SUDDIKSHANA KANNADA NEWS/ DAVANAGERE/ DATE:07-01-2024
ದಾವಣಗೆರೆ: 2024ರ ಲೋಕಸಭೆ ಚುನಾವಣೆಯತ್ತ ಈಗ ಎಲ್ಲರ ಚಿತ್ತ ನೆಟ್ಟಿದೆ. ದಾವಣಗೆರೆ ಬಿಜೆಪಿಯಲ್ಲಿಯೂ ಆಕಾಂಕ್ಷಿಗಳಿದ್ದಾರೆ. ಆರ್ ಎಸ್ ಎಸ್ (RSS)ನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ, ಎ. ಕೆ. ಫೌಂಡೇಶನ್ ಅಧ್ಯಕ್ಷರೂ ಆದ ಬಿಜೆಪಿ ಮುಖಂಡ ಕೆ. ಬಿ. ಕೊಟ್ರೇಶ್ ಅವರೂ ಸಹ ಈ ಬಾರಿ ಬಿಜೆಪಿ ಟಿಕೆಟ್ ನ ಆಕಾಂಕ್ಷಿ. ಸರ್ಕಾರಿ ಅಧಿಕಾರಿಯಾಗಿ ಕೆಲಸ ಮಾಡಿದ್ದ ಕೊಟ್ರೇಶ್ ಅವರು ಈಗ ಸಂಪೂರ್ಣವಾಗಿ ಬಿಜೆಪಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಶಿಸ್ತಿನ ಸಿಪಾಯಿ ಆಗಿರುವ ಕೊಟ್ರೇಶ್ ಅವರು ಪಕ್ಷದ ತತ್ವ, ಸಿದ್ಧಾಂತಕ್ಕೆ ಬದ್ಧ. ಟಿಕೆಟ್ ಕೊಟ್ಟರೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದರೆ, ಒಂದು ವೇಳೆ ಟಿಕೆಟ್ ಸಿಗದಿದ್ದರೂ ಬೇರೆಯವರಿಗೆ ಸಿಕ್ಕರೆ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದಿದ್ದಾರೆ. ಈ ಮೂಲಕ ತಾನೊಬ್ಬ ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತ ಎನ್ನುತ್ತಾರೆ.
ಈ ಸುದ್ದಿಯನ್ನೂ ಓದಿ:
EXCLUSIVE: ಅಂದು ಎಸ್. ಬಂಗಾರಪ್ಪ ರೈತರ ಹಿತ ಕಾಪಾಡಿದ್ರು… ಇಂದು ಪುತ್ರ ಮಧು ಬಂಗಾರಪ್ಪ ಬರೆ ಎಳೆದ್ರು… ರೈತರ ಆಕ್ರೋಶಕ್ಕೂ ಕಾರಣವಾದ್ರು…!
ನರೇಂದ್ರ ಮೋದಿ ಅವರು ಪ್ರಧಾನಿಯಾಗಬೇಕು ಎಂಬ ಮಹದಾಸೆ ಹೊಂದಿರುವ ಕೊಟ್ರೇಶ್ ಅವರು, ಬಿಜೆಪಿಯು ಮೊದಲಿನಂತಿಲ್ಲ. ಬಲಿಷ್ಠ ಪಕ್ಷ. ವಿಶ್ವವೇ ಮೆಚ್ಚುವಂಥ ಕೆಲಸ ಮಾಡಿರುವ ನರೇಂದ್ರ ಮೋದಿ ಅವರು ಮತ್ತೊಮ್ಮೆ ಈ ದೇಶದ ಚುಕ್ಕಾಣಿ ಹಿಡಿಯಬೇಕು ಎಂಬುದು ಪ್ರತಿಯೊಬ್ಬ ಬಿಜೆಪಿಯ ಕಾರ್ಯಕರ್ತರ ಆಸೆ. ನನ್ನದೂ ಸಹ ಇದೇ ಆಸೆಯಾಗಿದೆ. ಲೋಕಸಭೆ ಚುನಾವಣೆ ಕಾವು ಇನ್ನು ಏರಿಲ್ಲವಾದರೂ ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆ, ಕೊಟ್ರೇಶ್ ಅವರೂ ಸಹ ಆಕಾಂಕ್ಷಿಯಾಗಿದ್ದಾರೆ. ಇದನ್ನು ಬಹಿರಂಗವಾಗಿಯೇ ಹೇಳಿದ್ದಾರೆ.
