ದಾವಣಗೆರೆ: ಕರ್ನಾಟಕ ರಾಜ್ಯ ಸರ್ಕಾರವು ಬಸ್ ಪ್ರಯಾಣ ದರ ಹಾಗೂ ಹಾಲಿನ ದರವನ್ನು ಏರಿಕೆ ಮಾಡಿರುವುದನ್ನು ಖಂಡಿಸಿ ಹಾಗೂ ಈ ಕೂಡಲೇ ಜನವಿರೋಧಿ ದರ ಹೆಚ್ಚಳ ಹಿಂಪಡೆಯುವಂತೆ ಒತ್ತಾಯಿಸಿ ದಾವಣಗೆರೆ ಜಿಲ್ಲಾ ಭಾರತೀಯ ಜನತಾ ಪಾರ್ಟಿ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಬಿಜೆಪಿ ಕಚೇರಿಯಿಂದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದವರೆಗೆ ಪಾದಯಾತ್ರೆ ನಡೆಸಿ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿರುದ್ಧ ಘೋಷಣೆ ಹಾಕಿದರು.
ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ವಿದ್ಯುತ್ ದರ ಹೆಚ್ಚಳದಿಂದ ಈಗಾಗಲೇ ಸಂಕಷ್ಟದಲ್ಲಿರುವ ಜನಸಾಮಾನ್ಯರ ಮೇಲೆ ಈ ದರ ಏರಿಕೆಯು ಬಾಸುಂಡೆ ಬಡಿಸಿದಂತಾಗಿದೆ ಎಂದು ಬಿಜೆಪಿ ಮುಖಂಡರು ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಬಡವರು, ಮಧ್ಯಮ ವರ್ಗದವರು, ರೈತರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಮಹಿಳೆಯರ ಕುಟುಂಬದ ಮಾಸಿಕ ಬಜೆಟ್ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಗ್ರಾಮೀಣ ಭಾಗದಿಂದ ಪ್ರತಿದಿನ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಸರ್ಕಾರಿ ಬಸ್‌ಗಳನ್ನೇ ನಂಬಿ ಸಂಚರಿಸುವವರಿಗೆ ಬಸ್ ಪ್ರಯಾಣ ದರ ಏರಿಕೆ ನೇರ ಹೊರೆಯಾಗಿದೆ. ಹಾಗೆಯೇ, ಮಕ್ಕಳ ಪೌಷ್ಟಿಕ ಆಹಾರ ಮತ್ತು ವಯೋವೃದ್ಧರ ಆರೋಗ್ಯದ ಪ್ರಮುಖ ಮೂಲವಾಗಿರುವ ಹಾಲಿನ ದರವನ್ನು ಹೆಚ್ಚಿಸಿರುವುದು ಜನಸಾಮಾನ್ಯರ ಹೊಟ್ಟೆಮೇಲೆ ಬಡೆದಂತಾಗಿದೆ ಎಂದು ಪ್ರತಿಭಟನಾಕಾರರು ಆಪಾದಿಸಿದರು.
ಬಸ್ ಪ್ರಯಾಣ ದರ ಏರಿಕೆ ವಿರೋಧ: ಸರ್ಕಾರಿ ಬಸ್ ಪ್ರಯಾಣ ದರ ಹೆಚ್ಚಳದಿಂದ ವಿದ್ಯಾರ್ಥಿಗಳು ಮತ್ತು ಕಾರ್ಮಿಕರಿಗೆ ಉಂಟಾಗಿರುವ ನೇರ ಆರ್ಥಿಕ ಹೊರೆಯನ್ನು ಕೂಡಲೇ ಮರುಪರಿಶೀಲಿಸಬೇಕು.
ಹಾಲಿನ ದರ ಇಳಿಕೆಗೆ ಆಗ್ರಹ: ಹಾಲು ಉತ್ಪಾದಕರಿಗೂ ನ್ಯಾಯಯುತ ಬೆಲೆ ಸಿಗಲಿ, ಅದೇ ಸಮಯದಲ್ಲಿ ಗ್ರಾಹಕರಿಗೂ ಹೊರೆಯಾಗದಂತಹ ಸಮತೋಲಿತ ನೀತಿಯನ್ನು ಸರ್ಕಾರ ಅನುಸರಿಸಬೇಕು.
ಅಗತ್ಯ ವಸ್ತುಗಳ ಬೆಲೆ ನಿಯಂತ್ರಣ: ಮುಕ್ತ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಿಸಲು ಕಠಿಣ ಹಾಗೂ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು.
ಜನಪರ ಆರ್ಥಿಕ ನೀತಿ: ಬಡವರು ಮತ್ತು ಮಧ್ಯಮ ವರ್ಗದವರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಜನಪರ ಆರ್ಥಿಕ ನೀತಿಗಳನ್ನು ಜಾರಿಗೊಳಿಸುವಂತೆ ದಾವಣಗೆರೆ ಜಿಲ್ಲಾ ಬಿಜೆಪಿ ಘಟಕದಿಂದ ಆಗ್ರಹ.
ರೈತರ ಹಿತಾಸಕ್ತಿಯನ್ನು ಗೌರವಿಸುತ್ತಲೇ ಜನಸಾಮಾನ್ಯರ ಜೀವನ ನಿರ್ವಹಣೆಗೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಬಸ್ ಹಾಗೂ ಹಾಲಿನ ದರ ಏರಿಕೆ ನಿರ್ಧಾರವನ್ನು ವಾಪಸ್ ಪಡೆಯಬೇಕು ಎಂದು ದಾವಣಗೆರೆ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಮನವಿ ಸಲ್ಲಿಸಲಾಗಿದೆ.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ್ ಮೆಳ್ಳಿಕಟ್ಟೆ, ಶಾಸಕ ಬಿ. ಪಿ. ಹರೀಶ್, ಮುಖಂಡರಾದ ಲೋಕಿಕೆರೆ ನಾಗರಾಜ್, ಮಾಡಾಳ್ ಮಲ್ಲಿಕಾರ್ಜುನ್, ಸತೀಶ್ ಕೊಳೇನಹಳ್ಳಿ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಚೇತನಾ ಶಿವಕುಮಾರ್, ಮಾಜಿ ಶಾಸಕ ಬಸವರಾಜ್ ನಾಯ್ಕ್, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ವೀರೇಶ್ ಹನಗವಾಡಿ, ಖಜಾಂಚಿ ವಿಶ್ವಾಸ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಕೆ. ಎಂ. ವೀರೇಶ್, ಧನಂಜಯ ಕಡ್ಲೇಬಾಳು ಮತ್ತಿತರರು ಹಾಜರಿದ್ದರು.





Leave a comment