SUDDIKSHANA KANNADA NEWS/ DAVANAGERE/ DATE:14-09-2023
ದಾವಣಗೆರೆ (Davanagere): ಮಹಿಳೆಯೊಬ್ಬರು ಮನೆಯಲ್ಲಿ ಒಬ್ಬರೇ ಇರುವುದನ್ನು ಗಮನಿಸಿ ಕಳ್ಳನೊಬ್ಬ ಹಲ್ಲೆ ಮಾಡಿ 5 ಲಕ್ಷ ರೂಪಾಯಿ ದರೋಡೆ ಮಾಡಿಕೊಂಡು ಹೋದ ಘಟನೆ ನಗರದ ಕುಂದವಾಡ ರಸ್ತೆಯಲ್ಲಿನ ಲೇಕ್ ವೀವ್ ಬಡಾವಣೆಯಲ್ಲಿ ನಡೆದಿದೆ.
ಯೋಗೇಶ್ವರಿ ಹಲ್ಲೆಗೊಳಗಾದ ಮಹಿಳೆ. ಶ್ರೀನಾಥ್ ಎಂಬುವವರ ಪತ್ನಿಯಾದ ಯೋಗೇಶ್ವರಿ ಅವರು, ಮನೆಯಲ್ಲಿ ಒಬ್ಬರೇ ಇದ್ದರು. ಕಸ ಹಾಕಲು ಮನೆಯಿಂದ ಹೊರಗಡೆ ಬಂದಿದ್ದಾರೆ. ಈ ವೇಳೆ ಮನೆಯೊಳಗೆ ಹೋದ ಕಳ್ಳನೊಬ್ಬ ಅಲ್ಲೇ ಅವಿತು ಕುಳಿತಿದ್ದಾನೆ. ಯೋಗೇಶ್ವರಿ ತಲೆಗೆ ಕಲ್ಲಿನಿಂದ ಹೊಡೆದಿದ್ದಾನೆ. ಆಮೇಲೆ ಮಹಿಳೆ ಬರುತ್ತಿದ್ದಂತೆ ಮನಬಂದಂತೆ ಥಳಿಸಿ ಮನೆಯಲ್ಲಿದ್ದ 5 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದಾನೆ.
ಈ ಸುದ್ದಿಯನ್ನೂ ಓದಿ:
ಚೈತ್ರಾ ಕುಂದಾಪುರ (Kundapur) ಅಂಡ್ ಗ್ಯಾಂಗ್ ನ ಒಂದೊಂದೇ ಕರ್ಮಕಾಂಡ ಬಯಲಿಗೆ…? ಮಾಹಿತಿ ನೀಡಿದಾತನಿಗೆ ಹಾಕಿದ್ರಾ ಬೆದರಿಕೆ? ಏನೀ ವಂಚನೆ ಲೀಲೆ… ಇನ್ನೂ ಸಿಗದ ಹಾಲಶ್ರೀ ಸ್ವಾಮಿ ?
ಶ್ರೀನಾಥ್ ಅವರು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ನಿಮಿತ್ತ ಹೊರಗಡೆ ಹೋಗಿದ್ದರು. ಮನೆಯ ಬಾಗಿಲು ತೆಗೆದು ಕಸ ಹಾಕಲು ಹೊರಗಡೆ ಹೋಗುತ್ತಿದ್ದಂತೆ ಒಳನುಗ್ಗಿದ್ದ ಕಳ್ಳನು ಯೋಗೇಶ್ವರಿ ಹಾಗೂ ಅವರ 8 ವರ್ಷದ ಪುತ್ರನನ್ನು ಕೊಠಡಿಯಲ್ಲಿ ಕೂಡಿ ಹಾಕಿದ್ದಾನೆ. ಹೊರಗಡೆ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಚಾಕು ತೋರಿಸಿ ಹಣ, ಒಡವೆ ನೀಡುವಂತೆ ಬೆದರಿಕೆ ಹಾಕಿದ್ದಾನೆ. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರದು ಎಂದು ಬೆದರಿಸಿದ್ದಾನೆ.
ಪುತ್ರನ ಚಿಕಿತ್ಸೆಗಾಗಿ ಹಣವನ್ನು ಮನೆಯಲ್ಲಿಟ್ಟಿದ್ದರು. ಈ ಹಣವನ್ನು ಕದ್ದುಕೊಂಡು ಹೋಗಿರುವ ಕಳ್ಳನ ಕೃತ್ಯಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಕಳ್ಳ ಮನೆಯ ಒಳಗೆ ಹಾಗು ಹೊರಗೆ ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ದೃಶ್ಯಗಳನ್ನು ಆಧರಿಸಿ ವಿದ್ಯಾನಗರ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
ಮನೆಯಲ್ಲಿ ಒಬ್ಬಂಟಿಯಾಗಿರುವ ಮಹಿಳೆಯರು ಎಚ್ಚರದಿಂದ ಇರಬೇಕು. ಮನೆಯ ಸುತ್ತಮುತ್ತ ಯಾರಾದ್ದಾದರೂ ಇದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ಮನೆ ಬಾಗಿಲು ತೆಗೆದು ಹೋಗುವುದಕ್ಕಿಂತ ಮುಂಚೆ ಪರಿಶೀಲಿಸಿ. ಮಾತ್ರವಲ್ಲ, ಅಪರಿಚಿತರು ಬಂದರೆ ಎಚ್ಚರದಿಂದ ಇರಿ. ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.