ಸಿದ್ದೇಶ್ವರರಿಗೆ ಟಿಕೆಟ್ ಕೊಟ್ಟರೂ ಕೆಲಸ
ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರು ನಮ್ಮ ನಾಯಕರು. ನಾಲ್ಕು ಬಾರಿ ಸಂಸದರಾಗಿದ್ದಾರೆ. ಅವರಿಗೆ ಟಿಕೆಟ್ ನೀಡಿದರೂ ಗೆಲುವಿಗೆ ಶ್ರಮಿಸುತ್ತೇನೆ. ಒಂದು ವೇಳೆ ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡದಿದ್ದರೆ ನಾನೂ ಟಿಕೆಟ್ ಆಕಾಂಕ್ಷಿ. ಸ್ವಯಂ ನಿವೃತ್ತಿ ಪಡೆದ ಬಳಿಕ ಪಕ್ಷದ ಪರವಾಗಿ ದುಡಿಯುತ್ತಿದ್ದೇನೆ. ಸಾಮಾನ್ಯ ಕಾರ್ಯಕರ್ತನಂತೆ ಕೆಲಸ ಮಾಡಿದ್ದೇನೆ. ಇದು ಪಕ್ಷ ಹಾಗೂ ಆರ್ ಎಸ್ ಎಸ್ ನಾಯಕರಿಗೂ ಗೊತ್ತಿದೆ ಎನ್ನುತ್ತಾರೆ.
ರೇಣುಕಾಚಾರ್ಯರೂ ಸೀನಿಯರ್
ಎಂ. ಪಿ. ರೇಣುಕಾಚಾರ್ಯ ಈಗಾಗಲೇ ಸಚಿವರಾಗಿ, ಶಾಸಕರಾಗಿ, ಪಕ್ಷದ ವಿವಿಧ ಘಟಕಗಳಲ್ಲಿ ಕೆಲಸ ಮಾಡಿದ್ದಾರೆ. ಅವರಿಗೆ ಟಿಕೆಟ್ ನೀಡಿದ್ರೂ ಗೆಲುವಿಗೆ ಶ್ರಮಿಸುತ್ತೇನೆ. ಎಂ. ಪಿ. ರೇಣುಕಾಚಾರ್ಯರೂ ಸೀನಿಯರ್. ಒಟ್ಟಾರೆ ದಾವಣಗೆರೆ ಜಿಲ್ಲೆಯು ಬಿಜೆಪಿ ಭದ್ರಕೋಟೆ. ಇದು ಮುಂದುವರಿಯಬೇಕು ಎಂಬುದು ತಮ್ಮ ಅಪೇಕ್ಷೆ ಎನ್ನುತ್ತಾರೆ ಕೊಟ್ರೇಶ್.
ವಿಜಯೇಂದ್ರ ಆಯ್ಕೆಯಿಂದ ಉತ್ಸಾಹ ಇಮ್ಮಡಿ
ಕರ್ನಾಟಕದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರ ಪುತ್ರ ಬಿ. ವೈ. ವಿಜಯೇಂದ್ರ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ್ದಾರೆ. ಅವರ ನೇಮಕದಿಂದ ಉತ್ಸಾಹ,
ರಣೋತ್ಸಾಹ ಬಿಜೆಪಿಯಲ್ಲಿ ಹೆಚ್ಚಾಗಿದೆ. ವಿಜಯೇಂದ್ರ ಅವರೂ ಕಾರ್ಯಕರ್ತರಾಗಿ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ, ಎಬಿವಿಪಿಯಲ್ಲಿಯೂ ಕೆಲಸ ಮಾಡಿದ್ದಾರೆ.
