ರೆಶರ್ ಮೈಕ್ಸ್ ಬ್ಯಾನ್: ಕಿವಿಗೆ ಹಾನಿ ಉಂಟುಮಾಡುವ ಹಾಗೂ ತೀವ್ರ ಶಬ್ದದ ಪ್ರೆಶರ್ ಮೈಕ್ಸ್ (Pressure Mids) ಮತ್ತು ಇತರ ಹೈ-ಡೆಸಿಬಲ್ ಸಾಧನಗಳ ಬಳಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಕಾನೂನು ಕ್ರಮದ ಎಚ್ಚರಿಕೆ: ಜಿಲ್ಲಾಡಳಿತ ನಿಗದಿಪಡಿಸಿರುವ ಈ ಮಾನದಂಡಗಳನ್ನು ಪಾಲಿಸದ ಡಿ.ಜೆ ಮಾಲೀಕರು ಹಾಗೂ ಹಬ್ಬದ ಆಯೋಜಕರ ವಿರುದ್ಧ ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ನಿಯಮಾನುಸಾರ ಕಾನೂನು ಕ್ರಮ ಜರುಗಿಸಲಿದೆ.





Leave a comment