Home ಕ್ರೈಂ ನ್ಯೂಸ್ ದಾವಣಗೆರೆಯಲ್ಲಿ ಡೆಂಗಿ ಅಬ್ಬರ: 27 ಪ್ರಕರಣ ಪತ್ತೆ, ಲಾರ್ವಾ ಸಮೀಕ್ಷೆಗೆ ಜಿಲ್ಲಾಧಿಕಾರಿ ಖಡಕ್ ಸೂಚನೆ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ದಾವಣಗೆರೆಯಲ್ಲಿ ಡೆಂಗಿ ಅಬ್ಬರ: 27 ಪ್ರಕರಣ ಪತ್ತೆ, ಲಾರ್ವಾ ಸಮೀಕ್ಷೆಗೆ ಜಿಲ್ಲಾಧಿಕಾರಿ ಖಡಕ್ ಸೂಚನೆ!

Share
ದಾವಣಗೆರೆ
Share

ದಾವಣಗೆರೆ: ಜಿಲ್ಲೆಯಲ್ಲಿ ಜನವರಿ ಮಾಹೆಯಿಂದ ಇಲ್ಲಿಯವರಿಗೆ 27 ಡೆಂಗಿ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದ ಎಲ್ಲಾ ವಾರ್ಡ್‌ಗಳಲ್ಲಿ ಲಾರ್ವಾ ಸಮೀಕ್ಷೆ ಹಾಗೂ ಸೊಳ್ಳೆ ನಿಯಂತ್ರಣಕ್ಕೆ ಜಂಟಿ ಕಾರ್ಯಾಚರಣೆ ನಡೆಸುವಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಇಂದು ಡೆಂಗಿ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾ ಟಾಸ್ಕ್‌ ಪೋರ್ಸ್‌ ಜೂಮ್‌ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಡೆಂಗಿ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ. ಮನೆ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ನೀರು ಸಂಗ್ರಹವಾಗಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ಜ್ವರದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬೇಕು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಡೆಂಗಿ ಪ್ರಕರಣಗಳು ಸ್ವಲ್ಪ ಮಟ್ಟಿಗೆ ಏರಿಕೆಯಾಗಿವೆ. ಗ್ರಾಮೀಣ ಭಾಗದಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, ಮುನ್ನೆಚ್ಚರಿಕೆಯಾಗಿ ಎಲ್ಲಾ ಸ್ಥಳೀಯ ಸಂಸ್ಥೆಗಳು ಸಜ್ಜಾಗಿರಲು ತಿಳಿಸಿದರು.

ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳ ಆವರಣದಲ್ಲಿ ವಿದ್ಯಾರ್ಥಿಗಳ ಮೂಲಕ ವಾರಕ್ಕೊಮ್ಮೆ ಲಾರ್ವಾ ಸಮೀಕ್ಷೆ ನಡೆಸಿ, ಶಾಲಾ ಆವರಣವನ್ನು ‘ಬ್ರೀಡಿಂಗ್ ಮುಕ್ತ ವಲಯ’ (Breeding Free Zone) ಎಂದು ಘೋಷಿಸಿಕೊಳ್ಳಬೇಕು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಪ್ರಮುಖ ಕಾಲೇಜು ಆವರಣ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಡೆಂಗ್ಯೂ ರೋಗದ ಕುರಿತು ಮಾಹಿತಿ ನೀಡುವ ಫ್ಲೆಕ್ಸ್ ಅಳವಡಿಸಬೇಕು. ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಪ್ರತಿದಿನ ಮೈಕಿಂಗ್, ಬಿತ್ತಿಪತ್ರಗಳ ವಿತರಣೆ, ಡಂಗುರ ಸಾರುವುದು ಮತ್ತು ಗುಂಪು ಸಭೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು. ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ಮೂಲಕ ಡೆಂಗಿ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಹಕರಿಸುವಂತೆ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ ಮಾತನಾಡಿ ಪ್ರಸಕ್ತ ವರ್ಷದ ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 832 ಡೆಂಗಿ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅವುಗಳಲ್ಲಿ 27 ಪ್ರಕರಣಗಳು ಪಾಸಿಟಿವ್ ಎಂದು ಧೃಡಪಟ್ಟಿವೆ. ಅದೇ ರೀತಿ 551 ಚಿಕನ್ ಗುನ್ಯಾ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ 2 ಪ್ರಕರಣಗಳು ಪಾಸಿಟಿವ್ ಇವೆ ಎಂದು ತಿಳಿಸಿದರು.