ಉಪಚುನಾವಣೆಯಲ್ಲಿ ತಮಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಬಿಜೆಪಿ ಗೆಲ್ಲದ ಕ್ಷೇತ್ರಗಳಲ್ಲಿ ಕಮಲ ಅರಳುವಂತೆ ಮಾಡಿದ ಯುವ ನಾಯಕರು. ಈ ಎಲ್ಲಾ ಅರ್ಹತೆಗಳಿಂದಲೇ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಕಳೆದ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿಯಲ್ಲಿ ಈಗ ರಣೋತ್ಸಾಹ ಬಂದಿದೆ. ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ, ಹುರುಪು ಜಾಸ್ತಿಯಾಗಿದೆ. ಅವರು ಆಯ್ಕೆಯಾಗಿರುವುದರಿಂದ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸುವುದರಲ್ಲಿ ಸಂಶಯ ಇಲ್ಲ ಎಂದು ಕೊಟ್ರೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರದಲ್ಲಿ ಸಂಚರಿಸುತ್ತಿರುವೆ
ನಾನು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ. ಎಲ್ಲೆಡೆ ಪ್ರಚಾರಕ್ಕೆ ಹೋಗಿದ್ದೇನೆ. ಹೋಗುತ್ತಿದ್ದೇನೆ. ಬಿಜೆಪಿ ಪಕ್ಷ ಹಾಗೂ ಆರ್ ಎಸ್ ಎಸ್ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದೇನೆ. ಪಕ್ಷದಲ್ಲಿ ಹೊಸಬರಿಗೆ ಅವಕಾಶ ನೀಡುವುದಾದರೆ ಟಿಕೆಟ್ ನನಗೆ ಕೊಡಬೇಕು ಎಂಬ ಅಪೇಕ್ಷೆ ಇದೆ. ಸಿದ್ದೇಶಣ್ಣ ಅವರಿಗೆ ಟಿಕೆಟ್ ನೀಡಿದರೆ ಸಂತೋಷ. ಯಾರಿಗೆ ಟಿಕೆಟ್ ನೀಡಿದರೂ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿಯುತ್ತೇನೆ. ಟಿಕೆಟ್ ಸಿಕ್ಕರೆ ಖಂಡಿತವಾಗಿಯೂ ಗೆಲ್ಲುವ ವಿಶ್ವಾಸ ನನಗೆ ಇದೆ ಎಂದು ತಿಳಿಸಿದರು.
ದಿನದ 24ಗಂಟೆಯೂ ಕೆಲಸ
ನನಗೆ ಟಿಕೆಟ್ ಸಿಕ್ಕು ಲೋಕಸಭೆ ಸದಸ್ಯನಾಗಿ ಆಯ್ಕೆಯಾದರೆ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ದಿನದ 24 ಗಂಟೆಯೂ ಜಿಲ್ಲೆಯ ಜನರ ಕಷ್ಟಗಳಿಗೆ ಸ್ಪಂದಿಸುವೆ. ಇದಕ್ಕಾಗಿ ಪ್ರತ್ಯೇಕವಾಗಿ ಒಂದು ನಂಬರ್ ಇಟ್ಟು ಅವರಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ. 24 ಗಂಟೆಯೂ ಸಮಸ್ಯೆಗಳಿಗೆ ಸ್ಪಂದಿಸಬೇಕು. ಜನರಿಗಾಗಿ ಕೆಲಸ ಮಾಡಬೇಕು. ಅಧಿಕಾರಿಯಾಗಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ ಜನರ ಮನಸ್ಸು ಗೆದ್ದಿರುವೆ. ರಾಜಕಾರಣಿಯಾಗಿಯೂ ಗೆಲ್ಲಬೇಕೆಂಬ ಆಸೆಯಿಂದ ಹಾಗೂ ಜನರ ಸಂಕಷ್ಟಗಳನ್ನು ಪರಿಹರಿಸುವ ಸಲುವಾಗಿ ರಾಜಕಾರಣಕ್ಕೆ ಬಂದಿರುವೆ. ಎಲ್ಲದಕ್ಕೂ ಕಾಲಕೂಡಿಬರಬೇಕು ಎಂದು ಹೇಳುತ್ತಾರೆ ಅವರು.
ಕೆ. ಬಿ. ಕೊಟ್ರೇಶ್ ಹಿನ್ನೆಲೆ
ಕೆ. ಬಿ. ರೇವಣ್ಣರ ಪುತ್ರರಾಗಿರುವ ಕೆ. ಬಿ. ಕೊಟ್ರೇಶ್ ಅವರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಬಿ.ಇ. ಸಿವಿಲ್ ಇಂಜಿನಿಯರಿಂಗ್, ಎಂ. ಟೆಕ್ ಇನ್ ಎನ್ವಿರಾಲ್ಮೆಂಟಲ್ ಇಂಜಿನಿಯರ್ ಪದವೀಧರರೂ ಹೌದು.
ಏನೆಲ್ಲಾ ಜವಾಬ್ದಾರಿ ವಹಿಸಿದ್ದಾರೆ…?
ಬಿಜೆಪಿಯ ಸಕ್ರಿಯ ಸದಸ್ಯರು, ಆರ್ ಎಸ್ ಎಸ್ ಸ್ವಯಂ ಸೇವಕರು, ಸ್ವಾಮಿ ವಿವೇಕಾನಂದ ಬ್ರಾಂಚ್ ನ ಭಾರತ್ ವಿಕಾಸ ಪರಿಷತ್ ನ ಉಪಾಧ್ಯಕ್ಷರು, ಆರ್ ಎಸ್ ಎಸ್ ಕಮ್ಯುನಿಟಿ ಟಾಲಿ ಸದಸ್ಯರು, ಸೇವಾ ಭಾರತಿ ಉನ್ನತಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸುತ್ತಿರುವ ಕೆ. ಬಿ. ಕೊಟ್ರೇಶ್ ಅವರು, ಉಚಿತ ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ನೆರವು ನೀಡುವ ಕೆಲಸವನ್ನೂ ಮಾಡಿದ್ದಾರೆ. ಎ. ಕೆ. ಫೌಂಡೇಶನ್ ಸಂಸ್ಥಾಪಕರಾಗಿರುವ ಅವರು, ಬಡವರಿಗೆ ಆರ್ಥಿಕ ಸಹಾಯ, ಆರೋಗ್ಯ ಶಿಬಿರಗಳನ್ನು ಏರ್ಪಡಿಸಿದ್ದಾರೆ. ದಾವಣಗೆರೆ ನಗರದಲ್ಲಿ ಶಿವಸಂಚಾರ ನಾಟಕ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು, ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಬಡವರು, ಅಶಕ್ತರು, ಹಿಂದುಳಿದ ವರ್ಗದವರೂ ಸೇರಿದಂತೆ ಜಾತಿ ಬೇಧ, ಧರ್ಮ ಬೇಧ ಮರೆತು ಎಲ್ಲರಿಗೂ ಸಹಾಯ ಮಾಡುವ ಹೃದಯವಂತಿಕೆ ಹೊಂದಿದ್ದಾರೆ.
ಏನೆಲ್ಲಾ ಕನಸುಗಳಿವೆ…?
- ಜಿಲ್ಲೆ ರೈತರ ಅಭಿವೃದ್ಧಿಗೆ ನೀರಾವರಿ ಯೋಜನೆಗಳಿ ವಿಸ್ತರಣೆಗೆ ಆದ್ಯತೆ
- ಕೃಷಿ ಮತ್ತು ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕ ಬೆಂಬಲ
- ಕೌಶಲ್ಯಯುಕ್ತ ಶೈಕ್ಷಣಿಕ ತರಬೇತಿಗೆ ನಾಂದಿ
- ಯುವ ಜನತೆಗೆ ತರಬೇತಿ ನೀಡಿ ಉದ್ಯೋಗದ ಕಡೆ ದಿಟ್ಟ ಹೆಜ್ಜೆ ಇಡಲು ಪ್ರೋತ್ಸಾಹ
- ಜಿಲ್ಲೆಯ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಮೊದಲ ಆದ್ಯತೆ