ಕಳೆದ ವರ್ಷದ ಜೂನ್ 11ರ ಅವಧಿಗೆ ಹೋಲಿಸಿದರೆ ಈ ಬಾರಿ ಪ್ರಕರಣಗಳಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದೆ, ಜಿಲ್ಲೆಯಾದ್ಯಂತ ಪ್ರಕರಣಗಳು ಬಿಡಿಬಿಡಿಯಾಗಿ ದಾಖಲಾಗಿದ್ದು, ಯಾವುದೇ ನಿರ್ದಿಷ್ಟ ಪ್ರದೇಶದಲ್ಲಿ ಒಟ್ಟಾಗಿ ಹರಡಿಲ್ಲ. ದಾವಣಗೆರೆ ತಾಲೂಕು 10 ಪ್ರಕರಣಗಳು (ಅತಿ ಹೆಚ್ಚು)   ಹೊನ್ನಾಳಿ ತಾಲೂಕು  08 ಪ್ರಕರಣಗಳು, ಚನ್ನಗಿರಿ ತಾಲೂಕು 05 ಪ್ರಕರಣಗಳು, ಹರಿಹರ ತಾಲೂಕು 03 ಪ್ರಕರಣಗಳು ಮತ್ತು ಜಗಳೂರು ತಾಲೂಕು 01 ಪ್ರಕರಣ ಹೀಗೆ ಒಟ್ಟು ಪ್ರಕರಣಗಳು 27 ಪ್ರಕರಣಗಳು ಪತ್ತೆಹಚ್ಚಲಾಗಿದೆ , ನಗರ ಪ್ರದೇಶದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ  ರವೀಂದ್ರನಾಥ ಬಡಾವಣೆ, ಜೆ.ಹೆಚ್. ಪಟೇಲ್ ಬಡಾವಣೆ, ಆಂಜನೇಯ ಬಡಾವಣೆ ಹಾಗೂ ಚನ್ನಗಿರಿ ಟೌನ್ ವ್ಯಾಪ್ತಿಯಲ್ಲಿ ಹೆಚ್ಚಿನ ನಿಗಾ ವಹಿಸುವ ಅಗತ್ಯವಿದೆ ಎಂದರು.

ಸೊಳ್ಳೆ ಉತ್ಪತ್ತಿ ತಾಣಗಳ ನಿಯಂತ್ರಣಕ್ಕೆ ಸಹಕರಿಸದ ಹಾಗೂ ನಿಯಮ ಉಲ್ಲಂಘಿಸುವವರಿಗೆ ನೋಟಿಸ್ ನೀಡಿ 24 ರಿಂದ 48 ಗಂಟೆಗಳ ಕಾಲಾವಕಾಶ ನೀಡಲಾಗುವುದು. ಆದಾಗ್ಯೂ ನಿಯಮ ಪಾಲಿಸದಿದ್ದರೆ ಸ್ಥಳೀಯ ಸಂಸ್ಥೆಗಳ ಮೂಲಕ ದಂಡ ವಿಧಿಸಲು ಸರ್ಕಾರಿ ಆದೇಶದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಸಾರ್ವಜನಿಕರ ಸಹಭಾಗಿತ್ವ ಹಾಗೂ ಕೈಗೊಳ್ಳಬೇಕಾದ ಕ್ರಮಗಳು:

ಈಡಿಸ್ ಸೊಳ್ಳೆಗಳು ಮನೆಯ ಒಳಗೆ ಹಾಗೂ ಹೊರಗಿನ ನೀರಿನ ಸಂಗ್ರಹಗಳಾದ ಸಿಮೆಂಟ್ ತೊಟ್ಟಿ, ಬ್ಯಾರಲ್/ ಡ್ರಮ್ಮು, ಮಣ್ಣಿನ ಮಡಿಕೆ, ಫ್ರಿಡ್ಜ್, ಏರ್ ಕೂಲರ್, ಹೂವಿನ ಕುಂಡಗಳಲ್ಲಿರುವ ನೀರಿನಲ್ಲಿ ಮತ್ತು ಮನೆಯ ಪರಿಸರದಲ್ಲಿ ಬಿಸಾಡಿರುವ ಟೈರು, ತೆಂಗಿನ ಚಿಪ್ಪು, ಪ್ಲಾಸ್ಟಿಕ್ ವಸ್ತುಗಳು ಮುಂತಾದ ಘನತ್ಯಾಜ್ಯಗಳಲ್ಲಿ ಸಂಗ್ರಹವಾಗುವ ಮಳೆ ನೀರಿನಲ್ಲಿ ಮೊಟ್ಟೆಯಿಟ್ಟು ಸಂತಾನೋತ್ಪತ್ತಿ ಮಾಡುತ್ತವೆ. ಆದ್ದರಿಂದ ಸಾರ್ವಜನಿಕರು ವಾರಕ್ಕೊಮ್ಮೆ ತಮ್ಮ ಮನೆ ಮತ್ತು ಪರಿಸರದಲ್ಲಿರುವ ನೀರಿನ ಪರಿಕರಗಳನ್ನು ಕಡ್ಡಾಯವಾಗಿ ಪರೀಕ್ಷಿಸಿ, ಉಜ್ಜಿ ತೊಳೆದು, ಒಣಗಿಸಿ ನಂತರ ನೀರನ್ನು ಸಂಗ್ರಹಿಸಬೇಕು.

ಸಿಮೆಂಟ್ ತೊಟ್ಟಿಗಳಲ್ಲಿ ನೀರು ಸಂಗ್ರಹಿಸುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ಒಂದು ವೇಳೆ ಸಿಮೆಂಟ್ ತೊಟ್ಟಿಗಳಲ್ಲಿ ನೀರನ್ನು ಸಂಗ್ರಹಿಸುವುದು ಅನಿವಾರ್ಯವಿದ್ದಲ್ಲಿ, ಅವುಗಳನ್ನು ಕಡ್ಡಾಯವಾಗಿ ಮುಚ್ಚಳದಿಂದ ಭದ್ರವಾಗಿ ಮುಚ್ಚಬೇಕು. ಸಾರ್ವಜನಿಕರು ಬಳಸುವ ನೀರಿನಲ್ಲಿ ಈಡಿಸ್ ಸೊಳ್ಳೆಗಳು ಉತ್ಪತ್ತಿಯಾಗದಂತೆ ತಡೆಯಲು ನೀರಿಗೆ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಹಾಕಬೇಕು. ಮಕ್ಕಳಿಗೆ ಈಡಿಸ್ ಸೊಳ್ಳೆಗಳು ಕಚ್ಚದಂತೆ ಮತ್ತು ರೋಗದಿಂದ ರಕ್ಷಣೆ ಪಡೆಯಲು ‘ಫ್ಯಾಬ್ರಿಕ್ ರೋಲಾನ್’ (Fabric Roll-on) ಉಪಯೋಗಿಸಬೇಕು.

ಸೊಳ್ಳೆ ಕಡಿತದಿಂದ ಬಚಾವಾಗಲು ಸೊಳ್ಳೆ ಪರದೆ ಬಳಸುವುದು, ಮೈ ತುಂಬಾ ಬಟ್ಟೆ ಧರಿಸುವುದು ಹಾಗೂ ಮನೆಗಳ ಕಿಟಕಿ, ಬಾಗಿಲುಗಳಿಗೆ ಸೊಳ್ಳೆ ನಿರೋಧಕ ಜಾಲಿಯನ್ನು (Mesh) ಅಳವಡಿಸಿಕೊಳ್ಳಬೇಕು. ಡೆಂಗ್ಯೂ ರೋಗದ ಯಾವುದೇ ಲಕ್ಷಣಗಳು (ತೀವ್ರ ಜ್ವರ, ತಲೆನೋವು, ಕಣ್ಣುಗಳ ಹಿಂಭಾಗ ನೋವು, ಕೀಲು ನೋವು) ಕಂಡುಬಂದಲ್ಲಿ ಕಾಲಹರಣ ಮಾಡದೆ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ಸೂಕ್ತ ವೈದ್ಯಕೀಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು.

ಆರೋಗ್ಯ ಇಲಾಖೆಯ ಸಿಬ್ಬಂದಿ ಅಥವಾ ಆಶಾ (ASHA) ಕಾರ್ಯಕರ್ತೆಯರು ಲಾರ್ವಾ ಸಮೀಕ್ಷೆಗಾಗಿ ಮನೆಗೆ ಬಂದಾಗ ಸಾರ್ವಜನಿಕರು ಅವರಿಗೆ ಸಂಪೂರ್ಣವಾಗಿ ಸಹಕರಿಸಬೇಕು. ಜಿಲ್ಲಾಡಳಿತದಿಂದ ಪ್ರತಿ ಶುಕ್ರವಾರದಂದು ಕೈಗೊಳ್ಳುವ “ವಿಶೇಷ ಲಾರ್ವಾ ಸಮೀಕ್ಷೆ ಮತ್ತು ನಿರ್ಮೂಲನಾ” ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.

ಮಹಾನಗರ ಪಾಲಿಕೆ ಅಯುಕ್ತರಾದ ಮಹಾಂತೇಶ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯಾಧಿಕಾರಿಗಳು ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Share

Leave a comment

Leave a Reply

Your email address will not be published. Required fields are marked *