- ಸರ್ಕಾರಿ ವಲಯಗಳಲ್ಲಿ ದೆಹಲಿಯ ಏಮ್ಸ್ ಮಾದರಿ ಅತ್ಯಾಧುನಿಕ ಸುಸಜ್ಜಿತ ಆಸ್ಪತ್ರೆ ನಿರ್ಮಾಣ
- ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಐಐಟಿ ಸ್ಥಾಪನೆಗೆ ಪ್ರಯತ್ನ
- ಜಿಲ್ಲೆ ಎಲ್ಲಾ ಹಳ್ಳಿಗಳಿಗೂ ಶುದ್ಧ ಕುಡಿಯುವ ನೀರು ಮತ್ತು ಸಾರಿಗೆ ವ್ಯವಸ್ಥೆ ಕಲ್ಪಿಸುವುದು
- ಸಣ್ಣ ಕೈಗಾರಿಕೆಗಳ ಸ್ಥಾಪನೆ ಮತ್ತು ಅಭಿವೃದ್ಧಿಗೆ ಒತ್ತು ನೀಡುವುದು
- ಮಧ್ಯ ಕರ್ನಾಟಕದಲ್ಲಿ ಐಟಿ, ಬಿಟಿ ಮತ್ತು ಮಲ್ಟಿ ನ್ಯಾಷನಲ್ ಕಂಪೆನಿಗಳ ಸ್ಥಾಪನೆಗೆ ಕ್ರಮ ವಹಿಸುವುದು
- ಗ್ರಾಮೀಣ ಅಭಿವೃದ್ಧಿ ಯೋಜನೆಗಳ ಸಮರ್ಪಕ ನಿರ್ವಹಣೆ
- ಸರ್ಕಾರಿ ಶಾಲಾ ಕಾಲೇಜುಗಳ ಉನ್ನತೀಕರಣಕ್ಕೆ ಹೊಸ ಯೋಜನೆ ರೂಪಿಸುವುದು
- ಮಹಿಳಾ ಸ್ವ ಸಹಾಯ ಸಂಘಗಳಿಗೆ ಸಾಲ ಸೌಲಭ್ಯದ ಮೂಲಕ ಕಿರು ಉದ್ಯಮಕ್ಕೆ ಬೆಂಬಲ ನೀಡುವುದು
- ಪ್ರತಿ ಉದ್ಯಮಿಗೆ ಸ್ಥಳೀಯವಾಗಿ ಮಾರುಕಟ್ಟೆ ಸೌಲಭ್ಯ ಕಲ್ಪಿಸುವುದು
- ಸಂಘಟಿತ, ಅಸಂಘಟಿತ ಕಾರ್ಮಿಕರ ಶ್ರೇಯೋಭಿವೃದ್ಧಝಿಗೆ ವಿಶೇಷ ಯೋಜನೆ ರೂಪಿಸುವುದು.
ಹೀಗೆ ಹತ್ತು ಹಲವು ಕನಸುಗಳನ್ನು ಕಂಡಿರುವ ಕೊಟ್ರೇಶ್ ಅವರು ನರೇಂದ್ರ ಮೋದಿ ಅವರ ಕಾರ್ಯವೈಖರಿ, ಮಾಡಿರುವ ಅಭಿವೃದ್ಧಿ ಕೆಲಸಗಳೇ ನಮಗೆ ಶ್ರೀರಕ್ಷೆ. ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಮೋದಿ ಅವರು ವಿಶ್ವ ಮೆಚ್ಚಿದ ನಾಯಕ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
ಕೇಂದ್ರ ಸರ್ಕಾರದ ಯೋಜನೆಗಳು ಜನರನ್ನು ಮುಟ್ಟುತ್ತಿವೆ. ದೇಶ ಸುರಕ್ಷಿತವಾಗಿರಬೇಕಾದರೆ ಮತ್ತೆ ಮೋದಿ ಅವರು ಮೂರನೇ ಬಾರಿ ಪ್ರಧಾನಿ ಆಗಬೇಕು. ನಿಮ್ಮ ಒಂದು ಮತ ಹಲವು ಸೌಲಭ್ಯ ಎಂಬ ಧ್ಯೇಯವಾಕ್ಯದೊಂದಿಗೆ ಮುನ್ನಡೆಯುತ್ತಿರುವ ಕೆ. ಬಿ. ಕೊಟ್ರೇಶ್ ಅವರು ಬಿಜೆಪಿಯಲ್ಲಿ ಸದ್ಯಕ್ಕೆ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದಾರೆ.